ಮಸೂದೆಗಳಿಗೆ ಒಪ್ಪಿಗೆ ನೀಡಲು ರಾಷ್ಟ್ರಪತಿಗಳಿಗೆ ಕಾಲಮಿತಿ ನಿಗದಿಪಡಿಸಿದ ಕುರಿತ ಧನಕರ್‌ ಹೇಳಿಕೆಗೆ ವಿಪಕ್ಷ ಆಕ್ಷೇಪ

KannadaprabhaNewsNetwork |  
Published : Apr 19, 2025, 12:50 AM ISTUpdated : Apr 19, 2025, 06:03 AM IST
ಧನಕರ್ | Kannada Prabha

ಸಾರಾಂಶ

ರಾಜ್ಯದ ಮಸೂದೆಗಳಿಗೆ ಒಪ್ಪಿಗೆ ನೀಡಲು ರಾಷ್ಟ್ರಪತಿಗಳಿಗೆ ಕಾಲಮಿತಿ ನಿಗದಿಪಡಿಸಿದ ಸುಪ್ರೀಂ ಕೋರ್ಟ್‌ ತೀರ್ಪಿಗೆ ಆಕ್ಷೇಪ ವ್ಯಕ್ತಪಡಿಸಿದ ಉಪರಾಷ್ಟ್ರಪತಿ ಜಗದೀಪ್ ಧನಕರ್ ವಿರುದ್ಧ ಕಾಂಗ್ರೆಸ್, ಡಿಎಂಕೆ ಸೇರಿದಂತೆ ವಿಪಕ್ಷಗಳು ಮುಗಿಬಿದ್ದಿವೆ.

 ಚೆನ್ನೈ: ರಾಜ್ಯದ ಮಸೂದೆಗಳಿಗೆ ಒಪ್ಪಿಗೆ ನೀಡಲು ರಾಷ್ಟ್ರಪತಿಗಳಿಗೆ ಕಾಲಮಿತಿ ನಿಗದಿಪಡಿಸಿದ ಸುಪ್ರೀಂ ಕೋರ್ಟ್‌ ತೀರ್ಪಿಗೆ ಆಕ್ಷೇಪ ವ್ಯಕ್ತಪಡಿಸಿದ ಉಪರಾಷ್ಟ್ರಪತಿ ಜಗದೀಪ್ ಧನಕರ್ ವಿರುದ್ಧ ಕಾಂಗ್ರೆಸ್, ಡಿಎಂಕೆ ಸೇರಿದಂತೆ ವಿಪಕ್ಷಗಳು ಮುಗಿಬಿದ್ದಿವೆ.

ಅವರ ಹೇಳಿಕೆಯನ್ನು ಖಂಡಿಸಿರುವ ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್, ‘ರಾಜ್ಯಸಭಾಧ್ಯಕ್ಷರಾಗಿ ರಾಜಕೀಯ ಮಾತನಾಡುವ ಮತ್ತು ಸುಪ್ರೀಂ ಕೋರ್ಟ್ ತೀರ್ಪನ್ನೇ ಅಸಾಂವಿಧಾನಿಕ ಎನ್ನುವ ವ್ಯಕ್ತಿಯನ್ನು ಇದೇ ಮೊದಲ ಬಾರಿಗೆ ನೋಡುತ್ತಿದ್ದೇನೆ. ರಾಜ್ಯಸಭಾ ಅಧ್ಯಕ್ಷರು ಒಂದು ಪಕ್ಷದ ವಕ್ತಾರರಾಗಬಾರದು’ ಎಂದಿದ್ದಾರೆ.

‘ಉಪರಾಷ್ಟ್ರಪತಿಗಳ ಜ್ಞಾನ ಮತ್ತು ವಾಕ್ಚಾತುರ್ಯದ ಕುರಿತು ಅಪಾರ ಗೌರವವಿದೆ. ಆದರೆ ಅವರ ಈ ಹೇಳಿಕೆಯನ್ನು ಒಪ್ಪಲು ಸಾಧ್ಯವಿಲ್ಲ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ ಸಿಂಗ್ ಸುರ್ಜೇವಾಲ ಪ್ರತಿಕ್ರಿಯಿಸಿದ್ದಾರೆ.

ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಸಹ ಧನಕರ್ ಅವರ ಹೇಳಿಕೆಯನ್ನು ಖಂಡಿಸಿದೆ. ‘ಸುಪ್ರೀಂ ತೀರ್ಪಿನ ವಿರುದ್ಧ ಧನಕರ್ ಅವರ ಅಭಿಪ್ರಾಯಗಳು ಅನೈತಿಕವಾಗಿವೆ. ಭಾರತದ ಒಕ್ಕೂಟ ವ್ಯವಸ್ಥೆಯಲ್ಲಿ ಕಾನೂನಿನ ನಿಯಮವೇ ಮೇಲು. ಸಂವಿಧಾನವೇ ಸರ್ವೋಚ್ಚ ಎಂಬುದನ್ನು ಮರೆಯಬಾರದು’ ಎಂದು ಡಿಎಂಕೆ ಉಪಪ್ರಧಾನ ಕಾರ್ಯದರ್ಶಿ ತಿರುಚಿ ಶಿವ ಹೇಳಿದ್ದಾರೆ.

‘ಪ್ರಜಾತಾಂತ್ರಿಕ ಶಕ್ತಿಗಳನ್ನು ಗುರಿಯಾಗಿಸಿಕೊಂಡು ಸುಪ್ರೀಂ ಕೋರ್ಟ್ ಅಣ್ವಸ್ತ್ರ ಕ್ಷಿಪಣಿ ಪ್ರಯೋಗಿಸುವಂತಿಲ್ಲ’ ಎಂದು ಧನಕರ್ ಸುಪ್ರೀಂ ಕೋರ್ಟನ್ನು ಕಟು ಶಬ್ದಗಳಲ್ಲಿ ಟೀಕಿಸಿದ್ದರು.

ಧನಕರ್ ಹೇಳಿಕೆಗೆ ವಕೀಲ ಜೇಠ್ಮಲಾನಿ ಬೆಂಬಲ 

ನವದೆಹಲಿ: ಸುಪ್ರೀಂ ಕೋರ್ಟ್ ಕುರಿತ ಉಪರಾಷ್ಟ್ರಪತಿ ಜಗದೀಪ್ ಧನಕರ್ ಅವರ ಹೇಳಿಕೆಗೆ ವಿಪಕ್ಷಗಳಿಂದ ಆಕ್ಷೇಪ ವ್ಯಕ್ತವಾಗುತ್ತಿರುವ ನಡುವೆ, ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯವಾದಿ ಮಹೇಶ್ ಜೇಠ್ಮಲಾನಿ ಹೇಳಿಕೆಯನ್ನು ಬೆಂಬಲಿಸಿದ್ದಾರೆ.‘ಸಂವಿಧಾನವನ್ನು ಎತ್ತಿಹಿಡಿಯುವುದು ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಗಳ ಕರ್ತವ್ಯ. ಇತ್ತೀಚಿನ ಕೆಲವು ಗಂಭೀರ ಸಮಸ್ಯೆಗಳು ಭಾರತೀಯ ನ್ಯಾಯಾಂಗದಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆಯ ಕೊರತೆಯಿದೆ ಎಂಬ ಸಾರ್ವಜನಿಕ ಗ್ರಹಿಕೆಯನ್ನು ಸೃಷ್ಟಿಸಿವೆ. ನ್ಯಾ. ವರ್ಮಾ ಪ್ರಕರಣ ಇದಕ್ಕೆ ಸಾಕ್ಷಿಯಾಗಿದೆ. ಸಾರ್ವಜನಿಕ ಗ್ರಹಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಫಲಿಸುತ್ತದೆ. ನ್ಯಾ. ವರ್ಮಾ ಪ್ರಕರಣ ಜನರಿಗೆ ಇಷ್ಟವಾಗಲಿಲ್ಲ. ಹಾಗಾಗಿ ಅದು ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತವಾಯಿತು. ನ್ಯಾಯಾಂಗ ತನ್ನ ಕಾರ್ಯವ್ಯಾಪ್ತಿ ಮೀರಿ ಹೋಗುತ್ತಿದೆ ಎಂಬ ಸಾರ್ವಜನಿಕ ಗ್ರಹಿಕೆ ಹೆಚ್ಚುತ್ತಿರುವ ದಿನಗಳಲ್ಲಿ, ಧನಕರ್ ಅವರು ಸಾಂವಿಧಾನಿಕ ದೋಷವನ್ನು ಎತ್ತಿ ತೋರಿಸಿದ್ದಾರಷ್ಟೆ’ ಎಂದಿದ್ದಾರೆ.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !