ನಾಗರಕೋಯಿಲ್ (ತಮಿಳುನಾಡು): ಡಿಎಂಕೆ ಪಕ್ಷ ಸನಾತನ ಧರ್ಮಕ್ಕೆ ಅವಮಾನ ಮಾಡುವುದರ ಮೂಲಕ ಕೋಟ್ಯಂತರ ಜನರ ಭಾವನೆಗಳಿಗೆ ಧಕ್ಕೆ ಮಾಡಿದೆ ಎಂದು ಕೇಂದ್ರ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ.
ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ರೋಡ್ ಶೋ ವೇಳೆ ಮಾತನಾಡಿದ ಅವರು,‘ಡಿಎಂಕೆ ಸನಾತನ ಧರ್ಮವನ್ನು ಅವಮಾನಿಸುವುದನ್ನು ಅಭ್ಯಾಸ ಮಾಡಿಕೊಂಡು ಬಂದಿದೆ. ಈ ಪಕ್ಷ ರಾಮ ಮಂದಿರ ಪ್ರತಿಷ್ಠಾಪನೆ ವೇಳೆಯೂ ಕೊಂಕು ಮಾತುಗಳನ್ನು ಆಡಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಎಲ್ಲರನ್ನು ಒಳಗೊಂಡು ಅಭಿವೃದ್ಧಿ ಮಾಡಲಾಗುತ್ತಿದೆ. ಹೀಗಾಗಿ ತಮಿಳುನಾಡಿನ ಜನರು ಸಹ ‘ಅಬ್ ಕಿ ಬಾರ್ ಚಾರ್ ಸೌ ಪಾರ್’ ಎಂಬ ಘೋಷಣೆ ಕೂಗುತ್ತಿದ್ದಾರೆ’ ಎಂದರು.
ಇದೇ ವೇಳೆ ಕನ್ಯಾಕುಮಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪೊನ್ ರಾಧಾಕೃಷ್ಣನ್ ಹಾಗೂ ವಿಲವಂಕೋಡಿ ಉಪ ಚುನಾವಣೆಯ ಬಿಜೆಪಿ ಅಭ್ಯರ್ಥಿ ವಿ.ಎಸ್.ನಂದಿನಿ ಅವರ ಪರ ಮತಯಾಚನೆ ನಡೆಸಿದರು.