ಕಾಶ್ಮೀರಕ್ಕೆ ಬಂದ ಅತಿಥಿಗಳಿಗೆ ರಕ್ಷಣೆ ಕೊಡುವಲ್ಲಿ ನಾನು ವಿಫಲನಾಗಿದ್ದೇನೆ ನನ್ನಲ್ಲಿ ಕ್ಷಮೆ ಕೇಳಲು ಪದಗಳು ಉಳಿದಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಭಾವುಕ
ಶ್ರೀನಗರ: ಕಾಶ್ಮೀರಕ್ಕೆ ಬಂದ ಅತಿಥಿಗಳಿಗೆ ರಕ್ಷಣೆ ಕೊಡುವಲ್ಲಿ ನಾನು ವಿಫಲನಾಗಿದ್ದೇನೆ. ರಾಜ್ಯದ ಪ್ರವಾಸೋದ್ಯಮ ಸಚಿವಾಲಯದ ಜವಾಬ್ದಾರಿ ಹೊತ್ತಿರುವ ನಾನು ಮಡಿದ 26 ಜನರ ಕುಟುಂಬದ ಬಳಿ ಹೇಗೆ ಕ್ಷಮೆ ಕೇಳಲಿ? ನನ್ನಲ್ಲಿ ಕ್ಷಮೆ ಕೇಳಲು ಪದಗಳು ಉಳಿದಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ವಿಧಾನಸಭೆಯಲ್ಲಿ ಭಾವುಕರಾಗಿ ಮಾತನಾಡಿದ್ದಾರೆ.
ಪಹಲ್ಗಾಂ ದಾಳಿ ಹಿನ್ನೆಲೆ ಕರೆದ ಒಂದು ದಿನದ ವಿಶೇಷ ಅಧಿವೇಶನದಲ್ಲಿ ಮಾತನಾಡಿದ ಅವರು, ರಾಜ್ಯಕ್ಕೆ ಬರುವವರ ಸುರಕ್ಷತೆಯಲ್ಲಿ ಸೋತಿದ್ದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ.
‘ರಾಜ್ಯಕ್ಕೆ ಬರುವವರ ಸುರಕ್ಷತೆ ಜಮ್ಮು ಮತ್ತು ಕಾಶ್ಮೀರ ಸರ್ಕಾರದ ಜವಾಬ್ದಾರಿ ಮಾತ್ರ ಆಗಿರಲಿಲ್ಲ. ಅದು ಮುಖ್ಯಮತ್ರಿ ಹಾಗೂ ಪ್ರವಾಸೋದ್ಯಮ ಸಚಿವರ ಜವಾಬ್ದಾರಿಯಾಗಿತ್ತು. ಎರಡು ಪ್ರಮುಖ ಜವಾಬ್ದಾರಿ ಹೊತ್ತಿರುವ ನಾನು ಅತಿಥಿಗಳಿಗೆ ರಕ್ಷಣೆ ನೀಡಲು ವಿಫಲನಾದೆ. 26 ಕುಟುಂಬದ ಬಳಿ ಹೇಗೆ ಕ್ಷಮೆ ಕೇಳಲಿ? ಈ ಸಂದರ್ಭದಲ್ಲಿ ರಾಜ್ಯ ಸ್ಥಾನಮಾನ ಕೇಳುವುದಿಲ್ಲ’ ಎಂದಿದ್ದಾರೆ.
ಪರಿಸ್ಥಿತಿ ಕುರಿತು ಒಮರ್ ಅಬ್ದುಲ್ಲಾ ಅವರ ಜವಾಬ್ದಾರಿಯುತ ಹೇಳಿಕೆಗೆ ಪಕ್ಷಾತೀತವಾಗಿ ಮೆಚ್ಚುಗೆ ವ್ಯಕ್ತವಾಗಿದೆ.
ದಾಳಿ ಖಂಡಿಸಿ ನಿರ್ಣಯ ಅಂಗೀಕಾರ:
ಪಹಲ್ಗಾಂ ದಾಳಿಯ ಬಗ್ಗೆ ಆಘಾತ ಮತ್ತು ದುಃಖವನ್ನು ವ್ಯಕ್ತಪಡಿಸುವ ನಿರ್ಣಯವನ್ನು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಸೋಮವಾರ ಸರ್ವಾನುಮತದಿಂದ ಅಂಗೀಕರಿಸಿತು.
‘ವಿಧಾನಸಭೆಯು ನಾಗರಿಕರಿಗೆ ಶಾಂತಿ, ಅಭಿವೃದ್ಧಿ ಮತ್ತು ಸಮೃದ್ಧಿಯ ವಾತಾವರಣವನ್ನು ನಿರ್ಮಿಸಲು ಬದ್ಧವಾಗಿದೆ. ರಾಷ್ಟ್ರದ ಮತ್ತು ಜಮ್ಮು-ಕಾಶ್ಮೀರದ ಕೋಮು ಸಾಮರಸ್ಯ ಮತ್ತು ಪ್ರಗತಿಯನ್ನು ಕದಡುವವರ ದುಷ್ಟ ಯೋಜನೆಗಳನ್ನು ದೃಢನಿಶ್ಚಯದಿಂದ ಸೋಲಿಸಲಾಗುವುದು’ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.