ಚೆನ್ನೈ: ಕೇಂದ್ರ ಸರ್ಕಾರ ಪ್ರಸ್ತಾವಿಸಿರುವ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ವಿರೋಧಿಸಿ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಶನಿವಾರ ವಿಪಕ್ಷಗಳ ಆಡಳಿತದ ರಾಜ್ಯಗಳ ನಾಯಕರ ಬೃಹತ್ ಸಭೆ ಆಯೋಜಿಸಿದೆ. ಕೇಂದ್ರದ ವಿರುದ್ಧ ಸಮರಕ್ಕೆ ಕೈಜೋಡಿಸುವಂತೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಪಂಜಾಬ್ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದರು.
ಶನಿವಾರದ ಸಭೆಯಲ್ಲಿ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಪಂಜಾನ್ ಮುಖ್ಯಮಂತ್ರಿ ಭಗವಂತ್ ಮಾನ್ ಸೇರಿದಂತೆ ಹಲವು ನಾಯಕರು ಸಭೆಯಲ್ಲಿ ಭಾಗವಹಿಸಲಿದ್ದಾರೆ. ಹಿಂದಿ ಹೇರಿಕೆ, ಕ್ಷೇತ್ರ ಮರುವಿಂಗಡಣೆ ಸೇರಿದಂತೆ ಕೇಂದ್ರ ಸರ್ಕಾರದ ವಿರುದ್ಧ ಹಲವು ವಿಚಾರಗಳ ಕುರಿತು ಚರ್ಚೆಯಾಗುವ ನಿರೀಕ್ಷೆ ಇದೆ.
ಸಭೆಯ ಕುರಿತು ಮಾತನಾಡಿದ ಸಿಎಂ ಎಂ.ಕೆ. ಸ್ಟಾಲಿನ್ ‘ಕ್ಷೇತ್ರ ಮರುವಿಂಗಡಣೆ ವಿರೋಧಿಸಿ ತಮಿಳುನಾಡು ಪ್ರಾರಂಭಿಸಿದ ಉಪಕ್ರಮವು ಈಗ ರಾಷ್ಟ್ರೀಯ ಚಳವಳಿಯಾಗಿ ಬೆಳೆದಿದೆ. ಕ್ಷೇತ್ರ ಮರುವಿಂಗಡಣೆಯಿಂದಾಗಿ ತಮಿಳುನಾಡು ಮತ್ತು ಇತರ ರಾಜ್ಯಗಳು ಸಂಸತ್ತಿನಲ್ಲಿ ಪ್ರಾತಿನಿಧ್ಯವನ್ನು ಕಳೆದುಕೊಂಡರೆ, ಅದು ಒಕ್ಕೂಟ ವ್ಯವಸ್ಥೆಯ ಅಡಿಪಾಯವನ್ನೇ ಹಾಳು ಮಾಡುತ್ತದೆ. ಪ್ರಜಾಪ್ರಭುತ್ವವನ್ನು ಸವೆಸುತ್ತದೆ ಮತ್ತು ಹಕ್ಕುಗಳ ರಾಜಿಗೆ ಕಾರಣವಾಗುತ್ತದೆ. ಇದು ಕೇವಲ ಸಭೆಯಲ್ಲ, ದೇಶದ ಭವಿಷ್ಯವನ್ನು ರೂಪಿಸುವ ಚಳವಳಿಯ ಆರಂಭ’ ಎಂದಿದ್ದಾರೆ.
ಸಭೆಯನ್ನು ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ. ಅಣ್ಣಾಮಲೈ ಟೀಕಿಸಿದ್ದು, ‘ಈ ಸಭೆ ಭ್ರಮೆಯ ನಾಟಕ. ಉತ್ತರ ಭಾರತದ ನಮ್ಮ ಸಹೋದರ ಸಹೋದರಿಯರನ್ನು ಅವಮಾನಿಸಲು ಡಿಎಂಕೆ ಸಚಿವರು ಕೈಗೊಂಡ ಸಾಮೂಹಿಕ ನಿರ್ಧಾರ’ ಎಂದಿದ್ದಾರೆ.
