ವಿಜಯ್‌ ಹೊಸ ಪಕ್ಷ ‘ಟಿವಿಕೆ’ಗೆ ಚುನಾವಣಾ ಆಯೋಗ ಮಾನ್ಯತೆ

KannadaprabhaNewsNetwork |  
Published : Sep 09, 2024, 01:37 AM IST
ವಿಜಯ್‌ | Kannada Prabha

ಸಾರಾಂಶ

ಚುನಾವಣಾ ಆಯೋಗವು ನಮ್ಮ ‘ತಮಿಳಿಗ ವೆಟ್ರಿ ಕಳಗಂ (ಟಿವಿಕೆ)’ ಪಕ್ಷವನ್ನು ರಾಜಕೀಯ ಪಕ್ಷವವನ್ನಾಗಿ ನೋಂದಾಯಿಸಿಕೊಂಡಿದೆ ಎಂದು ಭಾನುವಾರ ಪಕ್ಷದ ಸ್ಥಾಪಕ, ಮುಖ್ಯಸ್ಥ ಹಾಗೂ ಖ್ಯಾತ ನಟ ವಿಜಯ್‌ ತಿಳಿಸಿದ್ದಾರೆ.

ಚೆನ್ನೈ: ಚುನಾವಣಾ ಆಯೋಗವು ನಮ್ಮ ‘ತಮಿಳಿಗ ವೆಟ್ರಿ ಕಳಗಂ (ಟಿವಿಕೆ)’ ಪಕ್ಷವನ್ನು ರಾಜಕೀಯ ಪಕ್ಷವವನ್ನಾಗಿ ನೋಂದಾಯಿಸಿಕೊಂಡಿದೆ ಎಂದು ಭಾನುವಾರ ಪಕ್ಷದ ಸ್ಥಾಪಕ, ಮುಖ್ಯಸ್ಥ ಹಾಗೂ ಖ್ಯಾತ ನಟ ವಿಜಯ್‌ ತಿಳಿಸಿದ್ದಾರೆ.

ಟ್ವೀಟ್‌ ಮಾಡಿರುವ ವಿಜಯ್‌, ‘ಟಿವಿಕೆ ಪಕ್ಷದ ನೋಂದಣಿಗೆ ಕಳೆದ ಫೆ.2ರಂದು ಚುನಾವಣಾ ಆಯೋಗಕ್ಕೆ ಅರ್ಜಿ ಸಲ್ಲಿಸಲಾಗಿತ್ತು. ಇದೀಗ ಚುನಾವಣಾ ಆಯೋಗ ನಮ್ಮ ಪಕ್ಷವನ್ನು ರಾಜಕೀಯ ಪಕ್ಷವೆಂದು ಪರಿಗಣಿಸಿ ನೋಂದಣಿ ಮಾಡಿಕೊಂಡಿದೆ. ಜನರು ನಮ್ಮ ಪಕ್ಷದ ಸಿದ್ಧಾಂತವನ್ನು ಒಪ್ಪಿಕೊಳ್ಳುತ್ತಾರೆ. ತಮಿಳುನಾಡಿನಲ್ಲಿ ರಾಜಕೀಯ ಪಕ್ಷವಾಗಿ ಹೊರಹೊಮ್ಮುವ ವಿಶ್ವಾಸ ನಮಗಿದೆ’ ಎಂದು ಪೋಸ್ಟ್‌ ಮಾಡಿದ್ದಾರೆ.

ಇತ್ತೀಚೆಗೆ ವಿಜಯ್‌ ಟಿವಿಕೆ ಪಕ್ಷದ ಧ್ವಜ ಮತ್ತು ಗೀತೆಯನ್ನು ಬಿಡುಗಡೆ ಮಾಡಿದ್ದರು. ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ವಿಜಯ್‌ ಪಕ್ಷ ಸ್ಪರ್ಧಿಸಲಿದೆ.

==

ವಿವಾದಿತ ಐಎಎಸ್‌ ಅಧಿಕಾರಿ ಪೂಜಾ ಖೇಡ್ಕರ್‌ ವಜಾನವದೆಹಲಿ: ವಿವಾದಿತ ಟ್ರೈನಿ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಅವರನ್ನು ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಐಎಎಸ್‌ ಸೇವೆಯಿಂದ ವಜಾಗೊಳಿಸಿದೆ. ಕೇಂದ್ರ ಲೋಕಸೇವಾ ಆಯೋಗ ಮತ್ತು ದೆಹಲಿ ಪೊಲೀಸರು ಪೂಜಾ ಮೇಲೆ ಕಾನೂನು ಕ್ರಮ ಕೈಗೊಂಡ ಬೆನ್ನಲ್ಲೇ ಕೇಂದ್ರ ಸರ್ಕಾರ ವಜಾಗೊಳಿಸಿದ್ದಾರೆ.‘ಸೆ.6ರಂದು, ಐಎಎಸ್‌ ನಿಯಮಗಳ ಪ್ರಕಾರ, 1954ರ 12ನೇ ನಿಯಮದಡಿ, 2023ರ ಐಎಎಸ್‌ ಪ್ರೊಬೇಷನರಿ ಹಾಗೀ ಮಹಾರಾಷ್ಟ್ರ ಕೇಡರ್‌ನ ಅಧಿಕಾರಿ ಪೂಜಾ ಮನೋರಮಾ ದಿಲೀಪ್ ಖೇಡ್ಕರ್‌ ಅವರನ್ನು ಕೇಂದ್ರ ಸರ್ಕಾರ ತಕ್ಷಣವೇ ಜಾರಿಗೆ ಬರುವಂತೆ ಇಲಾಖೆ ವಜಾ ಮಾಡಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ನಕಲಿ ದಾಖಲೆಗಳನ್ನು ತೋರಿಸಿ ಐಎಎಸ್‌ ಹುದ್ದೆ ಪಡೆದಿರುವ ಆರೋಪ ಎದುರಿಸುತ್ತಿರುವ ಪೂಜಾ ಖೇಡ್ಕರ್‌ ನೇಮಕಾತಿಯನ್ನು ಇತ್ತೀಚೆಗೆ ಯುಪಿಎಸ್‌ಸಿ ರದ್ದು ಪಡಿಸಿತ್ತು ಹಾಗೂ ಇನ್ನು ಮುಂದಿನ ಯುಪಿಎಸ್ಸಿ ಪರೀಕ್ಷೆಗಳಿಂದ ನಿರ್ಬಂಧಿಸಿತ್ತು. ಆದೆ, “ಯುಪಿಎಸ್ಸಿಗೆ ನನ್ನನ್ನು ವಜಾಗೊಳಿಸುವ ಅಧಿಕಾರವಿಲ್ಲ. ಅದು ಕೇವಲ ಪರೀಕ್ಷಾ ಸಂಸ್ಥೆ’ ಎಂದು ಪೂಜಾ ದೆಹಲಿ ಹೈಕೋರ್ಟ್‌ನಲ್ಲಿ ವಾದಿಸಿದ್ದರು. ಇದೀಗ ಕೇಂದ್ರ ಸರ್ಕಾರವೇ ವಿವಾದಿತ ಐಎಎಸ್‌ ಅಧಿಕಾರಿಯನ್ನು ವಜಾ ಮಾಡಿದೆ.

