ಅಂತಾರಾಷ್ಟ್ರೀಯ ಮಾದಕವಸ್ತು ಕಳ್ಳಸಾಗಣೆಗೆ ಸಂಬಂಧಿಸಿದ ವಿವಿಧ ಪ್ರಕರಣಗಳಿಗೆ ಸಂಬಂಧಿಸಿ ಜಾರಿ ನಿರ್ದೇಶನಾಲಯ(ಇ.ಡಿ.)ವು ಕರ್ನಾಟಕ ಸೇರಿ ದಕ್ಷಿಣದ ನಾಲ್ಕು ರಾಜ್ಯಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ, ಪರಿಶೀಲನೆ ನಡೆಸಿದೆ.
- ಕರ್ನಾಟಕದ ಕೋಲಾರ, ಮಾಲೂರು ಹೊಸಕೋಟೆಯಲ್ಲಿ ದಾಳಿ
- ಒಟ್ಟು 30 ಕಡೆ ದಾಳಿ ನಡೆಸಿ ಇ.ಡಿಯಿಂದ ಪರಿಶೀಲನೆ-
- ಅಂತಾರಾಷ್ಟ್ರೀಯ ಡ್ರಗ್ಸ್ ಸಾಗಣೆ, ಅಕ್ರಮ ಹಣ ವರ್ಗಾವಣೆ ಕೇಸ್‌ನಡಿ ದಾಳಿ
ಚೆನ್ನೈ: ಅಂತಾರಾಷ್ಟ್ರೀಯ ಮಾದಕವಸ್ತು ಕಳ್ಳಸಾಗಣೆಗೆ ಸಂಬಂಧಿಸಿದ ವಿವಿಧ ಪ್ರಕರಣಗಳಿಗೆ ಸಂಬಂಧಿಸಿ ಜಾರಿ ನಿರ್ದೇಶನಾಲಯ(ಇ.ಡಿ.)ವು ಕರ್ನಾಟಕ ಸೇರಿ ದಕ್ಷಿಣದ ನಾಲ್ಕು ರಾಜ್ಯಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ, ಪರಿಶೀಲನೆ ನಡೆಸಿದೆ.
ಕರ್ನಾಟಕ, ತಮಿಳುನಾಡು, ತೆಲಂಗಾಣ ಮತ್ತು ಕೇರಳಂನಲ್ಲಿ ಈ ದಾಳಿ ನಡೆಸಲಾಗಿದ್ದು, ಮಾದಕವಸ್ತು ಸಾಗಣೆ ಜತೆಗಿನ ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿ ಮಾಹಿತಿ ಕಲೆಹಾಕಲಾಗಿದೆ.
ಕರ್ನಾಟಕದ ಕೋಲಾರ, ಮಾಲೂರು ಮತ್ತು ಬೆಂಗಳೂರು ಉತ್ತರ ಜಿಲ್ಲೆಯ ಹೊಸಕೋಟೆ, ತಮಿಳುನಾಡಿನಲ್ಲಿ ಚೆನ್ನೈ, ತಿರುನೆಲ್ವೇಲಿ, ನಾಗಪಟ್ಟಣಂ, ವೆಲಂಕಣಿ ಮತ್ತು ರಾಮನಾಥಪುರಂ, ತೆಲಂಗಾಣದ ಶ್ರೀಲಿಂಗಂಪಲ್ಲಿ, ನಾನಾಕ್ರಂಗುಡ, ರಂಗಾರೆಡ್ಡಿ ಜಿಲ್ಲೆ, ಕೇರಳದ ಕೋಝಿಕ್ಕೋಡ್, ಕಣ್ಣೂರು, ಮಲ್ಲಪ್ಪುರಂ ಮತ್ತು ತ್ರಿಶೂರ್ ಸೇರಿ 30 ಕಡೆ ದಾಳಿ ನಡೆಸಲಾಗಿದೆ.
2022ರಿಂದೀಚೆಗೆ ಎಂಟು ರಾಜ್ಯಗಳ ಪೊಲೀಸರು ಮತ್ತು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯುರೋ(ಎನ್‌ಸಿಬಿ)ದ ಎಫ್‌ಐಆರ್‌ಗಳು ಮತ್ತು ಇದಕ್ಕೆ ಸಂಬಂಧಿಸಿದ ಚಾರ್ಜ್‌ಶೀಟ್‌ಗಳ ಆಧಾರದ ಮೇಲೆ ಕೇಂದ್ರ ಸರ್ಕಾರದ ನಶೆ ಮುಕ್ತ ಭಾರತ ಅಭಿಯಾನ ಹಾಗೂ ಕೇಂದ್ರ ಗೃಹ ಸಚಿವಾಲಯದ 2026-29ರಲ್ಲಿ ಡ್ರಗ್ಸ್ ನಿಯಂತ್ರಣಕ್ಕೆ ಸಂಬಂಧಿಸಿದ ವಿಷನ್ ಡಾಕ್ಯುಮೆಂಟ್‌ನ ಭಾಗವಾಗಿ ಈ ದಾಳಿ ನಡೆಸಲಾಗಿದೆ.
ಶ್ರೀಲಂಕಾ, ಕೆಲ ಪಶ್ಚಿಮ ಏಷ್ಯಾ ದೇಶಗಳ ಮೂಲಕ ಮೆಥಾಂಪೆಟಮೈನ್, ಗಾಂಜಾ, ಎಂಡಿಎಂಎಯಂಥ ಮಾದಕ ವಸ್ತುಗಳ ಸಾಗಣೆ ಆರೋಪಕ್ಕೆ ಸಂಬಂಧಿಸಿ ಇ.ಡಿ ತನಿಖೆ ನಡೆಸುತ್ತಿದೆ. ಈ ಕಳ್ಳಸಾಗಣೆಯಲ್ಲಿ 24ಕ್ಕೂ ಹೆಚ್ಚು ಭಾರತೀಯ ಹಾಗೂ ವಿದೇಶಿಗರ ಪಾತ್ರದ ಕುರಿತು ತನಿಖೆ ನಡೆಯುತ್ತಿದೆ.
ಕರ್ನಾಟಕದಲ್ಲಿ ಜುಲೈ, 2022ರಲ್ಲಿ ಮೃತ್ಯುಂಜಯ ಅಲಿಯಾಸ್ ಜಯಣ್ಣನಿಂದ 1 ಕಿ.ಲೋ ಹಶಿಷ್ ತೈಲವನ್ನು ವಶಕ್ಕೆ ಪಡೆದ ಪ್ರಕರಣಕ್ಕೆ ಸಂಬಂಧಿಸಿ ಈ ದಾಳಿ ನಡೆದಿದೆ.
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.