ಪಕ್ಷದ ನಾಯಕರ ಮೇಲೆ ಖರ್ಗೆ,ರಾಹುಲ್‌ಗೆ ಹಿಡಿತ ಇಲ್ವಾ? : ಬಿಜೆಪಿ

KannadaprabhaNewsNetwork |  
Published : Apr 28, 2025, 11:49 PM ISTUpdated : Apr 29, 2025, 07:19 AM IST
ಬಿಜೆಪಿ | Kannada Prabha

ಸಾರಾಂಶ

ಪಹಲ್ಗಾಂನಲ್ಲಿ 26 ಅಮಾಯಕ ಪ್ರವಾಸಿಗರ ಹತ್ಯೆ ಕುರಿತು ಕಾಂಗ್ರೆಸ್‌ ನಾಯಕರು ನೀಡಿರುವ ವಿವಾದಾತ್ಮಕ ಹೇಳಿಕೆಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ 

ನವದೆಹಲಿ: ಪಹಲ್ಗಾಂನಲ್ಲಿ 26 ಅಮಾಯಕ ಪ್ರವಾಸಿಗರ ಹತ್ಯೆ ಕುರಿತು ಕಾಂಗ್ರೆಸ್‌ ನಾಯಕರು ನೀಡಿರುವ ವಿವಾದಾತ್ಮಕ ಹೇಳಿಕೆಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ, ತಮ್ಮ ಪಕ್ಷದ ನಾಯಕರ ಮೇಲೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿಗೆ ಹಿಡಿತ ಇಲ್ಲವೇ ಎಂದು ಪ್ರಶ್ನಿಸಿದೆ.

 ಕರ್ನಾಟಕ ಮುಖ್ಯಮಂತ್ರಿ ಸಿದ್ಧರಾಮಯ್ಯ, ಮಹಾ ಸಿಎಂ ವಿಜಯ್ ವಡೆಟ್ಟಿವಾರ್‌, ತಿಮ್ಮಾಪೂರ್‌ ಸೇರಿದಂತೆ ಕೆಲ ನಾಯಕರು ನೀಡಿರುವ ಹೇಳಿಕೆಗಳು ಪಾಕಿಸ್ತಾನದ ಭಾಷೆಯಲ್ಲಿದೆ. ಇವರ ಮಾತುಗಳನ್ನು ಉಲ್ಲೇಖಿಸಿ ಪಾಕಿಸ್ತಾನ ಭಾರತದ ವಿರುದ್ಧ ದೂಷಣೆ ಮಾಡುತ್ತಿದೆ ಎಂದು ಕಿಡಿಕಾರಿದೆ.

ಪಹಲ್ಗಾಂ ವಿಷಯದಲ್ಲಿ ಪಕ್ಷದ ನಿಲುವು ಪಾಲಿಸಿ, ಇಲ್ಲ ಸುಮ್ಮನಿರಿ: ಕಾಂಗ್ರೆಸ್‌

ನವದೆಹಲಿ: ಪಹಲ್ಗಾಂ ದಾಳಿ ಕುರಿತಂತೆ ಪಕ್ಷದ ಕೆಲ ನಾಯಕರು ನೀಡಿರುವ ಹೇಳಿಕೆಗಳು ವೈಯುಕ್ತಿಕವೇ ಹೊರತೂ, ಅದಕ್ಕೂ ಪಕ್ಷಕ್ಕೂ ಸಂಬಂಧ ಇಲ್ಲ ಎಂದು ಕಾಂಗ್ರೆಸ್‌ ಹೈಕಮಾಂಡ್‌ ಸ್ಪಷ್ಟಪಡಿಸಿದೆ. ಕಾಂಗ್ರೆಸ್‌ ನಾಯಕರ ಹೇಳಿಕೆಗಳು ಪಾಕಿಸ್ತಾನದ ಭಾಷೆಯಲ್ಲಿದೆ ಎಂಬ ಬಿಜೆಪಿಯ ತೀವ್ರ ಆಕ್ಷೇಪದ ನಡುವೆಯೇ ಅದು ಈ ಸ್ಪಷ್ಟನೆ ನೀಡಿದೆ.

ಜೊತೆಗೆ ಘಟನೆ ಸಂಬಂಧ ಕೇಂದ್ರ ಸರ್ಕಾರ ತೆಗೆದುಕೊಳ್ಳುವ ಯಾವುದೇ ನಿಲುವನ್ನು ಬೆಂಬಲಿಸುವುದಾಗಿ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿ ಸ್ಪಷ್ಟಪಡಿಸಿದ್ದಾರೆ. ಜೊತೆಗೆ ವಿಶೇಷ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯಲ್ಲೂ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ ಎಂದು ಹೇಳಿದೆ.ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ ಪಕ್ಷದ ವಕ್ತಾರ ಜೈರಾಂ ರಮೇಶ್‌, ‘ಪಹಲ್ಗಾಂ ದಾಳಿ ಕುರಿತು ಕಾಂಗ್ರೆಸ್‌ ನಾಯಕರು ನೀಡಿರುವ ಹೇಳಿಕೆಗಳು ವೈಯಕ್ತಿಕವಾದದ್ದೇ ಹೊರತು ಪಕ್ಷದ್ದಲ್ಲ. ಪಕ್ಷವು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಸಮ್ಮುಖದಲ್ಲಿ ಸಿಡಬ್ಲ್ಯೂಸಿ ನಡೆಸಿ ತೀರ್ಮಾನ ತೆಗೆದುಕೊಂಡಿದೆ. ಇದು ಮಾತ್ರವೇ ಪಕ್ಷದ ಅಭಿಪ್ರಾಯ. ನಾಯಕರು ಹೇಳುತ್ತಿರುವುದೆಲ್ಲಾ ಅವರ ವೈಯಕ್ತಿಕವಾಗಿದ್ದು, ಅದಕ್ಕೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ’ ಎಂದು ಹೇಳಿದ್ದಾರೆ.