==

ಯೂಟ್ಯೂಬ್‌ನಲ್ಲಿ ವಿಡಿಯೋ ನೋಡಿ ಶಸ್ತ್ರಚಿಕಿತ್ಸೆ: 15ರ ಬಾಲಕ ಸಾವುಪಟನಾ: ನಕಲಿ ವೈದ್ಯನೊಬ್ಬ ಯೂಟ್ಯೂಬ್‌ನಲ್ಲಿ ವಿಡಿಯೋ ನೋಡಿ ಶಸ್ತ್ರಚಿಕಿತ್ಸೆ ಮಾಡಿದ್ದರಿಂದ 15 ವರ್ಷದ ಬಾಲಕ ಮೃತಪಟ್ಟ ಘಟನೆ ಬಿಹಾರದ ಸಾರಣ್‌ನಲ್ಲಿ ನಡೆದಿದೆ. ಕೃಷ್ಣಕುಮಾರ್‌ (15) ಮೃತಪಟ್ಟ ಬಾಲಕ.

ಕೃಷ್ಣಕುಮಾರ್‌ ಹಲವು ಬಾರಿ ವಾಂತಿ ಮಾಡಿಕೊಂಡಿದ್ದರಿಂದ ಆತನ ಪೋಷಕರು ಸಾರಣ್‌ನ ಗಣಪತಿ ಆಸ್ಪತ್ರೆಗೆ ದಾಖಲಿಸಿದ್ದರು. ಈ ಆಸ್ಪತ್ರೆಯಲ್ಲಿ ವೈದ್ಯನಾಗಿದ್ದ ಅಜಿತ್‌ ಕುಮಾರ್‌ ಪುರಿ ನಕಲಿ ವೈದ್ಯನಾಗಿದ್ದು, ಇದರ ಅರಿವಿರದೇ ಅವರು ಈ ಆಸ್ಪತ್ರೆಗೆ ಬಂದಿದ್ದರು.

ಆರಂಭದಲ್ಲಿ ಅಜಿತ್‌, ಬಾಲಕನಿಗೆ ವಾಂತಿ ನಿಲ್ಲಲು ಚಿಕಿತ್ಸೆ ನೀಡಿದ್ದ ಹಾಗೂ ಪಿತ್ತಕೋಶದಲ್ಲಿ ಕಲ್ಲು ಆಗಿದ್ದರಿಂದ ಶಸ್ತ್ರಚಿಕಿತ್ಸೆ ಮಾಡಬೇಕೆಂದು ನಿರ್ಧರಿಸಿದ್ದ. ಬಳಿಕ ಶಸ್ತ್ರಚಿಕಿತ್ಸೆ ಕೊಠಡಿಗೆ ಕರೆದುಕೊಂಡು ಹೋಗಿ ಯೂಟ್ಯೂಬಲ್ಲಿ ವಿಡಿಯೋ ನೋಡಿ ಶಸ್ತ್ರಚಿಕಿತ್ಸೆ ಮಾಡಿದ್ದ. ಆಗ ಬಾಲಕನಿಗೆ ಆರೋಗ್ಯದಲ್ಲಿ ಏರುಪೇರಾಗಿದ್ದು, ಆ್ಯಂಬುಲೆನ್ಸ್‌ನಲ್ಲಿ ಪಟನಾದಲ್ಲಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ. ಆದರೆ ಬಾಲಕ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ. ಹೆದರಿದ ಅಜಿತ್‌ ಕುಮಾರ್‌ ಹಾಗೂ ಆತನ ಸಿಬ್ಬಂದಿ ಪಟನಾ ಆಸ್ಪತ್ರೆಯಲ್ಲಿ ಬಾಲಕನ ಶವವನ್ನು ಬಿಟ್ಟು ಪರಾರಿಯಾಗಿದ್ದಾರೆ.ಈ ಬಗ್ಗೆ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ. ನಕಲಿ ವೈದ್ಯ ಅಜಿತ್‌ ಕುಮಾರ್‌ ಹಾಗೂ ಆತನ ಸಿಬ್ಬಂದಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.

PREV

Recommended Stories

ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !
ಕೇರಳದ 2 ರು. ಡಾಕ್ಟರ್ ನಿಧನ