ಎಟಿಎಂನಲ್ಲಿ ₹100, ₹200ನೋಟು ಖಚಿತಪಡಿಸಿ : ಬ್ಯಾಂಕ್‌ಗಳಿಗೆ ಸೂಚನೆ

KannadaprabhaNewsNetwork | Updated : Apr 29 2025, 07:23 AM IST

ಸಾರಾಂಶ

 100 ರು. ಮತ್ತು 200 ರು. ನೋಟುಗಳು ಎಟಿಎಂಗಳಲ್ಲಿ ಸಿಗುವಂತೆ ಬ್ಯಾಂಕುಗಳು ಮತ್ತು   ನೋಡಿಕೊಳ್ಳಬೇಕು ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಸೂಚನೆ ಹೊರಡಿಸಿದೆ.

ಮುಂಬೈ: ಜನರು ಹೆಚ್ಚು ಬಳಸುವ 100 ರು. ಮತ್ತು 200 ರು. ಮುಖಬೆಲೆಯ ನೋಟುಗಳು ಎಟಿಎಂಗಳಲ್ಲಿ ಸಿಗುವಂತೆ ಬ್ಯಾಂಕುಗಳು ಮತ್ತು ಎಟಿಎಂ ನಿರ್ವಹಕರು ನೋಡಿಕೊಳ್ಳಬೇಕು ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ ಸೂಚನೆ ಹೊರಡಿಸಿದೆ. ಆರ್‌ಬಿಐ ತನ್ನ ಅಧಿಸೂಚನೆಯಲ್ಲಿ, ‘2025ರ ಸೆ.30ರ ವೇಳೆಗೆ ಕನಿಷ್ಠ ಶೇ.75ರಷ್ಟು ಎಟಿಎಂಗಳು ಕನಿಷ್ಠ 1 ಕ್ಯಾಸೆಟ್‌ ₹100 ಮತ್ತು ₹200 ಮುಖಬೆಲೆಯ ನೋಟುಗಳನ್ನು ವಿತರಿಸಬೇಕು. ಮುಂದಿನ ವರ್ಷ ಮಾ.31ರ ಒಳಗೆ ಶೇ.90ಕ್ಕೆ ಏರಿಸಬೇಕು ಎಂದು ಆದೇಶಿಸಿದೆ.

ಉಕ್ರೇನ್‌ ಜೊತೆಗಿನ ಯುದ್ದಕ್ಕೆ ರಷ್ಯಾ ಮತ್ತೆ 3 ದಿನ ಕದನ ವಿರಾಮ

ಮಾಸ್ಕೋ: ಉಕ್ರೇನ್‌ ಜತೆ ಯುದ್ಧ ನಡೆಸುತ್ತಿರುವ ರಷ್ಯಾ, ಮೇ 7ರಿಂದ 10ರವರೆಗೆ ಕದನ ವಿರಾಮ ಘೋಷಿಸಿದೆ. ಮೇ ಜರ್ಮನಿಯ ನಾಝಿ ಪಡೆಗಳ ವಿರುದ್ಧ ಗೆಲುವು ಸಾಧಿಸಿದ್ದ ಸ್ಮರಣಾರ್ಥ 9ರಂದು ರಷ್ಯಾ ವಿಜಯ ದಿನ ಆಚರಿಸಲಿದೆ. ಈ ಹಿನ್ನೆಲೆಯಲ್ಲಿ ಕದನ ವಿರಾಮ ಘೋಷಿಸಿದ್ದು, ಅದನ್ನು ಪಾಲಿಸುವಂತೆ ಉಕ್ರೇನ್‌ಗೂ ಒತ್ತಾಯಿಸಿದೆ. ‘ಸಮಸ್ಯೆ ಪರಿಹರಿಸಿಕೊಳ್ಳಲು ರಷ್ಯಾ ಮತ್ತೊಮ್ಮೆ ಶಾಂತಿ ಮಾತುಕತೆಗೆ ಆಸಕ್ತಿ ತೋರಿಸಿದೆ. ಒಂದು ವೇಳೆ ಕದನವಿರಾಮ ಮುರಿದರೆ, ಸರಿಯಾಗಿ ಉತ್ತರಿಸುವುದು ರಷ್ಯಾಗೆ ತಿಳಿದಿದೆ’ ಎಂದು ಪುಟಿನ್‌ ಅಧಿಕೃತ ನಿವಾಸ ಕ್ರೆಮ್ಲಿನ್‌ ಹೇಳಿದೆ.

ಸೆನ್ಸೆಕ್ಸ್‌ ಭರ್ಜರಿ 1006 ಅಂಕ ಏರಿ 80218 ಅಂಕಗಳಲ್ಲಿ ಮುಕ್ತಾಯ

ಮುಂಬೈ: ರಿಲಯನ್ಸ್‌ ಇಂಡಸ್ಟ್ರಿ ಮತ್ತು ಖಾಸಗಿ ಬ್ಯಾಂಕುಗಳ ಷೇರು ಖರೀದಿ, ವಿದೇಶಿ ನಿಧಿಯ ಒಳ ಹರಿವು ಹಿನ್ನೆಲೆಯಲ್ಲಿ ಸೋಮವಾರ ಬಾಂಬೆ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕಗಳಾದ ಸೆನ್ಸೆಕ್ಸ್‌ ಮತ್ತು ನಿಫ್ಟಿ ಸೋಮವಾರ ಭರ್ಜರಿ ಏರಿಕೆ ಕಂಡಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಗಡಿ ಉದ್ವಿಗ್ನತೆಯಿಂದ ಎರಡು ದಿನ ಕುಸಿತ ಕಂಡಿದ್ದ ಸೆನ್ಸೆಕ್ಸ್‌ ಸೋಮವಾರ ಜಿಗಿದಿದ್ದು, ಸೆನ್ಸೆಕ್ಸ್‌ 1,006 ಅಂಕ ಹೆಚ್ಚಳದೊಂದಿಗೆ 80,218 ರಲ್ಲಿ ಅಂತ್ಯವಾಗಿದ್ದರೆ, ನಿಫ್ಟಿ 289 ಅಂಕ ಏರಿಕೆಯೊಂದಿಗೆ24,328ರಲ್ಲಿ ಮುಕ್ತಾಯಗೊಂಡಿತು. ಶುಕ್ರವಾರ ಸೆನ್ಸೆಕ್ಸ್‌ 79,212ರಲ್ಲಿ ಮುಕ್ತಾಯವಾಗಿದ್ದರೆ ನಿಫ್ಟಿ 24039ರಲ್ಲಿ ಅಂತ್ಯಗೊಂಡಿತ್ತು.

