ಮದ್ಯ ಹಗರಣ : ಮಾಜಿ ಸಿಎಂ ಪುತ್ರ ಬಂಧನ

KannadaprabhaNewsNetwork |  
Published : Jul 19, 2025, 01:00 AM ISTUpdated : Jul 19, 2025, 05:50 AM IST
ಬಘೇಲಾ  | Kannada Prabha

ಸಾರಾಂಶ

2,160 ಕೋಟಿ ಮದ್ಯ ಹಗರಣಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ಪುತ್ರ ಚೈತನ್ಯ ಬಘೇಲ್ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಶುಕ್ರವಾರ ಬಂಧಿಸಿದೆ ಹಾಗೂ 5 ದಿನ ತನ್ನ ಕಸ್ಟಡಿಗೆ ತೆಗೆದುಕೊಂಡಿದೆ.

 ನವದೆಹಲಿ/ಭಿಲಾಯಿ :  2,160 ಕೋಟಿ ಮದ್ಯ ಹಗರಣಕ್ಕೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ಪುತ್ರ ಚೈತನ್ಯ ಬಘೇಲ್ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಶುಕ್ರವಾರ ಬಂಧಿಸಿದೆ ಹಾಗೂ 5 ದಿನ ತನ್ನ ಕಸ್ಟಡಿಗೆ ತೆಗೆದುಕೊಂಡಿದೆ. 

ಶುಕ್ರವಾರ ಚೈತನ್ಯ ಅವರ ಜನ್ಮದಿನವಾಗಿತ್ತು. ಆ ದಿನವೇ ಅವರನ್ನು ಇ.ಡಿ. ಬಂಧಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಚೈತನ್ಯ, ‘ಬರ್ತ್‌ ಡೇ ಗಿಫ್ಟ್‌ ನಿಡಿದ್ದಕ್ಕೆ ಧನ್ಯವಾದ’ ಎಂದು ವ್ಯಂಗ್ಯವಾಡಿದ್ದಾರೆ. ಮಾಜಿ ಸಿಎಂ ಬಘೇಲ್‌, ‘ತಮ್ಮ ರಾಜಕೀಯ ಬಾಸ್‌ಗಳನ್ನು ತೃಪ್ತಿಪಡಿಸಲು ಇ.ಡಿ. ಹೆಣೆದ ಕುತಂತ್ರವಿದು. ಇದಕ್ಕೆ ಕಾನೂನು ಮೂಲಕವೇ ಉತ್ತರ ನೀಡುತ್ತೇವೆ’ ಎಂದು ಕಿಡಿಕಾರಿದ್ದಾರೆ. 

ಮನೆಯಿಂದಲೇ ಚೈತನ್ಯ ಬಂಧನ:ಕಳೆದ ಮಾ.10ರಂದು ಬಘೇಲ್‌ ಹಾಗೂ ಚೈತನ್ಯ ಆಸ್ತಿಪಾಸ್ತಿಗಳ ಮೇಲೆ ಇ.ಡಿ. ದಾಳಿ ಮಾಡಿತ್ತು. ಈಗ ಹೊಸ ಪುರಾವೆಗಳ ಆಧಾರದ ಮೇಲೆ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಸೆಕ್ಷನ್ 19ರ ಅಡಿಯಲ್ಲಿ ಭಿಲಾಯಿಯಲ್ಲಿರುವ ಕುಟುಂಬದ ನಿವಾಸದಿಂದ ಚೈತನ್ಯರನ್ನು ಬಂಧಿಸಲಾಗಿದೆ.

ಶೋಧದ ಸಮಯದಲ್ಲಿ ಚೈತನ್ಯ ಬಾಘೇಲ್ ಅಸಹಕಾರ ತೋರಿದ್ದಾರೆ. ಇದು ಅವರನ್ನು ತಕ್ಷಣ ಬಂಧಿಸಲು ಕಾರಣವಾಯಿತು ಎಂದು ಇ.ಡಿ. ಅಧಿಕಾರಿಗಳು ಹೇಳಿದ್ದಾರೆ.

ಏನಿದು ಹಗರಣ?:

‘ಕಾಂಗ್ರೆಸ್ ಛತ್ತೀಸ್‌ಗಢದಲ್ಲಿ ಅಧಿಕಾರದಲ್ಲಿದ್ದಾಗ 2019 ಮತ್ತು 2022 ರ ನಡುವೆ ಮದ್ಯ ಹಗರಣ ನಡೆಸಲಾಗಿದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ 2160 ಕೋಟಿ ರು. ಹಾನಿಯಾಗಿದೆ’ ಎಂದು ಇ.ಡಿ. ಆರೋಪಿಸಿದೆ.

ಡಿಸ್ಟಿಲರಿಗಳಲ್ಲಿ ತಯಾರಿಸಿದ ಲೆಕ್ಕಪತ್ರವಿಲ್ಲದ ಮದ್ಯವನ್ನು ಅಗತ್ಯ ಸುಂಕ ಮತ್ತು ಶುಲ್ಕವನ್ನು ಪಾವತಿಸದೆ ನೇರವಾಗಿ ಸರ್ಕಾರಿ ಮದ್ಯದಂಗಡಿಗಳಿಗೆ ಸರಬರಾಜು ಮಾಡಲಾಗಿದೆ. ಇದರಿಂದಾಗಿ ರಾಜ್ಯ ಖಜಾನೆಗೆ ಗಣನೀಯ ನಷ್ಟವಾಗಿದೆ. ಇದಕ್ಕಾಗಿ ಡಿಸ್ಟಿಲರಿಗಳಿಂದ ರಾಜಕೀಯ ನಾಯಕರಿಗೆ ಲಂಚದ ಹಣ ಸಂದಾಯವಾಗಿದ್ದು, ಇದರಲ್ಲಿ ಬಘೇಲ್‌ ಪುತ್ರ ಕೂಡ ಒಬ್ಬರು ಎಂಬುದು ಆರೋಪ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಮುಸ್ಲಿಮರು ಸೂರ್‍ಯನಮಸ್ಕಾರ ಮಾಡ್ಬೇಕು : ಹೊಸಬಾಳೆ ಕರೆ
ಮರುಭೂಮಿ ಸೌದಿಯಲ್ಲಿ ಹಿಮಪಾತ, ಮಳೆ!