ಭ್ರಷ್ಟಾಚಾರ ಮುಚ್ಚಿಡಲು ತಮಿಳ್ನಾಡಿಂದ ಹಿಂದಿ ಹೇರಿಕೆ ಆರೋಪ: ಶಾನವದೆಹಲಿ: ಭಾಷಾ ವಿಚಾರವಾಗಿ ತಮಿಳುನಾಡು ಸರ್ಕಾರ ಮತ್ತು ಕೇಂದ್ರ ಸರ್ಕಾರದ ಮಧ್ಯೆ ಸಮರ ನಡೆಯುತ್ತಿರುವ ನಡುವೆಯೇ, ತಮ್ಮ ಭ್ರಷ್ಟಾಚಾರ ಮುಚ್ಚಿಡುವ ಮತ್ತು ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಕೆಲವೊಂದು ರಾಜ್ಯಗಳು ಹಿಂದಿ ಹೇರಿಕೆಯ ಆರೋಪ ಮಾಡುತ್ತಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಪಿಸಿದ್ದಾರೆ.
ಗುರುವಾರ ರಾಜ್ಯಸಭೆಯಲ್ಲಿ ಮಾತನಾಡಿದ ಶಾ, ‘ನರೇಂದ್ರ ಮೋದಿ ಸರ್ಕಾರ ಎಲ್ಲಾ ಭಾಷೆಗಳನ್ನೂ ಗೌರವಿಸುತ್ತದೆ. ಈ ಕಾರಣಕ್ಕಾಗಿಯೇ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಶಿಕ್ಷಣವನ್ನು ಪ್ರಾದೇಶಿಕ ಭಾಷೆಯಲ್ಲೂ ನೀಡುವ ಯೋಜನೆಯನ್ನು ನಾವು ಆರಂಭಿಸಿದೆವು. ಆದರೆ ತಮಿಳುನಾಡು ಸರ್ಕಾರ ಮಾತ್ರ ಇದುವರೆಗೂ ತಮಿಳಿನಲ್ಲಿ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಶಿಕ್ಷಣ ನೀಡಲು ಮುಂದಾಗಿಲ್ಲ. ಕಾರಣ, ಇದು ಅವರ ಆರ್ಥಿಕ ಹಿತಾಸಕ್ತಿಗೆ ಹೊಡೆತ ನೀಡುತ್ತದೆ’ ಎಂದು ಕಿಡಿಕಾರಿದರು. ಜೊತೆಗೆ ಕೇಂದ್ರ ಸರ್ಕಾರ ದಕ್ಷಿಣದ ರಾಜ್ಯಗಳನ್ನು ಕಡೆಗಣಿಸುತ್ತಿದೆ ಎಂಬ ಅರೋಪ ಸುಳ್ಳು. ನಾನು ಗುಜರಾತ್‌ನಿಂದ ಬಂದವನು. ನಿರ್ಮಲಾ ಸೀತಾರಾಮನ್ ತಮಿಳುನಾಡಿನವರು. ನಾವು ಹಿಂದಿ ಹೇರಿಕೆ ಮಾಡುತ್ತಿಲ್ಲ. ಹಿಂದಿ ಎಲ್ಲಾ ಭಾಷೆಗಳ ಮಿತ್ರ ಹೊರತು ವೈರಿಯಲ್ಲ. ಈ ಹಿಂದೆ ಭಾಷಾ ವಿಚಾರವಾಗಿ ಸಾಕಷ್ಟು ಒಡಕುಗಳು ಸಂಭವಿಸಿದೆ. ಮತ್ತೆ ಅದು ಪುನರಾವರ್ತಿಸಬಾರದು ಎಂದು ಹೇಳಿದರು.