ಕರ್ನಾಟಕಕ್ಕೂ ಬಂದ SIR ! - 16 ರಾಜ್ಯ, 3 ಕೇಂದ್ರಾಡಳಿತ ಪ್ರದೇಶದಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ

KannadaprabhaNewsNetwork |  
Published : May 15, 2026, 01:45 AM ISTUpdated : May 15, 2026, 04:35 AM IST
SIR

ಸಾರಾಂಶ

ಅನರ್ಹ ಮತದಾರರ ಹೆಸರನ್ನು ರದ್ದುಗೊಳಿಸಿ, ಮತಪಟ್ಟಿಯನ್ನು ಅತ್ಯಂತ ನಿಖರಬದ್ಧವಾಗಿ ಇಡುವ ಉದ್ದೇಶ ಹೊಂದಿರುವ ವಿಶೇಷ ಮತಪಟ್ಟಿ ಪರಿಷ್ಕರಣೆ (ಎಸ್ಐಆರ್‌)ಯನ್ನು ಕರ್ನಾಟಕ ಸೇರಿದಂತೆ 16 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಆರಂಭಿಸಲು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಿದೆ.

 ನವದೆಹಲಿ: ಅನರ್ಹ ಮತದಾರರ ಹೆಸರನ್ನು ರದ್ದುಗೊಳಿಸಿ, ಮತಪಟ್ಟಿಯನ್ನು ಅತ್ಯಂತ ನಿಖರಬದ್ಧವಾಗಿ ಇಡುವ ಉದ್ದೇಶ ಹೊಂದಿರುವ ವಿಶೇಷ ಮತಪಟ್ಟಿ ಪರಿಷ್ಕರಣೆ (ಎಸ್ಐಆರ್‌)ಯನ್ನು ಕರ್ನಾಟಕ ಸೇರಿದಂತೆ 16 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಆರಂಭಿಸಲು ಕೇಂದ್ರ ಚುನಾವಣಾ ಆಯೋಗ ನಿರ್ಧರಿಸಿದೆ.

ಮೊದಲ 2 ಸುತ್ತಿನಲ್ಲಿ ಬಿಹಾರ, ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಉತ್ತರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಗೋವಾ, ಛತ್ತೀಸ್‌ಗಢ, ಗುಜರಾತ್‌, ಅಂಡಮಾನ್‌ ಮತ್ತು ನಿಕೋಬಾರ್‌, ಲಕ್ಷದ್ವೀಪ, ಅಸ್ಸಾಂ ಮತ್ತು ಪುದುಚೇರಿಗಳಲ್ಲಿ ಪ್ರಕ್ರಿಯೆ ನಡೆಸಲಾಗಿತ್ತು. 2ನೇ ಹಂತದಲ್ಲಿ 12 ರಾಜ್ಯಗಳಲ್ಲಿ ನಡೆದ ಪರಿಷ್ಕರಣೆ ಬಳಿಕ 50.99 ಕೋಟಿ ಮತದಾರರ ಪೈಕಿ 5.18 ಕೋಟಿ ರದ್ದಾಗಿತ್ತು. ಇದಕ್ಕೆ ಅನರ್ಹ, ಡೂಪ್ಲಿಕೇಟ್‌, ವಿಳಾಸ ಬದಲು ಮೊದಲಾದವುಗಳು ಕಾರಣವಾಗಿದ್ದವು.

ಇದೀಗ 3ನೇ ಸುತ್ತಿನ ವಿಶೇಷ ಮತದಾರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಆರಂಭದ ಕುರಿತು ಕೇಂದ್ರ ಚುನಾವಣಾ ಆಯೋಗ ಗುರುವಾರ ಆದೇಶ ಹೊರಡಿಸಿದೆ. 19 ರಾಜ್ಯಗಳಲ್ಲಿ ಬೇರೆ ಬೇರೆ ದಿನಾಂಕಗಳಲ್ಲಿ ಪ್ರಕ್ರಿಯೆ ನಡೆದು ವಿವಿಧ ಹಂತದ ಪರಿಷ್ಕರಣೆ, ಪುನರ್‌ಪರಿಶೀಲನೆ ಬಳಿಕ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು. ಪರಿಷ್ಕರಣೆಗೆ ಒಳಪಡುವ 19 ರಾಜ್ಯಗಳಲ್ಲಿ ಒಟ್ಟು 36.73 ಕೋಟಿ ಮತದಾರರಿದ್ದು, ಇವರ ದಾಖಲೆಗಳನ್ನು 3.94 ಲಕ್ಷ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಮನೆಮನೆಗೆ ತೆರಳಿ ಪರಿಶೀಲನೆ ನಡೆಸಲಿದ್ದಾರೆ. ಇವರಿಗೆ ವಿವಿಧ ರಾಜಕೀಯ ಪಕ್ಷಗಳಿಂದ ನೇಮಕವಾಗುವ 3.42 ಲಕ್ಷ ಬೂತ್‌ ಮಟ್ಟದ ಏಜೆಂಟ್‌ಗಳು (ಬಿಎಲ್‌ಎ) ನೆರವಾಗಲಿದ್ದಾರೆ.3 ಕಡೆ ಮುಂದೆ ಎಸ್‌ಐಆರ್‌:

ಹಿಮಾಚಲಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಲಡಾಖ್‌ನಲ್ಲಿ ಪ್ರಕ್ರಿಯೆಗೆ ಎದುರಾಗಬಹುದಾದ ಕೆಲವೊಂದು ಸಮಸ್ಯೆಗಳನ್ನು ಪರಿಗಣಿಸಿ ಅವುಗಳನ್ನು ಬಳಿಕ ಸೂಕ್ತ ಸಮಯದಲ್ಲಿ ಕೈಗೊಳ್ಳಲು ಉದ್ದೇಶಿಸಲಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ತಿಳಿಸಿದ್ದಾರೆ.ವಿವಾದ:

