ನವದೆಹಲಿ: ದೇಶದ ಆರ್ಥಿಕ ಆರೋಗ್ಯ ಕಾಪಾಡುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಮಿತವ್ಯಯ ಕರೆಯ ಪಾಲನೆ ಮುಂದುವರಿದಿದೆ. ಹರ್ಯಾಣ , ಸಿಕ್ಕಿಂ, ಆಂಧ್ರ, ಗೋವಾ ರಾಜ್ಯಗಳ ಸಿಎಂಗಳು ತಮ್ಮ ಬೆಂಗಾವಲು ವಾಹನಗಳ ಸಂಖ್ಯೆಯನ್ನು ತಗ್ಗಿಸಿದ್ದಾರೆ. ತೆಲಂಗಾಣ ಗವರ್ನರ್, ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಕೂಡ ಇದೇ ಹೆಜ್ಜೆ ಇಟ್ಟಿದ್ದಾರೆ. ಕೇಂದ್ರ ಸಚಿವ ಅರ್ಜುನ್ ರಾಂ ಮೇಘ್ವಾಲ್ ಅವರು ರೈಲುನಿಲ್ದಾಣದಿಂದ ತಮ್ಮ ನಿವಾಸಕ್ಕೆ ಇ-ರಿಕ್ಷಾದಲ್ಲಿ ತೆರಳಿದರು.
ಅತ್ತ ಉತ್ತರಪ್ರದೇಶದ ಹಿರಿಯ ಅಧಿಕಾರಿಗಳು ಪೆಟ್ರೋಲ್, ಡೀಸೆಲ್ ವಾಹನಗಳನ್ನು ಬಿಟ್ಟು ಸೈಕಲ್, ಕಾಲ್ನಡಿಗೆಯನ್ನು ನೆಚ್ಚಿಕೊಂಡಿದ್ದಾರೆ. ಉತ್ತರಪ್ರದೇಶದ ಹಣಕಾಸು ಸಚಿವ ಸುರೇಶ್ ಕುಮಾರ್ ಖನ್ನಾ ತಮ್ಮ ನಿವಾಸದಿಂದ ಕಚೇರಿಗೆ ಸೈಕಲ್ ತುಳಿದುಕೊಂಡು ಬಂದರು. ಅಂತೆಯೇ ರಾಜ್ಯ ಸಚಿವ ದಿನೇಶ್ ಪ್ರತಾಪ್ ಸಿಂಗ್ ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸಿದರು. ಇನ್ನುಮುಂದೆ ಸಿಕ್ಕಿಂನ ವಿಧಾನಸಭೆ ಸ್ಪೀಕರ್ ಮತ್ತು ಉಪ ಸ್ಪೀಕರ್‌ಗೆ ಬೆಂಗಾವಲು ವಾಹನ ಇರುವುದಿಲ್ಲ.
ಸಿಕ್ಕಿಂನಲ್ಲಿ ಸಚಿವರು ಮತ್ತು ಶಾಸಕರ ವಾಹನಗಳ ಬಳಕೆಯನ್ನು ಶೇ.20ರಷ್ಟು ಕಡಿತ ಮಾಡಿ, ಸರ್ಕಾರಿ ಅಧಿಕಾರಿಗಳಿಗೆ ಒಟ್ಟಾಗಿ ಒಂದೇ ವಾಹನದಲ್ಲಿ(ಪೂಲ್) ಬರಲು ಸೂಚಿಸಲಾಗಿದೆ. ಒಂದು ದಿನ ಸಮ ಮತ್ತು ಇನ್ನೊಂದು ದಿನ ಬೆಸ ನೋಂದಣಿ ಸಂಖ್ಯೆ ಹೊಂದಿರುವ ವಾಹನಗಳಿಗೆ ರಸ್ತೆಗಿಳಿಯಲು ಅನುಮತಿಸಲು ನಿರ್ಧರಿಸಲಾಗಿದೆ. ಆಂಧ್ರಪ್ರದೇಶದಲ್ಲಿ ವಾರಕ್ಕೊಂದು ವಾಹನ ರಹಿತ ದಿನ, ವಿಶೇಷ ವಿಮಾನ ಬಳಕೆಗೆ ತಡೆ, ವಿದೇಶ ಪ್ರವಾಸ ರದ್ದತಿಯಂತಹ ಕ್ರಮಗಳನ್ನು ಘೋಷಿಸಲಾಗಿದೆ.
ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಅವರು ಗುರುವಾರ ಕಾರು ಬಿಟ್ಟು ಬೈಕೇರಿ, ಬಿಜೆಪಿ ನಾಯಕರೊಬ್ಬರನ್ನು ಕೂರಿಸಿಕೊಂಡು ವಿಧಾನಭವನಕ್ಕೆ ಆಗಮಿಸಿದರು. ಅವರ ಭದ್ರತಾ ಸಿಬ್ಬಂದಿ ಕೂಡ ದ್ವಿಚಕ್ರ ವಾಹನಗಳಲ್ಲೇ ಬಂದರು. ಆದರೆ ಫಡ್ನವೀಸ್ ಅವರು ಜಾಸ್ತಿ ಪೆಟ್ರೋಲ್ ಬಳಸುವ ಬುಲೆಟ್ ಬಳಸಿದ್ದು ಮತ್ತು ಬುಲೆಟ್‌ಗೆ ಬೆಂಗಾವಲಾಗಿ ಮತ್ತಷ್ಟು ಬೈಕ್ ಬಳಸಿದ್ದು ಭಾರೀ ಟೀಕೆಗೆ ಗ್ರಾಸವಾಗಿದೆ.