ನ್ಯೂ ಓರ್ಲೀನ್ಸ್: ಹೊಸ ವರ್ಷದ ಸಂಭ್ರಮಾಚರಣೆಯಲ್ಲಿದ್ದ ಜನಸಮೂಹದ ಮೇಲೆ ವ್ಯಕ್ತಿಯೊಬ್ಬ ಏಕಾಏಕಿ ಪಿಕಪ್ ಟ್ರಕ್ ಹರಿಸಿದ ಆಘಾತಕಾರಿ ಘಟನೆ ಅಮೆರಿಕದ ನ್ಯೂ ಓರ್ಲೀನ್ಸ್‌ನಲ್ಲಿ ಮಂಗಳವಾರ ನಡೆದಿದೆ. ಘಟನೆಯಲ್ಲಿ 10 ಜನರು ಸಾವನ್ನಪ್ಪಿ, 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಬಳಿಕ ನಡೆದ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳ ಗುಂಡಿಗೆ ದಾಳಿಕೋರ ಬಲಿಯಾಗಿದ್ದಾನೆ.
ಏನಾಯ್ತು: ಹೊಸ ವರ್ಷದ ಸಂಭ್ರಮಾಚರಣೆ ಹಿನ್ನಲೆಯಲ್ಲಿ ನಗರದ ಬೋರ್ಬನ್ ಸ್ಟ್ರೀಟ್‌ನಲ್ಲಿ ಹೆಚ್ಚಿನ ಸಂಖ್ಯೆ ಜನರು ಸೇರಿದ್ದರು. ಈ ನಡುವೆ ನಸುಕಿನ 3.15ರ ವೇಳೆಗೆ ವ್ಯಕ್ತಿಯೊಬ್ಬ ಏಕಾಏಕಿ ಅತೀ ವೇಗದಲ್ಲಿ ಪಿಕಪ್ ವಾಹವನ್ನು ಜನರ ಮೇಲೆ ಹರಿಸಿ, ಬಳಿಕ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಈ ವೇಳೆ ಸ್ಥಳದಲ್ಲೇ 10 ಜನರು ಸಾವನ್ನಪ್ಪಿದ್ದು, 30 ಜನರು ಗಾಯಗೊಂಡಿದ್ದಾರೆ.
ಭಯೋತ್ಪಾದಕ ಕೃತ್ಯ?:ಇದೊಂದು ಉಗ್ರ ಕೃತ್ಯ. ಉದ್ದೇಶ ಪೂರ್ವಕವಾಗಿಯೇ ಅಪಘಾತ ನಡೆಸಿರುವ ಸಂಶಯ ವ್ಯಕ್ತವಾಗಿದೆ ಎಂದು ನಗರದ ಮೇಯರ್ ಲಾಟೋಯಾ ಕ್ಯಾಂಟ್ರೆಲ್ ಹೇಳಿದ್ದಾರೆ. ನಗರ ಪೊಲೀಸ್ ಆಯುಕ್ತರು ಕೂಡಾ ಇದು ಉದ್ದೇಶಪೂರ್ವಕ ಘಟನೆ ಎಂದಿದ್ದಾರೆ.
ಚಾಲಕನ ಎನ್‌ಕೌಂಟರ್:ಅಪಘಾತ ಮಾಡಿ 10 ಜನರ ಸಾವಿಗೆ ಕಾರಣನಾಗಿದ್ದ ಟ್ರಕ್ ಚಾಲಕ ಪೊಲೀಸರೊಂದಿಗಿನ ಗುಂಡಿನ ಚಕಮಕಿಯಲ್ಲಿ ಸಾವನ್ನಪ್ಪಿದ್ದಾನೆ. ಟ್ರಕ್‌ನಿಂದ ಇಳಿದು ಜನರ ಗುಂಪಿನ ಮೇಳೆ ಗುಂಡು ಹಾರಿಸುತ್ತಿರುವ ಸಂದರ್ಭದಲ್ಲಿ ಆತನ ಮೇಲೆ ಪೊಲೀಸರು ಪ್ರತಿದಾಳಿ ನಡೆಸಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.