ಅಕ್ಷಯ್‌ ಹೆಸರಲ್ಲಿ ಸೇನೆಗೆ ಹಣ ಕೇಳುತ್ತಿರುವ ಸಂದೇಶ ನಕಲಿ: ಸೇನೆ ಎಚ್ಚರಿಕೆ

ನವದೆಹಲಿ: ಪಹಲ್ಗಾಂ ದಾಳಿ ಬೆನ್ನಲ್ಲೇ ಭಾರತೀಯ ಸೇನೆ ಹೆಸರಿನಲ್ಲಿ ನಕಲಿ ಸಂದೇಶಗಳು ಹಣ ಬಯಸುತ್ತಿವೆ. ಇಂಥಹ ಸಂದೇಶಗಳನ್ನು ನಂಬದಿರಿ ಎಂದು ಸೇನೆ ಎಚ್ಚರಿಸಿದೆ. ಈ ಬಗ್ಗೆ ಭಾನುವಾರ ಹೇಳಿಕೆ ಬಿಡುಗಡೆ ಮಾಡಿರುವ ಸೇನೆ,‘ ಪಹಲ್ಗಾಂ ದಾಳಿ ಬಳಿಕ ಭಾರತೀಯ ಸೈನಿಕರಿಗೆ ಸಹಾಯ ಮಾಡಲು ಮತ್ತು ಆಯುಧಗಳನ್ನು ಆಧುನಿಕರಿಸಿಕೊಳ್ಳಲು ಭಾರತೀಯ ಸೇನೆ ಧನಸಹಾಯ ಬಯಸುತ್ತಿದೆ ಎಂದು ನಟ ಅಕ್ಷಯ್‌ ಕುಮಾರ್‌ ಹೆಸರಲ್ಲಿ ವಾಟ್ಸಾಪ್‌ ಸಂದೇಶಗಳು ಹರಿದಾಡುತ್ತಿವೆ. ಇವುಗಳು ನಕಲಿಯಾಗಿದ್ದು, ಸೇನೆಯ ಅಧಿಕೃತ ಖಾತೆಗಳಲ್ಲ. ಇವುಗಳನ್ನು ಜನರು ನಂಬದಿರಿ. ಸೇನೆಯ ಅಧಿಕೃತ ಖಾತೆ ದೆಹಲಿಯ ಕೆನರಾ ಬ್ಯಾಂಕ್‌ ಮತ್ತು ಭಾರತೀಯ ಸ್ಟೇಟ್‌ ಬ್ಯಾಂಕ್‌ನಲ್ಲಿವೆ. ನಕಲಿ ವಾಟ್ಸಾಪ್ ಸಂದೇಶಗಳನ್ನು ನಂಬಿ ಹಣ ಕಳೆದುಕೊಳ್ಳದಿರಿ’ ಎಂದು ಎಚ್ಚರಿಸಿದೆ.

ಮೇ 7 ರಿಂದ ಹೊಸ ಪೋಪ್ ಆಯ್ಕೆ ಪ್ರಕ್ರಿಯೆ ಪ್ರಾರಂಭ

ವ್ಯಾಟಿಕನ್ ಸಿಟಿ: ಕ್ರೈಸ್ತರ ಪರಮೋಚ್ಚ ಗುರು ಪೋಪ್ ಫ್ರಾನ್ಸಿಸ್‌ ಅವರ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಹೊಸ ಪೋಪ್ ಆಯ್ಕೆ ಪ್ರಕ್ರಿಯೆ ಸಮಾವೇಶ ಮೇ 7 ರಿಂದ ಪ್ರಾರಂಭವಾಗಲಿದೆ. ಈ ಬಗ್ಗೆ ವ್ಯಾಟಿಕನ್ ಪ್ರಕಟಿಸಿದೆ. ಪೋಪ್ ಫ್ರಾನ್ಸಿಸ್‌ ಅಂತ್ಯಕ್ರಿಯೆ ನಂತರ ನಡೆದ ಕಾರ್ಡಿನಲ್‌ಗಳ ಅನೌಪಚಾರಿಕ ಸಭೆಯಲ್ಲಿ ಸಮಾವೇಶದ ದಿನಾಂಕ ಪ್ರಕಟವಾಗಿದೆ. ಸೋಮವಾರ ನಡೆದ ಅನೌಪಚಾರಿಕ ಸಭೆಯಲ್ಲಿ 180ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಕಾರ್ಡಿನಲ್ಸ್‌ ಕಾಲೇಜು ಎಂದು ಕರೆಯಲ್ಪಡುವ 135 ಮಂದಿಯ ಸಣ್ಣ ಗುಂಪು ಹೊಸ ಪೋಪ್ ಆಯ್ಕೆಗೆ ಮತದಾನ ಮಾಡಲಿದೆ.

Share this article