;Resize=(412,232))
ಚಂಡೀಗಢ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಕಚೇರಿಯಲ್ಲೇ ಭಾರಿ ಪ್ರಮಾಣದ ಭ್ರಷ್ಟಾಚಾರ ನಡೆದಿರುವ ಆಘಾತಕಾರಿ ಸಂಗತಿ ಜಾರಿ ನಿರ್ದೇಶನಾಲಯದ (ಇ.ಡಿ.) ತನಿಖೆಯಿಂದ ಬಹಿರಂಗವಾಗಿದೆ. ಇ.ಡಿ. ಸಿದ್ಧಪಡಿಸಿರುವ ಸುಮಾರು 200 ಪುಟಗಳ ವಿಸ್ತೃತ ವರದಿಯು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ಗೆ ಸಲ್ಲಿಕೆಯಾಗಿದ್ದು, ರಾಜ್ಯದ ಆಡಳಿತಾರೂಢ ಆಮ್ ಆದ್ಮಿ ಪಕ್ಷಕ್ಕೆ ಭಾರಿ ಮುಖಭಂಗ ಉಂಟುಮಾಡಿದೆ.
ಮುಖ್ಯಮಂತ್ರಿ ಕಚೇರಿಯನ್ನೇ ಕೇಂದ್ರವಾಗಿಟ್ಟುಕೊಂಡು ಬೃಹತ್ ಭ್ರಷ್ಟಾಚಾರ ನಡೆದಿರುವುದನ್ನು ಇ.ಡಿ. ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಸರ್ಕಾರಿ ಅಧಿಕಾರಿಗಳ ವರ್ಗಾವಣೆ ಹಾಗೂ ಪೋಸ್ಟಿಂಗ್‌ಗಳಲ್ಲಿ ಲಂಚ, ಟೆಂಡರ್ ಹಂಚಿಕೆಗಳಲ್ಲಿ ಹಸ್ತಕ್ಷೇಪ ಮತ್ತು ಸರ್ಕಾರದ ಗೌಪ್ಯ ನೀತಿ ಮಾಹಿತಿಗಳು ಸೋರಿಕೆಯಾಗಿರುವ ಕುರಿತು ತನಿಖಾ ಸಂಸ್ಥೆಯು ನಿರ್ಣಾಯಕ ಸಾಕ್ಷ್ಯಗಳನ್ನು ಕಲೆಹಾಕಿದೆ. ಸರ್ಕಾರದ ಮಟ್ಟದ ವಿವಿಧ ಕೆಲಸ ಮಾಡಿಕೊಡಲು ಭಾರಿ ಪ್ರಮಾಣದ ಲಂಚದ ವ್ಯವಹಾರ ನಡೆದಿರುವುದನ್ನು ವರದಿ ಬಹಿರಂಗಪಡಿಸಿದೆ.
ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯಾಧಿಕಾರಿ (ಒಎಸ್‌ಡಿ) ರಾಜಬೀರ್ ಸಿಂಗ್ ಗುಮ್ಮನ್ ಅವರ ಆಪ್ತ ವಲಯದ ಮೂಲಕ ಈ ಅಕ್ರಮ ವ್ಯವಹಾರಗಳು ನಡೆದಿವೆ ಎಂದು ವರದಿ ತಿಳಿಸಿದೆ. ತನಿಖೆ ವೇಳೆ ವಶಪಡಿಸಿಕೊಂಡ ವಾಟ್ಸಾಪ್ ಚಾಟ್‌ಗಳು, ಕರೆ ದಾಖಲೆಗಳು ಮತ್ತು ನಗದು ವಹಿವಾಟಿನ ಸಾಕ್ಷ್ಯಗಳನ್ನು ಇ.ಡಿ. ಹೈಕೋರ್ಟ್‌ಗೆ ಸಲ್ಲಿಸಿದೆ. ನಿತಿನ್ ಗೋಯಲ್ ಎಂಬ ಮಧ್ಯವರ್ತಿಯ ಮನೆ ಮೇಲೆ ನಡೆದ ದಾಳಿಯ ವೇಳೆ ಆರೋಪಿ ಬಾಲ್ಕನಿಯಿಂದ ಎಸೆದ 21 ಲಕ್ಷ ರು. ಹಣ ಇರುವ ಚೀಲವನ್ನು ವಶಪಡಿಸಿಕೊಳ್ಳಲಾಗಿದೆ. ಈ ಗೋಯಲ್ ಹಾಗೂ ಮುಖ್ಯಮಂತ್ರಿ ಒಎಸ್‌ಡಿ ನಡುವಿನ ನಂಟು ತನಿಖೆಯಲ್ಲಿ ಮಹತ್ವದ ಪಾತ್ರ ವಹಿಸಿದೆ.
ಈ ಗಂಭೀರ ಭ್ರಷ್ಟಾಚಾರ ಜಾಲದ ಬಗ್ಗೆ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಇ.ಡಿ.ಯು ಪಂಜಾಬ್ ಪೊಲೀಸರಿಗೆ 3 ಬಾರಿ ಪತ್ರ ಬರೆದಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ವರದಿಯಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಲಾಗಿದೆ. ರಾಜ್ಯ ಪೊಲೀಸರ ಈ ಮೌನ ಹಾಗೂ ಅಸಹಕಾರ ಧೋರಣೆಯು ಇದೀಗ ನ್ಯಾಯಾಲಯದ ಮೆಟ್ಟಿಲೇರಿದ್ದು, ವಿಪಕ್ಷಗಳು ಮುಖ್ಯಮಂತ್ರಿಗಳ ರಾಜೀನಾಮೆಗೆ ತೀವ್ರವಾಗಿ ಒತ್ತಾಯಿಸುತ್ತಿವೆ.