ಭಾರತ ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಆದ್ಯತೆ ನೀಡಿದರೆ 2047ರ ವೇಳೆಗೆ ಸೂಪರ್‌ ಪವರ್‌ ರಾಷ್ಟ್ರ: ಆತ್ರೆ

KannadaprabhaNewsNetwork | Updated : Sep 12 2024, 05:24 AM IST

ಸಾರಾಂಶ

ಭಾರತವು ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಆದ್ಯತೆ ನೀಡಿದರೆ 2047ರ ವೇಳೆಗೆ ಸೂಪರ್‌ ಪವರ್‌ ಆಗಬಹುದು ಎಂದು ಡಿಆರ್‌ಡಿಒ ಮಾಜಿ ಮುಖ್ಯಸ್ಥ ಡಾ.ವಿ.ಕೆ.ಆತ್ರೆ ಹೇಳಿದ್ದಾರೆ. ಅವರು ಕೆಎಎಎಸ್‌ ಮತ್ತು ಬೆಂಗಳೂರು ವಿವಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

 ಬೆಂಗಳೂರು :  ಭಾರತ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದರೆ 2047ರ ವೇಳೆಗೆ ಸೂಪರ್‌ ಪವರ್‌ ರಾಷ್ಟ್ರವಾಗುವಲ್ಲಿ ಯಾವುದೇ ಸಂಶಯವಿಲ್ಲ ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಮಾಜಿ ಮುಖ್ಯಸ್ಥ ಡಾ.ವಿ.ಕೆ.ಆತ್ರೆ ಹೇಳಿದ್ದಾರೆ.

ಕರ್ನಾಟಕ ಅಸೋಸಿಯೇಷನ್ ಫಾರ್ ದಿ ಅಡ್ವಾನ್ಸ್‌ಮೆಂಟ್ ಆಫ್ ಸೈನ್ಸ್(ಕೆಎಎಎಸ್‌) ಮತ್ತು ಬೆಂಗಳೂರು ವಿವಿ ವಿಜ್ಞಾನ ವೇದಿಕೆ ಸಹಯೋಗದಲ್ಲಿ ಬುಧವಾರ ಜ್ಞಾನಭಾರತಿಯ ಡಾ. ವೆಂಕಟ ಗಿರಿಗೌಡ ಸಭಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ ಕ್ಷೇತ್ರದಲ್ಲಿನ ಸಾಧನೆಗಾಗಿ ಪದ್ಮವಿಭೂಷಣ ಡಾ.ವಿ.ಕೆ ಆತ್ರೆ, ಪಿಇಎಸ್ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ.ಎಂ.ಆರ್.ದೊರೆಸ್ವಾಮಿ ಮತ್ತು ಉದ್ಯಮಿ ಎಸ್.ರುದ್ರೇಗೌಡ ಅವರಿಗೆ ಗೌರವ ಫೆಲೋಶಿಪ್ ಪ್ರದಾನ ಮಾಡಿ ಸನ್ಮಾನಿಸಲಾಯಿತು.

ಪ್ರಶಸ್ತಿ ಸ್ವೀಕರಿಸಿ ಮಾತಮಾಡಿದ ಡಾ.ಆತ್ರೆ, ಇಡೀ ವಿಶ್ವ ಭಾರತದ ನಾಯಕತ್ವವನ್ನು ಎದುರುನೋಡುತ್ತಿದೆ. ಈ ನಿಟ್ಟಿನಲ್ಲಿ ಮುಂದಿನ ಎರಡು ದಶಕಗಳು ಭಾರತಕ್ಕೆ ಅತಿ ನಿರ್ಣಾಯಕ. 2027ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗುವ ಗುರಿಯೊಂದಿಗೆ ಭಾರತ ಹೆಜ್ಜೆ ಇಡುತ್ತಿದೆ. ಇದು ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದ ಅಭಿವೃದ್ಧಿಯಿಂದ ಮಾತ್ರ ಸಾಧ್ಯ. ಈ ಹಿನ್ನೆಲೆಯಲ್ಲಿ ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೆಚ್ಚಿನ ಸಂಶೋಧನೆ, ಆವಿಷ್ಕಾರ, ಬೆಳವಣಿಗೆಗೆ ಭಾರತ ಹೆಚ್ಚಿನ ಆದ್ಯತೆ ನೀಡಬೇಕು. ಆಗ ಸೂಪರ್ ಪವರ್ ರಾಷ್ಟ್ರವಾಗುವದರಲ್ಲಿ ಯಾವ ಸಂಶಯವಿಲ್ಲ ಎಂದು ಆಶಯ ವ್ಯಕ್ತಪಡಿಸಿದರು.

