ಬ್ಯಾಂಕ್ ಕೆಲಸ ಬಿಟ್ಟು ಆಡಿ ಕಾರಿನಲ್ಲಿ ಹಾಲು ಮಾರಾಟ!

KannadaprabhaNewsNetwork | Updated : Apr 29 2025, 07:30 AM IST

ಸಾರಾಂಶ

ಹರ್ಯಾಣದ ಫರಿದಾಬಾದ್‌ನ ಮೊಹಬ್ಬತಾಬಾದ್ ಗ್ರಾಮದ ಅಮಿತ್ ಭದಾನಾ ಎಂಬ ಯುವಕ ಬ್ಯಾಂಕ್ ಉದ್ಯೋಗ ಬಿಟ್ಟು ಆಡಿ ಕಾರಲ್ಲಿ ತೆರಳಿ ಹಾಲು ಮಾರಾಟ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

 ಫರೀದಾಬಾದ್:‌ ಹರ್ಯಾಣದ ಫರಿದಾಬಾದ್‌ನ ಮೊಹಬ್ಬತಾಬಾದ್ ಗ್ರಾಮದ ಅಮಿತ್ ಭದಾನಾ ಎಂಬ ಯುವಕ ಬ್ಯಾಂಕ್ ಉದ್ಯೋಗ ಬಿಟ್ಟು ಆಡಿ ಕಾರಲ್ಲಿ ತೆರಳಿ ಹಾಲು ಮಾರಾಟ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.ಶಿಕ್ಷಣ ಪೂರೈಸಿದ ಬಳಿಕ ಅಮಿತ್‌ಗೆ ಬ್ಯಾಂಕ್‌ನಲ್ಲಿ ಉದ್ಯೋಗ ಸಿಕ್ಕಿತ್ತು. 

ಆದರೆ ಬೈಕ್, ಕಾರುಗಳ ಮೇಲಿದ್ದ ಅತಿಯಾದ ವ್ಯಾಮೋಹದಿಂದಾಗಿ ಆ ಉದ್ಯೋಗ ತೃಪ್ತಿ ನೀಡುತ್ತಿ ರಲಿಲ್ಲ. ಹಾಗಾಗಿ ತಮ್ಮ ಪ್ಯಾಷನ್ ಅನ್ನೇ ವೃತ್ತಿಯಾಗಿಸಿಕೊಳ್ಳಬೇಕೆಂದು ನಿರ್ಧರಿಸಿದರು. ಅವರ ಕುಟುಂಬ ಅದಾಗಲೇ ಹಾಲು ವ್ಯಾಪಾರದಲ್ಲಿ ತೊಡಗಿಸಿಕೊಂಡಿತ್ತು. ಕಾರ್ ಮತ್ತು ಬೈಕ್‌ನಲ್ಲೇ ಹಾಲು ಮಾರಾಟ ಮಾಡಬೇಕೆಂದು ನಿರ್ಧರಿಸಿದ ಅವರು ಕೆಲಸ ತ್ಯಜಿಸಿ ಲಕ್ಷಾಂತರ ರು. ಮೌಲ್ಯದ ಹಾರ್ಲೆ ಡೇವಿಡ್‌ಸನ್ ಬೈಕ್‌ ಖರೀದಿಸಿದರು. 

ಅದರ ಮೂಲಕ ಹಾಲು ಮಾರತೊಡಗಿದರು. ಹಾಲು ಮಾರಾಟ ಕೈಹಿಡಿದು ಆರ್ಥಿಕವಾಗಿ ಸಬಲರಾದರು. ಕೆಲ ದಿನಗಳಲ್ಲೇ ಸುಮಾರು 1 ಕೋಟಿ ರು. ಮೌಲ್ಯದ ಆಡಿ ಕಾರು ಖರೀದಿಸಿದರು. ಈಗ ಆ ಕಾರಿನಲ್ಲೇ ಹಾಲು ಮಾರಾಟ ಮಾಡುತ್ತಿದ್ದಾರೆ.

