ನವದೆಹಲಿ: ಉತ್ತರ ಭಾರತದಲ್ಲಿ ಉಷ್ಣಹವೆ ಮುಂದುವರೆದಿದ್ದು, ರಾಷ್ಟ್ರಾದ್ಯಂತ ಉಷ್ಣಹವೆಗೆ ಗುರುವಾರ ಒಂದೇ ದಿನ 21 ಮಂದಿ ಸಾವನ್ನಪ್ಪಿದ್ದಾರೆ. ಸಾರ್ವಕಾಲಿಕ ರಾಜಧಾನಿ ದೆಹಲಿಯಲ್ಲಿ ಬಿಸಿಲ ಧಗೆ ಮುಂದುವರೆದಿದ್ದು, ಗುರುವಾರವೂ ಸಹ 49.1 ಡಿಗ್ರಿ ತಾಪಮಾನ ದಾಖಲಾಗಿದೆ.
ದೆಹಲಿಯ ಸಫ್ದರ್‌ಜಂಗ್ ಹವಾಮಾನ ಕೇಂದ್ರದಲ್ಲಿ 79 ವರ್ಷಗಳ ಇತಿಹಾಸದಲ್ಲೇ ಅತ್ಯಂತ ಅಧಿಕ ತಾಪಮಾನ ದಾಖಲಾಗಿದ್ದು, 46.8 ಡಿಗ್ರಿ ತಾಪಮಾನ ದಾಖಲಾಗಿದೆ. ಇನ್ನು ಹೊರವಲಯದ ಮಂಗೇಶ್‌ಪುರ ಪ್ರದೇಶದಲ್ಲಿ 49.1 ಡಿಗ್ರಿ ತಾಪಮಾನದಲ್ಲೇ ಮುಂದುವರೆದಿದ್ದು, ಶುಕ್ರವಾರ ಕೊಂಚ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದರೂ ನಗರಕ್ಕೆ ಯೆಲ್ಲೋ ಅಲರ್ಟ್ ಪ್ರಕಟಿಸಿದೆ.
ಈ ನಡುವೆ ಬಿಹಾರದಲ್ಲಿ 15 ಮಂದಿ ಗುರುವಾರ ಬಿಸಿಲ ತಾಪದಿಂದಾಗಿ ಸಾವನ್ನಪ್ಪಿದ್ದರೆ, ಜಾರ್ಖಂಡ್‌ನಲ್ಲಿ 4 ಮಂದಿ ಹಾಗೂ ದೆಹಲಿಯಲ್ಲಿ ಓರ್ವ ಸಾವನ್ನಪ್ಪಿದ್ದಾನೆ. ಅಲ್ಲದೆ ರಾಜಸ್ಥಾನದಲ್ಲಿ ಹೈಕೋರ್ಟ್ ಬಿಸಿಲ ತಾಪಕ್ಕೆ ಬಲಿಯಾದವರಿಗೆ ಪರಿಹಾರ ನೀಡಲು ಆದೇಶಿಸಿದೆ.
ದೆಹಲಿ ಉಷ್ಣಹವೆ: 107 ಡಿಗ್ರಿಗೆ ಜ್ವರಕ್ಕೆ ವ್ಯಕ್ತಿ ಬಲಿ
ನವದೆಹಲಿ: ರಾಜಧಾನಿಯಲ್ಲಿ ದಾಖಲೆ ಪ್ರಮಾಣದ ಉಷ್ಣಾಂಶ ದಾಖಲಾಗುತ್ತಿರುವ ನಡುವೆಯೇ ಬಿಸಿಲಿನ ಬೇಗೆಯಿಂದಾಗಿ ಬರೋಬ್ಬರಿ 107 ಡಿಗ್ರಿ ದೇಹದ ಉಷ್ಣಾಂಶದ ಜ್ವರದಿಂದ ಬಳಲುತ್ತಿದ್ದ ಕಾರ್ಮಿಕನೊಬ್ಬ ಸಾವನ್ನಪ್ಪಿರುವ ಘಟನೆ ನಡೆದಿದೆ.ಬಿಹಾರಿ ಮೂಲದ ವ್ಯಕ್ತಿಯೊಬ್ಬರಿಗೆ ಸೋಮವಾರ ರಾತ್ರಿ ವಿಪರೀತ ಜ್ವರ ಕಾಣಿಸಿಕೊಂಡಿತ್ತು. ಮನೆಯಲ್ಲಿ ಫ್ಯಾನ್ ಅಥವಾ ಹವಾನಿಯಂತ್ರಕ ಪರಿಣಾಮ ಆರೋಗ್ಯ ಮತ್ತಷ್ಟು ಹದಗೆಟ್ಟು ಆಸ್ಪತ್ರೆಗೆ ದಾಖಲಾಗಿದ್ದ.
ಆಸ್ಪತ್ರೆಗೆ ದಾಖಲಾಗುವ ಹಂತದಲ್ಲಿ ಆತನ ದೇಹದ ಉಷ್ಣಾಂಶ 107 ಡಿಗ್ರಿವರೆಗೂ ತಲುಪಿತ್ತು. ಕೊನೆಗೆ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಬೆಳಗ್ಗೆ ಆತ ಸಾವನ್ನಪ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಕಳೆದ ಮೂರು ತಿಂಗಳಲ್ಲಿ ದೇಶಾದ್ಯಂತ 16 ಸಾವಿರಕ್ಕೂ ಹೆಚ್ಚು ಉಷ್ಣಹವೆ ಸಂಬಂಧಿ ಪ್ರಕರಣಗಳು ಜನರಲ್ಲಿ ಕಾಣಿಸಿಕೊಂಡಿದ್ದು, ಅದರಲ್ಲಿ 60ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಮೇ 22ರಂದು ಒಂದೇ ದಿನ ದೇಶಾದ್ಯಂತ 486 ಮಂದಿಗೆ ಸನ್‌ಸ್ಟ್ರೋಕ್ ಆಗಿತ್ತು.