ನವದೆಹಲಿ: ಇತ್ತೀಚೆಗಷ್ಟೇ ಭಾರೀ ಕೋಲಾಹಲದ ಬಳಿಕ ಬಿಹಾರದಲ್ಲಿ ಸಂಪನ್ನವಾಗಿದ್ದ ಮತಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ರೀತಿ ದೇಶವ್ಯಾಪಿ ಪರಿಷ್ಕರಣೆ ನಡೆಸುವ ಕೆಲಸಕ್ಕೆ ವೇಗ ಸಿಗುವ ಸೂಚನೆಗಳು ಸಿಗುತ್ತಿವೆ. ಈ ಬಗ್ಗೆ ಕೈಗೊಳ್ಳಲಾದ ನಿರ್ಧಾರಗಳನ್ನು ಘೋಷಿಸಲು ಚುನಾವಣಾ ಆಯೋಗ ಸೋಮವಾರ ಪತ್ರಿಕಾಗೋಷ್ಠಿ ಆಯೋಜಿಸಿದೆ.
ಈ ಸುದ್ದಿಗೋಷ್ಠಿಯಲ್ಲಿ, ಮುಂದಿನ ವರ್ಷ ಚುನಾವಣೆ ಎದುರಿಸಲಿರುವ 5 ಸೇರಿದಂತೆ ಕನಿಷ್ಠ 15 ರಾಜ್ಯಗಳಲ್ಲಿ ಮೊದಲ ಹಂತದಲ್ಲಿ ಎಸ್‌ಐಆರ್ ನಡೆಸುವ ಬಗ್ಗೆ ಘೋಷಣೆಯಾಗುವ ನಿರೀಕ್ಷೆಯಿದೆ.
2026ರಲ್ಲಿ ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ, ಅಸ್ಸಾಂ ಮತ್ತು ಪುದುಚೇರಿಯಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.
ಈಗಾಗಲೇ ವಿಪಕ್ಷಗಳ ಆಡಳಿತದ ಹಲವು ರಾಜ್ಯಗಳು, ವಿಶೇಷ ಮತಪಟ್ಟಿ ಪರಿಷ್ಕರಣೆಯ ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗದ ಸಂಚು ಎಂಬ ಗಂಭೀರ ಆರೋಪ ಮಾಡಿವೆ. ಹೀಗಾಗಿ ಸೋಮವಾರ ಆಯೋಗದ ಘೋಷಣೆ ಬಳಿಕ ಈ ಆರೋಪ ಯಾವ ತಿರುವು ಪಡೆದುಕೊಳ್ಳುತ್ತದೆ ಎಂಬ ಕುತೂಹಲವಿದೆ.
ಮತಪಟ್ಟಿಯಲ್ಲಿ ಕಾಲಕಾಲಕ್ಕೆ ಅಗತ್ಯವಾದ ಬದಲಾವಣೆಗಳನ್ನು ಮಾಡಲು ಅನುಸರಿಸುವ ವಿಧಾನವೇ ಮತಪಟ್ಟಿಯ ಪರಿಷ್ಕರಣೆ. ಈ ಪ್ರಕ್ರಿಯೆಯಲ್ಲಿ ಅಸ್ತಿತ್ವದಲ್ಲಿಲ್ಲದ, ನಕಲಿ ಅಥವಾ ಅಸುನೀಗಿರುವ ಮತದಾರರ ತೆಗೆಯುವಿಕೆ, ಹೊಸ ಹೆಸರುಗಳ ಸೇರ್ಪಡೆ ಮಾಡಲಾಗುತ್ತದೆ. ಇತ್ತೀಚೆಗಷ್ಟೇ ಬಿಹಾರದಲ್ಲಿ ಜೂನ್-ಸೆಪ್ಟೆಂಬರ್ ನಡುವೆ 2 ಹಂತದಲ್ಲಿ ಎಸ್‌ಐಆರ್ ನಡೆಸಲಾಗಿತ್ತು.