ಅಕ್ರಮ ಹಣ ವರ್ಗ ಕೇಸಲ್ಲಿ ಎಸ್‌ಡಿಪಿಐ ಅಧ್ಯಕ್ಷ ಅರೆಸ್ಟ್‌

KannadaprabhaNewsNetwork | Published : Mar 5, 2025 12:32 AM

ಸಾರಾಂಶ

ನವದೆಹಲಿ: ಅಕ್ರಮ ಹಣ ವರ್ಗ ಕೇಸಲ್ಲಿ ಜಾರಿ ನಿರ್ದೇಶಾನಲಯದ ಅಧಿಕಾರಿಗಳು ಪಿಎಫ್‌ಐನ ರಾಜಕೀಯ ಮುಖವಾಣಿ ಸಂಘಟನೆ ಎಸ್‌ಡಿಪಿಐನ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಜಿಯನ್ನು ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ರಾತ್ರಿ ಬಂಧಿಸಿದ್ದಾರೆ.

ನವದೆಹಲಿ: ಅಕ್ರಮ ಹಣ ವರ್ಗ ಕೇಸಲ್ಲಿ ಜಾರಿ ನಿರ್ದೇಶಾನಲಯದ ಅಧಿಕಾರಿಗಳು ಪಿಎಫ್‌ಐನ ರಾಜಕೀಯ ಮುಖವಾಣಿ ಸಂಘಟನೆ ಎಸ್‌ಡಿಪಿಐನ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಜಿಯನ್ನು ದೆಹಲಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೋಮವಾರ ರಾತ್ರಿ ಬಂಧಿಸಿದ್ದಾರೆ.

ಎಸ್‌ಡಿಪಿಐಗೆ ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ(ಪಿಎಫ್‌ಐ) 4.07 ಕೋಟಿ ರು. ನೀಡಿದ್ದು, ಇದರ ಸಾಕ್ಷಿಯಾಗಿ ಕೆಲ ಕಡತಗಳು ಇಡಿಗೆ ದೊರಕಿದೆ. ಈ ಹಿನ್ನೆಲೆಯಲ್ಲಿ, 2022ರಲ್ಲಿ ಪಿಎಫ್‌ಐ ವಿರುದ್ಧದ ತನಿಖೆಯ ಭಾಗವಾಗಿ ಫೈಜಿಯನ್ನು ಬಂಧಿಸಲಾಗಿದೆ. ಬಳಿಕ, ಅವರನ್ನು 6 ದಿನಗಳ ಕಾಲ ಇಡಿ ವಶಕ್ಕೆ ನೀಡಲಾಗಿದೆ. ಈ ಅಕ್ರಮ ನಿಧಿ ಬಳಕೆ ಬಗ್ಗೆ ಇಡಿ ಚುನಾವಣಾ ಆಯೋಗಕ್ಕೂ ಮಾಹಿತಿ ನೀಡಲಿದೆ.

‘ತನ್ನನ್ನು ತಾನು ಸಮಾಜ ಕಲ್ಯಾಣ ಸಂಸ್ಥೆ ಎಂದು ಕರೆದುಕೊಳ್ಳುವ ಪಿಎಫ್‌ಐ, ತನ್ನ ಮುಖವಾಣಿಯಾಗಿರುವ ಎಸ್‌ಡಿಪಿಐ ಅನ್ನು ಬಳಸಿಕೊಂಡು ದೇಶವಿರೋಧಿ ಹಾಗೂ ಕ್ರಿಮಿನಲ್‌ ಕೃತ್ಯಗಳಲ್ಲಿ ತೊಡಗಿದೆ. ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಿಗೆ ಎಸ್‌ಡಿಪಿಐನ ಅಭ್ಯರ್ಥಿಗಳನ್ನು ಪಿಎಫ್‌ಐ ಆಯ್ಕೆ ಮಾಡುತ್ತಿತ್ತು. ಕ್ರಮಿನಲ್‌ ಪ್ರಕರಣಗಳನ್ನು ಎದುರಿಸುತ್ತಿದ್ದ ಪಕ್ಷದ ಸದಸ್ಯರ ಕಾನೂನು ಶುಲ್ಕವನ್ನೂ ಪಿಎಫ್‌ಐ ಪಾವತಿಸುತ್ತಿತ್ತು. ಈ ವ್ಯವಹಾರಗಳು ನಗದಲ್ಲಿ ನಡೆಯುತ್ತಿದ್ದ ಕಾರಣ ಬ್ಯಾಂಕ್‌ ದಾಖಲೆಗಳಲ್ಲಿ ದಾಖಲಾಗುತ್ತಿರಲಿಲ್ಲ’ ಎಂದು ಇಡಿ ಆರೋಪಿಸಿದೆ.

ಅಂತೆಯೇ, ‘ಈ 2 ಸಂಘಟನೆಗಳ ಸಂಬಂಧಿತ ಸಂಸ್ಥೆಗಳು ಮತ್ತು ಘಟಕಗಳಿಂದ ಕ್ರಿಮಿನಲ್ ಚಟುವಟಿಕೆಗಳಲ್ಲಿ ರಹಸ್ಯ ಮಾಧ್ಯಮಗಳ ಮೂಲಕ ಗಡಿಯಾಚಿನಿಂದ ನಿಧಿಸಂಗ್ರಹಣೆ ಮತ್ತು ಹಂಚಿಕೆಯ ತನಿಖೆಗೆ ಫೈಜಿಯನ್ನು ವಶಕ್ಕೆ ಪಡೆಯುವುದು ಅವಶ್ಯಕ’ ಎಂದು ಇಡಿ ಹೇಳಿದೆ. ಆದರೆ ಇದನ್ನು ತಳ್ಳಿಹಾಕಿರುವ ಎಸ್‌ಡಿಪಿಐ, ತನ್ನನ್ನು ತಾನು ಸ್ವತಂತ್ರ ಸಂಘಟನೆ ಎಂದು ಹೇಳಿದೆ.

ಕೇರಳ ಮೂಲದ ಪಿಎಫ್‌ಐ ನಾಯಕ ಅಬ್ದುಲ್ ರಜಾಕ್ ಬಿಪಿ ಜೊತೆ ಪೈಜಿ ಸಂಪರ್ಕ ಹೊಂದಿದ್ದು, ರಜಾಕ್ ಎಸ್‌ಡಿಪಿಐನ ರಾಷ್ಟ್ರೀಯ ಅಧಕ್ಷರಿಗೆ ಪಿಎಫ್‌ಐ ಸಂಘಟನೆಯ ನಿಧಿ ಸಂಗ್ರಹ ಚಟುವಟಿಕೆಗಳ ಭಾಗವಾಗಿ 2 ಲಕ್ಷ ರು.ಗಳನ್ನು ವರ್ಗಾವಣೆ ಮಾಡಿರುವ ಆರೋಪದ ಕುರಿತು ಇಡಿ, 2022ರಿಂದ ತನಿಖೆ ನಡೆಸುತ್ತಿದೆ.

ಕಳೆದ ವರ್ಷ ಜನವರಿಯಲ್ಲೂ ಫೈಜಿಯನ್ನು 3 ದಿನ ವಿಚಾರಣೆಗೆ ಒಳಪಡಿಸಲಾಗಿತ್ತು. ಆದರೆ, 2024ರ ಮಾರ್ಚ್‌ ಹಾಗೂ 2025ರ ಫೆಬ್ರವರಿ ನಡುವೆ ನೀಡಲಾಗಿದ್ದ 12 ಸಮನ್ಸ್‌ ನೀಡಲಾಗಿದ್ದರೂ ಆತ ಹಾಜರಾಗಿರಲಿಲ್ಲ. ಆದ್ದರಿಂದ ಆತನ ವಿರುದ್ಧ ಇಡಿ ಸ್ಥಳೀಯ ನ್ಯಾಯಾಲಯದಿಂದ ಜಾಮೀನು ರಹಿತ ವಾರಂಟ್ ಪಡೆದುಕೊಂಡಿತ್ತು.

Share this article