ಅಮೆರಿಕ ಅಧ್ಯಕ್ಷ ಚುನಾವಣೆಗೂ ಮುನ್ನ ಟ್ರಂಪ್‌ಗೆ ಕೋರ್ಟ್‌ ಶಾಕ್‌

KannadaprabhaNewsNetwork |  
Published : Jun 01, 2024, 01:45 AM ISTUpdated : Jun 01, 2024, 05:10 AM IST
Donald Trump

ಸಾರಾಂಶ

ನವೆಂಬರ್‌ನಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಭೇರಿ ಬಾರಿಸಿ ಮತ್ತೊಮ್ಮೆ ಗದ್ದುಗೆ ಏರಲು ಹೋರಾಡುತ್ತಿರುವ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ನ್ಯೂಯಾರ್ಕ್‌ನ ನ್ಯಾಯಾಲಯವೊಂದು ಭರ್ಜರಿ ಆಘಾತ ನೀಡಿದೆ.

ನ್ಯೂಯಾರ್ಕ್‌: ನವೆಂಬರ್‌ನಲ್ಲಿ ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಜಯಭೇರಿ ಬಾರಿಸಿ ಮತ್ತೊಮ್ಮೆ ಗದ್ದುಗೆ ಏರಲು ಹೋರಾಡುತ್ತಿರುವ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಗೆ ನ್ಯೂಯಾರ್ಕ್‌ನ ನ್ಯಾಯಾಲಯವೊಂದು ಭರ್ಜರಿ ಆಘಾತ ನೀಡಿದೆ. 

ತಮ್ಮ ಜತೆ ಟ್ರಂಪ್‌ ಲೈಂಗಿಕ ಸಂಬಂಧ ಹೊಂದಿದ್ದರು ಎಂದು ಆರೋಪ ಮಾಡಿದ್ದ ನೀಲಿ ಚಿತ್ರ ತಾರೆಯ ಬಾಯ್ಮುಚ್ಚಿಸಲು ಹಣ ಪಾವತಿಸಿ, ಆ ಹಣಕಾಸು ವ್ಯವಹಾರವನ್ನು ಮುಚ್ಚಿಡಲು ಉದ್ಯಮಗಳ ದಾಖಲೆಗಳನ್ನೇ ತಿದ್ದಿದ ಆರೋಪ ಸಂಬಂಧ ಟ್ರಂಪ್‌ ದೋಷಿ ಎಂದು ಕೋರ್ಟ್‌ ತೀರ್ಪಿತ್ತಿದೆ. 

ತನ್ಮೂಲಕ ಕ್ರಿಮಿನಲ್‌ ಅಪರಾಧ ಪ್ರಕರಣವೊಂದರಲ್ಲಿ ದೋಷಿಯಾದ ಅಮೆರಿಕದ ಮೊದಲ ಮಾಜಿ ಅಧ್ಯಕ್ಷ ಎಂಬ ಅಪಕೀರ್ತಿಗೆ ಟ್ರಂಪ್‌ ತುತ್ತಾಗಿದ್ದಾರೆ. ತೀರ್ಪಿನಿಂದ ಅಮೆರಿಕ ಅಧ್ಯಕ್ಷೀಯ ಚುನಾವಣೆ ಸ್ಪರ್ಧೆಗೆ ಟ್ರಂಪ್‌ಗೆ ಯಾವುದೇ ಸಮಸ್ಯೆ ಇಲ್ಲವಾದರೂ, ಮತದಾರರ ಆಕ್ರೋಶ ಎದುರಿಸಬೇಕಾದ ಭೀತಿ ಇದೆ.

ಶಿಕ್ಷೆಯ ಪ್ರಮಾಣವನ್ನು ಜು.11ರಂದು ನ್ಯೂಯಾರ್ಕ್‌ ನ್ಯಾಯಾಲಯ ಪ್ರಕಟಿಸಲಿದೆ. ಅಂದು ಅವರಿಗೆ ಶಿಕ್ಷೆಯಾದರೂ, ಮೊದಲ ಬಾರಿ ಅಪರಾಧ ಎದುರಿಸುತ್ತಿರುವ ಕಾರಣ ಅವರನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಏನಿದು ಪ್ರಕರಣ?:  2016ರ ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಟ್ರಂಪ್‌ ಸ್ಪರ್ಧೆ ಮಾಡಿದ್ದರು. ನನ್ನ ಜತೆ ಟ್ರಂಪ್‌ ಲೈಂಗಿಕ ಸಂಬಂಧ ಹೊಂದಿದ್ದರು ಎಂದು ಆ ವೇಳೆ ನೀಲಿ ಚಿತ್ರ ತಾರೆ ಸ್ಟಾರ್ಮಿ ಡೇನಿಯಲ್ಸ್‌ ಹೇಳಿದ್ದು ಸಂಚಲನಕ್ಕೆ ಕಾರಣವಾಗಿತ್ತು. ಆಕೆಯ ಬಾಯಿ ಮುಚ್ಚಿಸಲು ವಕೀಲರ ಮೂಲಕ ಟ್ರಂಪ್‌ 1 ಕೋಟಿ ರು. ಹಣ ಕೊಟ್ಟಿದ್ದರು. ಆ ಹಣವನ್ನು ವಕೀಲರಿಗೆ ಮರುಪಾವತಿಸಿದ್ದರಾದರೂ, ಅದಕ್ಕೆ ಸಂಬಂಧಿಸಿದ ಉದ್ಯಮ ದಾಖಲೆಗಳನ್ನು ತಿರುಚಿದ್ದ ಆರೋಪ ಕೇಳಿಬಂದಿತ್ತು.

ಶಿಕ್ಷೆಯಾದರೂ ಟ್ರಂಪ್‌ ಅಧ್ಯಕ್ಷರಾಗಬಹುದು!

ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವವರಿಗೆ ಕನಿಷ್ಠ 35 ವರ್ಷ ವಯಸ್ಸಾಗಿರಬೇಕು, 14 ವರ್ಷಗಳಿಂದ ಅಮೆರಿಕದಲ್ಲಿ ನೆಲೆಸಿರುವ ಪ್ರಜೆಯಾಗಿರಬೇಕು ಎಂದು ಅಮೆರಿಕ ಸಂವಿಧಾನ ಹೇಳುತ್ತದೆ. ಆದರೆ ಅಪರಾಧಿ ಅಥವಾ ಜೈಲಿನಲ್ಲಿರುವ ವ್ಯಕ್ತಿ ಸ್ಪರ್ಧಿಸಬಾರದು ಎಂಬ ನಿರ್ಬಂಧವಿಲ್ಲ. ಹೀಗಾಗಿ ಟ್ರಂಪ್‌ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ಯಾವುದೇ ಸಮಸ್ಯೆ ಇಲ್ಲ. ಒಂದು ವೇಳೆ ಜೈಲಿಗೆ ಹೋದರೂ ಅವರು ಚುನಾವಣೆಗೆ ಸ್ಪರ್ಧಿಸಬಹುದಾಗಿದೆ. ಗೆದ್ದ ಮೇಲೂ ಜೈಲಿನಿಂದಲೇ ಪ್ರಮಾಣವಚನ ಸ್ವೀಕರಿಸಬಹುದಾಗಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕಾರು ಬುಕ್‌ ಮಾಡುವಾಗಲೇ ಟಿಪ್ಸ್‌ ಕೇಳುವುದಕ್ಕೆ ನಿಷೇಧ!
ರೈಲ್ವೆ ಪರಿಷ್ಕೃತ ದರ ಇಂದಿನಿಂದ ಜಾರಿಗೆ