ಬಿಹಾರದಲ್ಲಿ ಕಳೆದ ವರ್ಷ ಮತಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ನಡೆಸಲಾಗಿತ್ತು. ಈ ವೇಳೆ ಹಲವು ಹೆಸರುಗಳನ್ನು ಉದ್ದೇಶಪೂರ್ವಕವಾಗಿ ಕೈಬಿಡಲಾಗಿದೆ ಎಂದು ವಿಪಕ್ಷಗಳು ಆರೋಪಿಸಿದ್ದವು. ಬಳಿಕ ಇತ್ತೀಚಿಗೆ ಚುನಾವಣೆ ನಡೆದ ಪಂಚ ರಾಜ್ಯಗಳಲ್ಲಿ ಇದೇ ರೀತಿಯ ಪ್ರಕ್ರಿಯೆ ಕೈಗೊಳ್ಳಲಾಗಿತ್ತು. ಈ ಪೈಕಿ ಬಂಗಾಳದಲ್ಲಿ 29 ಲಕ್ಷಕ್ಕೂ ಹೆಚ್ಚು ಅನರ್ಹ ಮತದಾರರನ್ನು ನಾನಾ ಕಾರಣ ನೀಡಿ ರದ್ದುಗೊಳಿಸಲಾಗಿತ್ತು. ಜೊತೆಗೆ ಪ್ರಕ್ರಿಯೆಯನ್ನು ಪ್ರಶ್ನಿಸಿ ಟಿಎಂಸಿ ಸೇರಿದಂತೆ ಹಲವು ಸಂಘಟನೆಗಳು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದವಾದರೂ, ಪ್ರಕ್ರಿಯೆ ಮುಂದುವರೆಸಲು ಸುಪ್ರೀಂಕೋರ್ಟ್‌ ಆದೇಶಿಸಿತ್ತು.

ಕರ್ನಾಟಕ ಅಂಕಿ ಅಂಶಗಳು

59050 ಬಿಎಲ್‌ಒಗಳ ಸಂಖ್ಯೆ

25284 ಬಿಎಲ್‌ಎಗಳ ಸಂಖ್ಯೆ

55574064 ಒಟ್ಟು ಮತದಾರರು (12-5-2026ರಲ್ಲಿ ಇದ್ದಂತೆ)

36.73 ಕೋಟಿ - 19 ರಾಜ್ಯಗಳ ಒಟ್ಟು ಮತದಾರರು

3.94 ಲಕ್ಷ - ಗಣತಿಗೆ ತೆರಳಲಿರುವ ಬಿಎಲ್‌ಒಗಳು 

3.42 ಲಕ್ಷರಾಜಕೀಯ ಪಕ್ಷಗಳ ಬೂತ್‌ ಏಜೆಂಟ್‌ಗಳು

ಹೇಗಿರಲಿದೆ ಎಸ್‌ಐಆರ್‌?-

ಅಧಿಕಾರಿಗಳು ಮನೆಮನೆಗೆ ತೆರಳಿ ಮತದಾರರ ಹೆಸರು, ವಿಳಾಸ ದೃಢೀಕರಿಸುತ್ತಾರೆ. ಅರ್ಜಿ ಕೊಟ್ಟು ಸಂಗ್ರಹಿಸುತ್ತಾರೆ- ದಾಖಲೆ ಪರಿಶೀಲಿಸಿ ನಕಲಾಗಿರಬಹುದಾದ, ವಿಳಾಸ ಬದಲಾಗಿರುವ ಮತದಾರರು, ಮೃತಪಟ್ಟವರ ಹೆಸರು ಖಚಿತಪಡಿಸಿಕೊಳುತ್ತಾರೆ-ಯಾವುದಾದರೂ ಅರ್ಹ ಮತದಾರರ ಹೆಸರು ಕೈಬಿಟ್ಟು ಹೋಗಿದ್ದರೆ ಅದನ್ನು ಸೇರಿಸುವ ಕೆಲಸವನ್ನು ಮಾಡುತ್ತಾರೆ

ಎಲ್ಲೆಲ್ಲಿ ಪ್ರಕ್ರಿಯೆ?

ಕರ್ನಾಟಕ, ದೆಹಲಿ, ಒಡಿಶಾ, ಮಿಜೋರಂ, ಸಿಕ್ಕಿಂ, ಮಣಿಪುರ, ಉತ್ತರಾಖಂಡ, ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಹರ್ಯಾಣ, ತೆಲಂಗಾಣ, ಪಂಜಾಬ್‌, ಮೇಘಾಲಯ, ಮಹಾರಾಷ್ಟ್ರ, ಜಾರ್ಖಂಡ್‌, ನಾಗಾಲ್ಯಾಂಡ್‌, ತ್ರಿಪುರಾ, ದಾದರ್‌ ಮತ್ತು ನಗರ್‌ ಹವೇಲಿ, ದಮನ್‌ ಮತ್ತು ದಿಯು ಹಾಗೂ ಚಂಡೀಗಢ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಸಿಇಸಿ ಆಯ್ಕೆಯಿಂದ ಸಿಜೆಐ ಕೈ ಬಿಟ್ಟಿದ್ದಕ್ಕೆ ಸುಪ್ರೀಂ ಚಾಟಿ
ಗೌರ್ನರ್‌ ಗೆಹಲೋತ್ ಮಿತವ್ಯಯ ಮಂತ್ರ!