ಕೇರಳದ ನರ್ಸ್‌ ಗಲ್ಲು ಶಿಕ್ಷೆಗೆ ಯೆಮೆನ್‌ ಅಧ್ಯಕ್ಷರ ಸಮ್ಮತಿ

KannadaprabhaNewsNetwork | Published : Jan 1, 2025 12:02 AM

ಸಾರಾಂಶ

ಯೆಮನ್‌ ಪ್ರಜೆ ಹತ್ಯೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಕೇರಳ ಮೂಲದ ನರ್ಸ್‌ ನಿಮಿಷಾ ಪ್ರಿಯಾಗೆ ಗಲ್ಲು ಶಿಕ್ಷೆ ಜಾರಿ ಮಾಡಲು ಅಧ್ಯಕ್ಷ ರಶದ್‌ ಅಲ್‌ ಅಲಿಮಿ ತಮ್ಮ ಅನುಮೋದನೆ ನೀಡಿದ್ದಾರೆ.

ನವದೆಹಲಿ: ಯೆಮನ್‌ ಪ್ರಜೆ ಹತ್ಯೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಕೇರಳ ಮೂಲದ ನರ್ಸ್‌ ನಿಮಿಷಾ ಪ್ರಿಯಾಗೆ ಗಲ್ಲು ಶಿಕ್ಷೆ ಜಾರಿ ಮಾಡಲು ಅಧ್ಯಕ್ಷ ರಶದ್‌ ಅಲ್‌ ಅಲಿಮಿ ತಮ್ಮ ಅನುಮೋದನೆ ನೀಡಿದ್ದಾರೆ. ಹೀಗಾಗಿ ಆಕೆಯನ್ನು ಉಳಿಸಿಕೊಳ್ಳುವ ಆಕೆಯ ಕುಟುಂಬದ ಅಂತಿಮ ಯತ್ನ ಫಲಿಸದೇ ಹೋದಲ್ಲಿ 2017ರಿಂದಲೂ ಜೈಲು ಪಾಲಾಗಿರುವ ನಿಮಿಷಾಗೆ ಇನ್ನೊಂದು ತಿಂಗಳಲ್ಲಿ ಗಲ್ಲು ಶಿಕ್ಷೆ ಜಾರಿಯಾಗುವ ಆತಂಕ ಎದುರಾಗಿದೆ.

ಈ ನಡುವೆ ಪುತ್ರಿಯನ್ನು ಉಳಿಸಿಕೊಳ್ಳುವ ಸಲುವಾಗಿ ಮೃತ ವ್ಯಕ್ತಿಯ ಕುಟುಂಬಕ್ಕೆ ಬ್ಲಡ್‌ಮನಿ ನೀಡಿ, ಪುತ್ರಿಗೆ ಕ್ಷಮಾದಾನ ಪಡೆಯಲು ಆಕೆಯ ತಾಯಿ ತಮ್ಮ ಹೋರಾಟ ತೀವ್ರಗೊಳಿಸಿದ್ದಾರೆ. ಮತ್ತೊಂದೆಡೆ ನಿಮಿಷಾ ಪ್ರಕರಣದಲ್ಲಿ ಸಾಧ್ಯವಿರುವ ಎಲ್ಲಾ ಅವಕಾಶಗಳನ್ನು ತಾನು ಪರಿಶೀಲಿಸುತ್ತಿದ್ದು, ಆಕೆಯ ಕುಟುಂಬಕ್ಕೆ ಸಾಧ್ಯವಿರುವ ಎಲ್ಲಾ ನೆರವು ನೀಡುವುದಾಗಿ ಭಾರತ ಸರ್ಕಾರ ಭರವಸೆ ನೀಡಿದೆ.

ಏನಿದು ಪ್ರಕರಣ?:

