ರಾಜಕೀಯಕ್ಕಾಗಿ ಟೀಕೆ ಬೇಡ : ವಿಪಕ್ಷಕ್ಕೆ ಮೋದಿ ಎಚ್ಚರ

Published : Mar 29, 2026, 11:35 AM IST
 PM Modi

ಸಾರಾಂಶ

‘ಪಶ್ಚಿಮ ಏಷ್ಯಾ ಸಂಘರ್ಷದಿಂದ ಉದ್ಭವಿಸಿದ ಸವಾಲುಗಳನ್ನು ಭಾರತ ಪೂರ್ಣ ಬಲದಿಂದ ಎದುರಿಸುತ್ತಿದೆ. ಇಂಥ ಸಂದರ್ಭದಲ್ಲಿ ದೇಶದ ಜನರು ತಾಳ್ಮೆ ವಹಿಸಬೇಕು. ರಾಜಕೀಯ ಪಕ್ಷಗಳು ಬೇಜವಾಬ್ದಾರಿ ಹೇಳಿಕೆ ನಿಲ್ಲಿಸಬೇಕು.

 ನೋಯ್ಡಾ :  ‘ಪಶ್ಚಿಮ ಏಷ್ಯಾ ಸಂಘರ್ಷದಿಂದ ಉದ್ಭವಿಸಿದ ಸವಾಲುಗಳನ್ನು ಭಾರತ ಪೂರ್ಣ ಬಲದಿಂದ ಎದುರಿಸುತ್ತಿದೆ. ಇಂಥ ಸಂದರ್ಭದಲ್ಲಿ ದೇಶದ ಜನರು ತಾಳ್ಮೆ ವಹಿಸಬೇಕು. ರಾಜಕೀಯ ಪಕ್ಷಗಳು ಬೇಜವಾಬ್ದಾರಿ ಹೇಳಿಕೆ ನಿಲ್ಲಿಸಬೇಕು. ದೇಶಕ್ಕೆ ಹಾನಿ ಮಾಡುವ ಹೇಳಿಕೆಗಳನ್ನು ನೀಡುವವರು ರಾಜಕೀಯ ಚರ್ಚೆಗಳಲ್ಲಿ ಕೆಲವು ‘ಅಂಕ’ ಗಳಿಸಬಹುದು, ಆದರೆ ಅಂತಹ ಕ್ರಮಗಳನ್ನು ಜನರು ಎಂದಿಗೂ ಕ್ಷಮಿಸುವುದಿಲ್ಲ’ ಎಂದು ಯುದ್ಧ ಪರಿಸ್ಥಿತಿ ನಿರ್ವಹಣೆ ಬಗ್ಗೆ ಸರ್ಕಾರವನ್ನು ಟೀಕಿಸುತ್ತಿರುವ ವಿಪಕ್ಷಗಳಿಗೆ ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದ್ದಾರೆ.

ಉತ್ತರ ಪ್ರದೇಶದ ಜೇವಾರ್‌ನಲ್ಲಿ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟಿಸಿದ ನಂತರ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ, ‘ಪಶ್ಚಿಮ ಏಷ್ಯಾದಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲ ಸಂಘರ್ಷ ಮುಂದುವರೆದಿದೆ. ಭಾರತ ಈ ಸವಾಲನ್ನು ಪೂರ್ಣ ಶಕ್ತಿಯಿಂದ ಎದುರಿಸುತ್ತಿದೆ. ದೇಶವು ತನ್ನ ನಾಗರಿಕರನ್ನು ರಕ್ಷಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ’ ಎಂದು ಪ್ರತಿಪಾದಿಸಿದರು.

‘ಭಾರತವು ಸಂಘರ್ಷ ಪೀಡಿತ ಪ್ರದೇಶಗಳಿಂದ ಕಚ್ಚಾ ತೈಲ ಮತ್ತು ಅನಿಲವನ್ನು ಅವಲಂಬಿಸಿದೆ ಎಂದು ಒತ್ತಿ ಹೇಳಿದ ಮೋದಿ, ‘ಸಾಮಾನ್ಯ ನಾಗರಿಕರು ಮತ್ತು ರೈತರ ಮೇಲೆ ಹೊರೆ ಬೀಳದಂತೆ ನೋಡಿಕೊಳ್ಳಲು ಸರ್ಕಾರ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ" ಎಂದು ಹೇಳಿದರು.

