ಖ್ಯಾತ ಪರಿಸರವಾದಿ ಮಾಧವ್‌ ಗಾಡ್ಗೀಳ್‌ ವಿಧಿವಶ

KannadaprabhaNewsNetwork |  
Published : Jan 09, 2026, 02:00 AM ISTUpdated : Jan 09, 2026, 04:14 AM IST
madhav gadgil

ಸಾರಾಂಶ

ಪಶ್ಚಿಮ ಘಟ್ಟ ಸಂರಕ್ಷಣೆ, ಪರಿಸರ ವಿಷಯಗಳಲ್ಲಿ ಅನುಪಮ ಸೇವೆ ಸಲ್ಲಿಸಿದ್ದ ಖ್ಯಾತ ಪರಿಸರವಾದ ಮಾಧವ್‌ ಗಾಡ್ಗೀಳ್‌ (83) ಬುಧವಾರ ತಡರಾತ್ರಿ ಇಲ್ಲಿ ವಿಧಿವಶರಾದರು. ಅನಾರೋಗ್ಯಕ್ಕೆ ತುತ್ತಾಗಿ ಪುಣೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಗಾಡ್ಗೀಳ್‌, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಪುಣೆ: ಪಶ್ಚಿಮ ಘಟ್ಟ ಸಂರಕ್ಷಣೆ, ಪರಿಸರ ವಿಷಯಗಳಲ್ಲಿ ಅನುಪಮ ಸೇವೆ ಸಲ್ಲಿಸಿದ್ದ ಖ್ಯಾತ ಪರಿಸರವಾದಿ ಮಾಧವ್‌ ಗಾಡ್ಗೀಳ್‌ (83) ಬುಧವಾರ ತಡರಾತ್ರಿ ಇಲ್ಲಿ ವಿಧಿವಶರಾದರು. ಅನಾರೋಗ್ಯಕ್ಕೆ ತುತ್ತಾಗಿ ಪುಣೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಗಾಡ್ಗೀಳ್‌, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. 1942ರ ಮೇ 24ರಂದು ಪುಣೆಯ ಸುಶಿಕ್ಷಿತ ಕುಟುಂಬದಲ್ಲಿ ಜನಿಸಿದ್ದ ಗಾಡ್ಗೀಳ್‌, ಅವರ ತಂದೆ ಧನಂಜಯ ರಾಮಚಂದ್ರ ಗಾಡ್ಗೀಳ್‌ ಖ್ಯಾತ ಅರ್ಥಶಾಸ್ತ್ರಜ್ಞರಾಗಿದ್ದರು.

1963ರಲ್ಲಿ ಪುಣೆಯ ಫರ್ಗ್ಯುಸನ್‌ ಕಾಲೇಜಿನಲ್ಲಿ ಜೀವಶಾಸ್ತ್ರದಲ್ಲಿ ಪದವಿ ಮುಗಿಸಿ, ನಂತರ 1965ರಲ್ಲಿ ಮುಂಬೈ ವಿಶ್ವವಿದ್ಯಾಲಯದಿಂದ ಪ್ರಾಣಿಶಾಸ್ತ್ರದಲ್ಲಿ ಸ್ನಾತಕೋತ್ತರ ಮುಗಿಸಿದ್ದ ಗಾಡ್ಗೀಳ್‌ ಅವರು 1969ರಲ್ಲಿ ಹಾರ್ವರ್ಡ್‌ ವಿವಿಯಲ್ಲಿ ಗಣಿತ ಪರಿಸರ ವಿಜ್ಞಾನ ಮತ್ತು ಪ್ರಾಣಿಗಳ ನಡವಳಿಕೆ ವಿಷಯದಲ್ಲಿ ಪಿಎಚ್‌ಡಿ ಪಡೆದಿದ್ದರು.

31 ವರ್ಷ ಬೆಂಗಳೂರಿನಲ್ಲಿ ಸೇವೆ

ಗಾಡ್ಗೀಳ್‌, 1973ರಿಂದ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು. ತಮ್ಮ 31 ವರ್ಷದ ಅವಧಿಯಲ್ಲಿ ಪ್ರಮುಖ ಸಂಸ್ಥೆಗಳಾದ ಸೆಂಟರ್‌ ಫಾರ್‌ ಎಕೊಲಾಜಿಕಲ್‌ ಸೈನ್ಸ್‌, ಸೆಂಟರ್‌ ಫಾರ್‌ ಥಿಯಾರಿಟಿಕಲ್‌ ಸ್ಟಡೀಸ್‌ಗಳನ್ನು ಸ್ಥಾಪಿಸಿ ಪರಿಸರ ಅಧ್ಯಯನದಲ್ಲಿ ಆಧುನಿಕತೆಗೆ ಅವಕಾಶ ಕಲ್ಪಿಸಿದರು. ಮೂಲತಃ ಮರಾಠಿಗರಾದರೂ ಸಹ ಗಾಡ್ಗೀಳ್‌ ಅವರು ಕನ್ನಡದಲ್ಲಿ ಸರಾಗಿವಾಗಿ ಮಾತನಾಡುತ್ತಿದ್ದರು. 2004ರಲ್ಲಿ ನಿವೃತ್ತಿ ಬಳಿಕವೂ ಪುಣೆಯ ಅಗರ್ಕರ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ ಮತ್ತು ಗೋವಾ ವಿವಿಯಲ್ಲಿ ಸೇವೆ ಸಲ್ಲಿಸಿದ್ದರು.