ಒಟಿಟಿ, ಜಾಲತಾಣದಲ್ಲಿ ಅಶ್ಲೀಲ ದೃಶ್ಯ ನಿರ್ಬಂಧ: ಕೇಂದ್ರಕ್ಕೆ ಸುಪ್ರೀಂಕೋರ್ಟ್‌ ನೋಟಿಸ್‌

ನವದೆಹಲಿ: ಒಟಿಟಿ ಮತ್ತು ಸಾಮಾಜಿಕ ಜಾಲತಾಣದ ವೇದಿಕೆಗಳಲ್ಲಿ ಲೈಂಗಿಕ ಅಶ್ಲೀಲತೆಯ ಹೊಂದಿರುವ ದೃಶ್ಯಗಳನ್ನು ನಿಷೇಧಿಸುವ ಸಂಬಂಧ ಸುಪ್ರೀಂ ಕೋರ್ಟ್ ನೋಟಿಸ್ ನೀಡಿದೆ.ಆನ್‌ಲೈನ್‌ನಲ್ಲಿ ಕೆಲವು ಅಶ್ಲೀಲ ದೃಶ್ಯಗಳ ಪ್ರಸಾರ ನಿಯಂತ್ರಿಸುವ ಮತ್ತು ತಡೆಗಟ್ಟಲು ಕೇಂದ್ರಕ್ಕೆ ನಿರ್ದೇಶಿಸಬೇಕು ಎಂದು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿತ್ತು. ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರಿಂ ವಿಭಾಗೀಯ ಪೀಠ, ‘ಅಸಭ್ಯ ವಿಷಯಗಳನ್ನು ನಿಯಂತ್ರಿಸುವಂತೆ ಕಾನೂನುಗಳನ್ನು ತರುವುದು ಶಾಸಕಾಂಗ ಮತ್ತು ಕಾರ್ಯಾಂಗ. ಇದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ’ ಎಂದಿದೆ.

ಈ ನಡುವೆ ಕೇಂದ್ರ ಸರ್ಕಾರ ಇದರ ನಿಯಂತ್ರಣಕ್ಕೆ ಈಗಾಗಲೇ ಕೆಲವು ಕಾನೂನುಗಳಿದ್ದು, ಇನ್ನು ಕೆಲವು ನಿರ್ಬಂಧಗಳನ್ನು ವಿಧಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ.

ಸಂಪ್ರದಾಯ ಮುರಿದದು ಹನುಮಾನ್ ಗಡಿ ಅರ್ಚಕ

ರಾಮಮಂದಿರಕ್ಕೆ ಭೇಟಿ

ಅಯೋಧ್ಯೆ: ಅಯೋಧ್ಯೆಯ ಹನುಮಾನ್ ಗಡಿ ದೇವಸ್ಥಾನದಲ್ಲಿ ಮುಖ್ಯ ಅರ್ಚಕರು ದೇವಸ್ಥಾನ ಬಿಟ್ಟು ಹೋಗಬಾರದು ಎನ್ನುವ ನಿಯಮವನ್ನು ಅರ್ಚಕ ಮಹಂತ್ ಪ್ರೇಮ ದಾಸ್‌ ಮುರಿಯಲು ಮುಂದಾಗಿದ್ದು, ದೇವಸ್ಥಾನದಿಂದ ಹೊರ ಬಂದು ರಾಮಮಂದಿರಕ್ಕೆ ಭೇಟಿ ನೀಡಲಿದ್ದಾರೆ. 

ಹನುಮಾನ್ ಗಡಿ ದೇವಸ್ಥಾನದ ನಿಯಮಗಳ ಪ್ರಕಾರ ಗಡಿಯ ಅರ್ಚಕರು ಆವರಣದಿಂದ ಹೊರ ಹೋಗುವಂತಿಲ್ಲ. ಆದರೆ ಮಹಂತ್ ಪ್ರೇಮ್ ದಾಸ್‌ ಅವರು ಆ ನಿಮಮ ಮುರಿಯಲು ಮುಂದಾಗಿದ್ದು ಏ.30 ರಂದು ದೇವಸ್ಥಾನದಿಂದ 1.6 ಕಿ.ಮೀ ದೂರವಿರುವ ಅಯೋಧ್ಯೆಯ ರಾಮ ಮಂದಿರಕ್ಕೆ ಭೇಟಿ ನೀಡಲಿದ್ದಾರೆ. ದಾಸ್‌ ಅವರ ಕನಸಿನಲ್ಲಿ ಹನುಮಾನ್ ಕಾಣಿಸಿಕೊಂಡು ರಾಮ ಮಂದಿರಕ್ಕೆ ಭೇಟಿ ನೀಡಲು ಅಜ್ಞಾಪಿಸಿದ್ದನಂತೆ. ಈ ಹಿನ್ನೆಲೆಯಲ್ಲಿ ಸುದೀರ್ಘ ಚರ್ಚೆಯ ಬಳಿಕ ಅವರು ರಾಮ ಮಂದಿರಕ್ಕೆ ಭೇಟಿ ನೀಡಲು ನಿರ್ಧರಿಸಿದ್ದಾರೆ.

Share this article