ಅಲ್ಲದೆ, ‘ವಿಕಸಿತ ಭಾರತ’ ನಿರ್ಮಿಸಲು ಹಾಗೂ ಜಾಗತಿಕ ಸವಾಲುಗಳನ್ನು ಎದುರಿಸಲು 140 ಕೋಟಿ ನಾಗರಿಕರಲ್ಲಿ ಸಾಮೂಹಿಕ ಪ್ರಯತ್ನ ಮತ್ತು ಏಕತೆಯ ಅಗತ್ಯವಿರುತ್ತದೆ ಎಂದು ಹೇಳಿದರು.

ತಾಳ್ಮೆ ಇರಲಿ, ಬೇಜವಾಬ್ದಾರಿ ಹೇಳಿಕೆ ಬೇಡ:

‘ಯುದ್ಧದ ಬಿಕ್ಕಟ್ಟನ್ನು ನಾವು ಶಾಂತವಾಗಿ, ತಾಳ್ಮೆ ಮತ್ತು ಒಗ್ಗಟ್ಟಿನಿಂದ ಎದುರಿಸಬೇಕು. ಇದು ಜಾಗತಿಕ ಬಿಕ್ಕಟ್ಟು, ಆದರೆ ನಾವು ಭಾರತದ ಹಿತಾಸಕ್ತಿಗಳಿಗೆ ಆದ್ಯತೆ ನೀಡಬೇಕು. ಅದು ನಮ್ಮ ದೊಡ್ಡ ಶಕ್ತಿ’ ಎಂದು ಅವರು ಹೇಳಿದರು.‘ಸಂಸತ್ತಿನಲ್ಲಿ ಪರಿಸ್ಥಿತಿಯ ಬಗ್ಗೆ ವಿವರವಾಗಿ ಚರ್ಚಿಸಿದ್ದೇನೆ ಮತ್ತು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ವ್ಯಾಪಕ ಮತ್ತು ತುಂಬಾ ಸಕಾರಾತ್ಮಕ ಚರ್ಚೆ ನಡೆಸಿದ್ದೇನೆ’ ಎಂದರು.

ರಾಜಕೀಯ ಪಕ್ಷಗಳು ಬೇಜವಾಬ್ದಾರಿಯುತ ಹೇಳಿಕೆ ನೀಡಬಾರದು

‘ಇಂತಹ ಸಮಯದಲ್ಲಿ ರಾಜಕೀಯ ಪಕ್ಷಗಳು ಬೇಜವಾಬ್ದಾರಿಯುತ ಹೇಳಿಕೆ ನೀಡಬಾರದು. ದೇಶಕ್ಕೆ ಹಾನಿ ಮಾಡುವ ಹೇಳಿಕೆಗಳನ್ನು ನೀಡುವವರು ರಾಜಕೀಯ ಚರ್ಚೆಗಳಲ್ಲಿ ಕೆಲವು ‘ಅಂಕ’ಗಳನ್ನು ಗಳಿಸಬಹುದು, ಆದರೆ ಅಂತಹ ಕ್ರಮಗಳನ್ನು ಜನರು ಎಂದಿಗೂ ಕ್ಷಮಿಸುವುದಿಲ್ಲ. ಕೋವಿಡ್‌-19 ಸಾಂಕ್ರಾಮಿಕ ಸಮಯದಲ್ಲಿ ಮತದಾರರು ತಪ್ಪು ಮಾಹಿತಿ ಅಭಿಯಾನಗಳನ್ನು ತಿರಸ್ಕರಿಸಿದ್ದರು’ ಎಂದು ನೆನಪಿಸಿಕೊಂಡರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ರೇಮಂಡ್ಸ್‌ ಮಾಜಿ ಮುಖ್ಯಸ್ಥ ಸಿಂಘಾನಿಯಾ ವಿಧಿವಶ
ಉಪಸಮರ ರಿಸಲ್ಟ್‌ಗೂ ಸಿಎಂಕುರ್ಚಿಗೂ ನಂಟು ಇಲ್ಲ: ಸಿದ್ದು