ವಾಷಿಂಗ್ಟನ್: ತಮ್ಮ ದೇಶದ ಉತ್ಪನ್ನಗಳ ಮೇಲೆ ಅಧಿಕ ತೆರಿಗೆ ಹೇರುವ ರಾಷ್ಟ್ರಗಳ ಮೇಲೆ ಅಷ್ಟೇ ಪ್ರಮಾಣದ ತೆರಿಗೆ ಹೇರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನೀತಿ ಮಂಗಳವಾರದಿಂದ ಮೆಕ್ಸಿಕೋ ಹಾಗೂ ಕೆನಡಾದ ಮೇಲೆ ಜಾರಿಯಾಗಿದೆ. ಕಳೆದ ತಿಂಗಳೇ ಈ ನೀತಿ ಜಾರಿಯಾಗಿತ್ತಾದರೂ, ಎರಡೂ ದೇಶಗಳು ಮಾತುಕತೆಗೆ ಮುಂದಾದ ಕಾರಣ ಅದಕ್ಕೆ ಟ್ರಂಪ್ ಒಂದು ತಿಂಗಳ ತಡೆ ನೀಡಿದ್ದರು. ಆ ತಡೆ ಇದೀಗ ತೆರವಾಗಿದ್ದು ಮಂಗಳವಾರದಿಂದಲೇ ಶೇ.25ರಷ್ಟು ಹೆಚ್ಚುವರಿ ತೆರಿಗೆ ಜಾರಿಯಾಗಲಿದೆ ಎಂದು ಟ್ರಂಪ್ ಘೋಷಿಸಿದ್ದಾರೆ. ಫೆಬ್ರವರಿಯಲ್ಲೇ ತೆರಿಗೆ ಘೋಷಣೆಯಾಗಿತ್ತಾದರೂ, ಒಂದು ತಿಂಗಳು ತಡವಾಗಿ ಜಾರಿಗೊಳಿಸಲಾಗಿದೆ.
ಷೇರು ಮಾರುಕಟ್ಟೆ ಕುಸಿತ:
ಟ್ರಂಪ್ ತೆರಿಗೆ ಘೋಷಿಸುತ್ತಿದ್ದಂತೆ ಹಣದುಬ್ಬರ ಏರಿಕೆಯ ಸಾಧ್ಯತೆ ಅಧಿಕವಾಗಿದೆ. ಪರಿಣಾಮವಾಗಿ, ಅಮೆರಿಕದ ಷೇರು ಮಾರುಕಟ್ಟೆ ಸೂಚ್ಯಂಕ ಎಸ್&ಪಿ 500 ಸೋಮವಾರ ಶೇ.2ರಷ್ಟು ಕುಸಿದಿದೆ. ಆದರೆ ಟ್ರಂಪ್ ಸರ್ಕಾರ ಮಾತ್ರ, ಈ ಕ್ರಮದಿಂದ ಅಮೆರಿಕದ ಉತ್ಪಾದನೆ ಹೆಚ್ಚಿ, ವಿದೇಶಿ ಹೂಡಿಕೆ ಹರಿದುಬರುತ್ತದೆ ಎಂಬ ವಿಶ್ವಾಸದಲ್ಲಿದೆ.ತೆರಿಗೆಗೆ ತಿರುಗೇಟು:
ಅತ್ತ ಚೀನಾ, ಅಮೆರಿಕದ ಆಮದುಗಳ ಮೇಲೆ, ಮಾ.10ರಿಂದ ಜಾರಿಗೆ ಬರುವಂತೆ ಶೇ.15ರಷ್ಟು ತೆರಿಗೆ ಘೋಷಿಸಿದೆ. ಜೊತೆಗೆ, ವಿಶ್ವ ವ್ಯಾಪಾರ ಸಂಸ್ಥೆಯಲ್ಲಿ ಕಾನೂನು ಸಮರವನ್ನೂ ಆರಂಭಿಸಿದೆ.