;Resize=(412,232))
ನವದೆಹಲಿ: ಪಾಕಿಸ್ತಾನ ವಿರುದ್ಧದ ಕಾರ್ಯಾಚರಣೆ ವೇಳೆ ತಮ್ಮ ಮಿಗ್-21 ಸಮೇತರಾಗಿ ಶತ್ರುರಾಷ್ಟ್ರದ ಗಡಿಯೊಳಗೆ ನುಗ್ಗಿ, ಅಮೆರಿಕ ನಿರ್ಮಿತ ಪಾಕ್ ವಿಮಾನ ಹೊಡೆದುರುಳಿಸಿದ್ದ ಭಾರತೀಯ ವಾಯುಪಡೆಯ ಮಾಜಿ ಗ್ರೂಪ್ ಕ್ಯಾಪ್ಟನ್ ಅಭಿನಂದನ್ ವರ್ಧಮಾನ್ ಇದೀಗ ಗೋವಾ ಮೂಲದ ಪ್ರಾದೇಶಿಕ ವಿಮಾನಯಾನ ಸಂಸ್ಥೆ ಎಫ್‌ಎಲ್‌ವೈ91ನ ಪೈಲಟ್ ಆಗಿ ಸೇರ್ಪಡೆಗೊಂಡಿದ್ದಾರೆ. ಸದ್ಯ ಅವರು ಗೋವಾ ಮತ್ತು ಹೈದರಾಬಾದ್ ಮಾರ್ಗದಲ್ಲಿ ಎಟಿಆರ್ ವಿಮಾನ ಸಂಚರಿಸುವ ಕುರಿತು ತರಬೇತಿಯಲ್ಲಿ ನಿರತರಾಗಿದ್ದು, ತರಬೇತಿ ಪೂರ್ಣಗೊಂಡ ಬಳಿಕ ವಿಮಾನ ಸಂಚಾರ ನಡೆಸಲಿದ್ದಾರೆ.
ಜೈಷ್-ಎ-ಮೊಹಮ್ಮದ್ ಸಂಘಟನೆ 2019ರ ಫೆ.14ರಂದು ಪುಲ್ವಾಮಾದಲ್ಲಿ ಆತ್ಮಾಹುತಿ ದಾಳಿ ನಡೆಸಿ, 40 ಸಿಆರ್‌ಪಿಎಫ್ ಯೋಧರ ಸಾವಿಗೆ ಕಾರಣವಾಗಿತ್ತು. ಇದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ ಫೆ.26ರಂದು ಸೇನೆ, ಬಾಲಾಕೋಟ್‌ನಲ್ಲಿದ್ದ ಜೈಷ್‌ನ ತರಬೇತಿ ಕೇಂದ್ರಗಳನ್ನು ಧ್ವಂಸಗೊಳಿಸಲು ಯುದ್ಧವಿಮಾನಗಳನ್ನು ಕಳಿಸಿತ್ತು.
ಮರುದಿನ ಪಾಕ್‌ನ ಯುದ್ಧವಿಮಾನಗಳು ಭಾರತದ ಗಡಿಯ ಬಳಿ ಬಂದು ಕೆಣಕುವ ಯತ್ನ ಮಾಡಿದವು. ಅವುಗಳು ಭಾರತದೊಳಗೆ ನುಗ್ಗಿ ದಾಳಿ ಮಾಡುವುದನ್ನು ತಡೆಯಲು ಹೊರಟ ಅಭಿನಂದನ್ ಇದ್ದ ಮಿಗ್-21 ಮೇಲೆ ದಾಳಿಯಾಯಿತು ಹಾಗೂ ಅವರು ಪ್ಯಾರಾಶೂಟ್ ಬಳಸಿ ಪಾರಾದರು. ಆದರೆ ಎಲ್‌ಒಸಿ ದಾಟಿ ಹೋಗಿದ್ದರಿಂದ ಪಾಕ್ ಪ್ರದೇಶದಲ್ಲಿ ಬಿದ್ದರು. ಅಲ್ಲಿ ಅವರನ್ನು ವಶಕ್ಕೆ ಪಡೆದ ಪಾಕ್ ಸೈನಿಕರು, 3 ದಿನ ಬಂಧಿಸಿಟ್ಟುಕೊಂಡಿದ್ದರು. ಭಾರತ ಸರ್ಕಾರದ ಒತ್ತಡಕ್ಕೆ ಮಣಿದು ಏ.1ರಂದು ವರ್ಧಮಾನ್‌ರನ್ನು ಅಟ್ಟಾರಿ-ವಾಘಾ ಗಡಿ ಮೂಲಕ ಭಾರತಕ್ಕೆ ಕಳಿಸಿಕೊಡಲಾಯಿತು. ಈ ಸಾಹಸಕ್ಕಾಗಿ ಅವರಿಗೆ 2021ರಲ್ಲಿ ವೀರ ಚಕ್ರ ಪ್ರಶಸ್ತಿ ಲಭಿಸಿತ್ತು.
ಅಭಿನಂದನ್ ತಮ್ಮ ಹೈಸ್ಕೂಲ್ ಮತ್ತು ಪಿಯು ಶಿಕ್ಷಣವನ್ನು ಬೆಂಗಳೂರಿನಲ್ಲೇ ಪೂರೈಸಿದ್ದರು.