ಪಿಇಎಸ್ ವಿವಿಯ ಕುಲಾಧಿಪತಿ ಡಾ.ಎಂ.ಆರ್.ದೊರೆಸ್ವಾಮಿ ಮಾತನಾಡಿ, ನಮಗೆ ಇಂದು ಸಿಕ್ಕ ಗೌರವ ಮತ್ತಷ್ಟು ಜವಾಬ್ದಾರಿ ಹೆಚ್ಚಿಸಿದೆ. ದಶಕಗಳಿಂದ ಶಿಕ್ಷಣ ಕ್ಷೇತ್ರದಲ್ಲಿನ ಬದಲಾವಣೆಗೆ ಶ್ರಮಿಸಿರುವೆ. ಸರ್ಕಾರದ ಶಿಕ್ಷಣ ಸುಧಾರಣೆಗಳ ಸಲಹೆಗಾರನಾಗಿದ್ದಾಗ ಸಾವಿರಾರು ಸರ್ಕಾರಿ ಶಾಲೆಗಳನ್ನು ಜನಪ್ರತಿನಿಧಿಗಳು, ಉದ್ಯಮಿಗಳು, ಖಾಸಗಿ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳಿಂದ ದತ್ತು ಪಡೆದು ಅಭಿವೃದ್ಧಿಪಡಿಸಲು ಶ್ರಮಿಸಿದ್ದೇನೆ. ಸ್ವತಃ ನಮ್ಮ ಪಿಇಎಸ್‌ ವಿವಿಯಿಂದಲೂ 1600 ಸರ್ಕಾರಿ ಶಾಲೆಗಳ ಮೂಲ ಸೌಕರ್ಯ ಸೇರಿ ಸಂಪೂರ್ಣ ಅಭಿವೃದ್ಧಿ ಮಾಡಿದ್ದೇವೆ ಎಂದರು.

ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟದ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ, ಕೌಶಲ್ಯ ತರಬೇತಿ, ವಿದ್ಯಾರ್ಥಿ-ಶಿಕ್ಷಕರ ಸಂಬಂಧ ಸುಧಾರಣೆಗಳಿಗೆ ಆದ್ಯತೆ ನೀಡಬೇಕು. ಸಮೃದ್ಧ, ಸದೃಡ ರಾಷ್ಟ್ರ‌ ನಿರ್ಮಾಣಕ್ಕೆ ಶಿಕ್ಷಕರ ಪಾತ್ರ ದೊಡ್ಡದು. ಆ ಶಿಕ್ಷಕರ ಪ್ರತಿನಿಧಿಯಾಗಿ ಈ ಪ್ರಶಸ್ತಿ ಸ್ವೀಕರಿಸಿರುವುದು ಸಂತಸ ತಂದಿದೆ ಎಂದರು.

ಈ ವೇಳೆ ಕುಲಪತಿ ಡಾ.ಜಯಕರ ಎಸ್ ಎಂ, ಕೆಎಎಎಸ್‌ ಅಧ್ಯಕ್ಷ ವಿಶ್ರಾಂತ ಕುಲಪತಿ ಡಾ.ಕೆ.ಸಿದ್ದಪ್ಪ, ಡಾ.ಅಶೋಕ್ ಡಿ ಹಂಜಗಿ, ಪ್ರೊ.ಬಿ.ಸಿ.ಪ್ರಭಾಕರ್, ಪ್ರೊ.ಎನ್.ನಾಗಯ್ಯ ಉಪಸ್ಥಿತರಿದ್ದರು.

Share this article