ಇತ್ತೀಚೆಗೆ ಪಕ್ಷದ ನಾಯಕರಾದ ವಿಜಯ್‌ ವಡೆಟ್ಟಿವಾರ್‌, ಮಣಿಶಂಕರ್‌ ಅಯ್ಯರ್‌, ಶಶಿ ತರೂರ್‌, ತಾರಿಖ್‌ ಅಹಮದ್‌ ಖರ್ರಾ, ಸೈಫುದ್ದೀನ್‌ ಸೋಜ್‌, ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ, ತಿಮ್ಮಾಪುರ ನೀಡಿದ್ದ ಹೇಳಿಕೆಗಳು ಭಾರೀ ವಿವಾದಕ್ಕೆ ಕಾರಣವಾಗಿತ್ತು.

ಈ ಕುರಿತು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ನಾಯಕ ರವಿಶಂಕರ್‌ ಪ್ರಸಾದ್‌, ‘ಪಾಕಿಸ್ತಾನ ಜತೆಗೆ ಯುದ್ಧ ಬೇಡ, ಪಹಲ್ಗಾಂನಲ್ಲಿ ಉಗ್ರರು ಹಿಂದೂಗಳನ್ನು ಗುರಿ ಮಾಡಿ ಹತ್ಯೆ ಮಾಡಿಯೇ ಇಲ್ಲ ಎಂದು ಕಾಂಗ್ರೆಸ್‌ ನಾಯಕರು ನೀಡುತ್ತಿರುವ ಹೇಳಿಕೆ ಮುಂದಿಟ್ಟುಕೊಂಡು ಪಾಕಿಸ್ತಾನದ ಭಾರತದ ಮಾನ ಕಳೆಯಲು ಬಳಸುತ್ತಿದೆ’ ಎಂದು ಆರೋಪಿಸಿದ್ದಾರೆ.

ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪಕ್ಷದ ಮೇಲೆ ನಿಯಂತ್ರಣವೇ ಇಲ್ಲವೇ? ಅಥವಾ ಪಹಲ್ಗಾಂ ದಾಳಿ ಬಳಿಕ ತಾವು ಮಾತ್ರ ಭಾರತೀಯರೆಲ್ಲರು ಒಗ್ಗಟ್ಟು ಪ್ರದರ್ಶಿಸಬೇಕೆಂಬ ಔಪಚಾರಿಕ ಹೇಳಿಕೆ ನೀಡಿ ಪಕ್ಷದ ಉಳಿದ ನಾಯಕರು ತಮಗೆ ಬೇಕಾದಂತೆ ಮಾತನಾಡಲು ಅವಕಾಶ ನೀಡಿದ್ದಾರೆಯೇ? ಎಂದೂ ಪ್ರಶ್ನಿಸಿದ್ದಾರೆ.

ಭಯೋತ್ಪಾದನಾ ದಾಳಿ ಬಳಿಕ ಅಮೆರಿಕ, ಫ್ರಾನ್ಸ್‌, ಸೌದಿ ಅರೇಬಿಯಾ ಸೇರಿ ಇಡೀ ವಿಶ್ವವೇ ಭಾರತದ ಜತೆಗಿದ್ದರೆ ಕಾಂಗ್ರೆಸ್‌ನ ಕೆಲ ನಾಯಕರು ಮಾತ್ರ ನಾಚಿಕೆಗೇಡಿನ ಮತ್ತು ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ. ಇವರ ಹೇಳಿಕೆಗಳನ್ನು ಪಾಕಿಸ್ತಾನ ಮತ್ತು ಅಲ್ಲಿನ ಮಾಧ್ಯಮಗಳು ನಮ್ಮ ಮಾನ ಕಳೆಯುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಪಾಕಿಸ್ತಾನದ ಜತೆಗೆ ಯುದ್ಧಬೇಡ, ಭದ್ರತೆ ಬಿಗಿ ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದರೆ, ಪಹಲ್ಗಾಂನಲ್ಲಿ ಉಗ್ರರು ಹಿಂದೂಗಳನ್ನು ಗುರಿಮಾಡಿಯೇ ದಾಳಿ ನಡೆಸಿದ್ದಾರೆಂಬ ಮೃತರ ಜತೆಗಿದ್ದವರ ಹೇಳಿಕೆಯನ್ನೇ ತಿಮ್ಮಾಪುರ ಮತ್ತು ವಡ್ಡೆಟ್ಟಿವಾರ್ ಅಲ್ಲಗಳೆದಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಸ್ವಾತಂತ್ರ್ಯ ಬಳಿಕ ಮೊದಲ ಬಾರಿಪಾಕ್‌ ವಿವಿಯಲ್ಲಿ ಸಂಸ್ಕೃತ ಕಲಿಕೆ!
ಅಂಡಮಾನ್‌ ದ್ವೀಪದಲ್ಲಿ ಸಾವರ್ಕರ್ ಪ್ರತಿಮೆ ಅನಾವರಣ