ಪರಿಸರ ಸಂರಕ್ಷಣೆಯಲ್ಲಿ ತಮ್ಮ ಛಾಪು ಮೂಡಿಸಿರುವ ಗಾಡ್ಗೀಳ್‌ ಅವರು, 2010ರಲ್ಲಿ ಪಶ್ಚಿಮಘಟ್ಟದ ಸಂರಕ್ಷಣೆಗೆಂದು ಕೇಂದ್ರ ಸರ್ಕಾರ ರಚಿಸಿದ್ದ ‘ಗಾಡ್ಗೀಳ್‌ ಸಮಿತಿ’ಯ ಅಧ್ಯಕ್ಷತೆ ವಹಿಸಿದ್ದರು. ತಮ್ಮ ವರದಿಯಲ್ಲಿ ಪಶ್ಚಿಮಘಟ್ಟದ ಬಹುಪಾಲನ್ನು ವಿಶೇಷ ಸೂಕ್ಷ್ಮ ವಲಯವೆಂದು ಪರಿಗಣಿಸಬೇಕೆಂದು ಶಿಫಾರಸ್ಸು ಮಾಡಿದ್ದರು.

ರಾಷ್ಟ್ರ-ಅಂತಾರಾಷ್ಟ್ರೀಯ ಪ್ರಶಸ್ತಿ:

ಗಾಡ್ಗೀಳ್‌ ಅವರ ಪರಿಸರ ಕಾಳಜಿ ಗಾಗಿ ವಿಶ್ವಸಂಸ್ಥೆಯು 2024ರಲ್ಲಿ ‘ಚಾಂಪಿಯನ್‌ ಆಫ್‌ ದಿ ಅರ್ಥ್‌’ ಪ್ರಶಸ್ತಿ ನಿಡಿ ಪುರಸ್ಕರಿಸಿತ್ತು. 1981ರಲ್ಲಿ ಕೇಂದ್ರ ಸರ್ಕಾರವು ಪದ್ಮ ಶ್ರೀ, 2006ರಲ್ಲಿ ಪದ್ಮ ಭೂಷಣ ಪ್ರಶಸ್ತಿ ಸಹ ನೀಡಿ ಪುರಸ್ಕರಿಸಿತ್ತು. ಕರ್ನಾಟಕ ಸರ್ಕಾರ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿಯಿಂದ ಗೌರವಿಸಿತ್ತು.

ಕರ್ನಾಟಕದ ಹಲವು ಯೋಜನೆಗಳಲ್ಲಿ ಭಾಗಿ:

ಬೆಂಗಳೂರಿನ ಐಐಎಎಸ್ಸಿಯಲ್ಲಿ 31 ವರ್ಷ ಸೇವೆ, ಕನ್ನಡದಲ್ಲಿ ಸುಲಲಿತ ಮಾತು

ಪಶ್ಚಿಮಘಟ್ಟ ಅಧ್ಯಯನದ ಸಮಿತಿಯ ಅಧ್ಯಕ್ಷತೆ, ಗಾಡ್ಗೀಳ್‌ ಸಮಿತಿಯ ವರದಿ

ಉತ್ತರ ಕನ್ನಡ ಜಿಲ್ಲೆಯ ಬೇಡ್ತಿ ಮತ್ತು ಅಘನಾಶಿನಿ ನದಿ ಪಾತ್ರದ ಕುರಿತು ಅಧ್ಯಯನ

1976ರಲ್ಲಿ ಬಿದಿರು ಅಧ್ಯಯನಕ್ಕಾಗಿ ಕರ್ನಾಟಕ ಸರ್ಕಾರದ ಸಮಿತಿಯಲ್ಲಿ ಸ್ಥಾನ

ಕರ್ನಾಟಕ ಸರ್ಕಾರದ ಕರ್ನಾಟಕ ಯೋಜನಾ ಮಂಡಳಿಯಲ್ಲಿ ಸದಸ್ಯರಾಗಿ ಸೇವೆ

ದೇಶದ ಮೊದಲ ಜೀವಗೋಳ ಮೀಸಲು ನೀಲಗಿರಿ ರಕ್ಷಿತ ಪ್ರದೇಶ ರಚನೆಯಲ್ಲಿ ಪಾತ್ರ

ಕರ್ನಾಟಕ ಸರ್ಕಾರದಿಂದ ಬಂಡಿಪುರ ಹುಲಿ ಅರಣ್ಯದಲ್ಲಿ ಆನೆ ಅಧ್ಯಯನಕ್ಕೆ ನಿಯೋಜನೆ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಜನನಾಯಗನ್‌ಗೆ ಸಿಹಿ - ಕಹಿ! - ಜ.21ರವರೆಗೆ ವಿಜಯ್‌ ನಟನೆಯ ಚಿತ್ರ ಬಿಡುಗಡೆ ಇಲ್ಲ
ಇರಾನ್‌ನಲ್ಲಿ ಖಮೇನಿ ವಿರುದ್ಧ ಪ್ರತಿಭಟನೆ ಮತ್ತಷ್ಟು ತೀವ್ರ