ನಿಮಿಷಾ ಪ್ರಿಯಾ 2011ರಲ್ಲಿ ಯೆಮೆನ್‌ಗೆ ತೆರಳಿ, ಯೆಮನ್‌ ಪ್ರಜೆ ತಲಾಲ್‌ ಅಬ್ದೋ ಮಹದಿ ಜತೆಗೆ ಸೇರಿಕೊಂಡು ಸನಾದಲ್ಲಿ ಕ್ಲಿನಿಕ್‌ ತೆರೆದಿದ್ದರು. ಆರಂಭದಲ್ಲಿ ಚೆನ್ನಾಗಿದ್ದ ಮಹದಿ ಬಳಿಕ ಕಿರುಕುಳ ನೀಡಲು ಆರಂಭಿಸಿದ್ದು, ಪಾಸ್‌ಪೋರ್ಟ್‌ ಕಿತ್ತುಕೊಂಡಿದ್ದ. ನಕಲಿ ದಾಖಲೆಗಳ ಮೂಲಕ ತನ್ನನ್ನು ಪತಿ ಎಂಬಂತೆ ಬಿಂಬಿಸಿಕೊಂಡು, ಹಣವನ್ನೂ ಕಿತ್ತುಕೊಳ್ಳುತ್ತಿದ್ದ. ಇದರ ವಿರುದ್ಧ ಪೊಲೀಸರ ಮೊರೆ ಹೋದರೂ ಆಕೆಯನ್ನೇ ಅಕ್ರಮವಾಗಿ ಬಂಧಿಸಿ 6 ದಿನ ಕೂಡಿಹಾಕಲಾಗಿತ್ತು. ಇದರಿಂದ ತೀವ್ರ ನೊಂದಿದ್ದ ಆಕೆ ಜುಲೈ 2017ರಲ್ಲಿ ಮಹದಿಗೆ ನಿದ್ರೆ ಔಷಧ ನೀಡಿ ತನ್ನ ಪಾಸ್‌ಪೋರ್ಟ್‌ ವಾಪಸ್ ಪಡೆಯಲು ಪ್ರಯತ್ನಿಸಿದ್ದಳು. ಆದರೆ ಔಷಧದ ಡೋಸ್‌ ಹೆಚ್ಚಾಗಿ ಆತ ಮೃತಪಟ್ಟಿದ್ದ.

ಗಲ್ಲು ಶಿಕ್ಷೆ: ಈ ಪ್ರಕರಣದಲ್ಲಿ ನಿಮಿಷಾಗೆ ಸ್ಥಳೀಯ ಕೋರ್ಟ್‌ ಗಲ್ಲು ಶಿಕ್ಷೆ ವಿಧಿಸಿತ್ತು. ಬಳಿಕ ಸುಪ್ರೀಂಕೋರ್ಟ್‌ ಕೂಡಾ ಶಿಕ್ಷೆ ಎತ್ತಿಹಿಡಿದಿತ್ತು. ಇದೀಗ ಮರಣದಂಡನೆಗೆ ರಾಷ್ಟ್ರದ ಅಧ್ಯಕ್ಷರು ಕೂಡ ಅನುಮತಿ ನೀಡಿದ್ದಾರೆ ಎನ್ನಲಾಗಿದೆ.

ಬ್ಲಡ್‌ಮನಿ:

ಸಾವನ್ನಪ್ಪಿದ ವ್ಯಕ್ತಿಯ ಕುಟುಂಬದವರು ಕೇಳಿದಷ್ಟು ಹಣವನ್ನು ನಿಮಿಷಾ ಕುಟುಂಬ ನೀಡಿ, ದೂರು ಹಿಂಪಡೆದರೆ ನಿಮಿಷಾಗೆ ಗಲ್ಲು ಶಿಕ್ಷೆಯಿಂದ ಪಾರಾಗುವ ಅವಕಾಶ ಇದೆ. ಇದನ್ನು ಬ್ಲಡ್ ಮನಿ ಎನ್ನಲಾಗುತ್ತದೆ. ಇನ್ನು ಪ್ರಿಯಾರನ್ನು ಉಳಿಸಲು ಅಂತಾರಾಷ್ಟ್ರೀಯ ಆ್ಯಕ್ಷನ್‌ ಕೌನ್ಸಿಲ್‌ ಕ್ರೌಡ್‌ ಫಂಡಿಂಗ್‌ ಮೂಲಕ ಹಣ ಸಂಗ್ರಹಿಸಿದೆಯಾರೂ ಹಣದ ಬಳಕೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಪ್ರಶ್ನೆಗಳಿಂದಾಗಿ ಮಾತುಕತೆ ಪ್ರಕ್ರಿಯೆ ಮತ್ತಷ್ಟು ಜಟಿಲಗೊಂಡಿದೆ. ಇಷ್ಟಾದರೂ ನಾವು ಸಾಧ್ಯವಾದ ಎಲ್ಲಾ ಪ್ರಯತ್ನ ನಡೆಸುತ್ತೇವೆ ಎಂದು ವಿದೇಶಾಂಗ ಇಲಾಕೆ ತಿಳಿಸಿದೆ.

Share this article