ನವದೆಹಲಿ: ಹರ್ಯಾಣ ಮತ್ತು ಜಮ್ಮು-ಕಾಶ್ಮೀರ ಚುನಾವಣೆಯ ಫಲಿತಾಂಶಗಳು, ಅ.5ರಂದು ಪ್ರಕಟವಾಗಿದ್ದ ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳನ್ನು ಸುಳ್ಳಾಗಿಸಿವೆ. ಇದು ಜನತೆ ಮತ್ತೊಮ್ಮೆ ಸಮೀಕ್ಷೆಗಳ ವಿಶ್ವಾಸಾರ್ಹತೆ ಪ್ರಶ್ನಿಸುವಂತೆ ಮಾಡಿದೆ.
ಇತ್ತೀಚೆಗೆ ಲೋಕಸಭೆ ಚುನಾವಣೆ ವೇಳೆಯೂ ಬಿಜೆಪಿಗೆ ಭರ್ಜರಿ ಬಹುಮತ ಎಂದು ಅನೇಕ ಸಮೀಕ್ಷೆ ಹೇಳಿದ್ದವು. ಆದರೆ ಅವು ಸುಳ್ಳಾಗಿದ್ದವು.ಹರ್ಯಾಣ:ರಾಜ್ಯದಲ್ಲಿ ಹ್ಯಾಟ್ರಿಕ್ ಕನಸಿನಲ್ಲಿದ್ದ ಬಿಜೆಪಿಗೆ ಆಘಾತ ಎದುರಾಗಲಿದೆ. ಕಾಂಗ್ರೆಸ್ ಸ್ಪಷ್ಟ ಬಹುಮತೊಂದಿಗೆ ದಶಕದ ಬಳಿಕ ಅಧಿಕಾರಕ್ಕೆ ಬರಲಿದೆ ಎಂದು ಬಹುತೇಕ ಸಮೀಕ್ಷೆಗಳು ಹೇಳಿದ್ದವು.ಆ್ಯಕ್ಸಿಸ್ ಮೈ ಇಂಡಿಯಾ ಕಾಂಗ್ರೆಸ್‌ಗೆ 53-65, ರಿಪಬ್ಲಿಕ್ -ಮ್ಯಾಟ್ರೈಜ್ 55-62, ದೈನಿಕ್ ಭಾಸ್ಕರ್ 44-54 ಸ್ಥಾನ ನೀಡಿತ್ತು. ಆ್ಯಕ್ಸಿಸ್ ಮೈ ಇಂಡಿಯಾ ಬಿಜೆಪಿಗೆ 18-28, ರಿಪಬ್ಲಿಕ್ -ಮ್ಯಾಟ್ರೈಜ್ 18-24, ದೈನಿಕ್ ಭಾಸ್ಕರ್ 15-29 ಸ್ಥಾನ ನೀಡಿತ್ತು. ಆದರೆ ಈ ಸಮೀಕ್ಷೆಗಳು ಪೂರ್ಣ ಉಲ್ಟಾ ಆಗಿವೆ. ರಾಜ್ಯದಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ.
ಜಮ್ಮು-ಕಾಶ್ಮೀರ:ಕೆಲವು ಸಮೀಕ್ಷೆಗಳು ನ್ಯಾಷನಲ್ ಕಾನ್ಫರೆನ್ಸ್ - ಕಾಂಗ್ರೆಸ್ ಮೈತ್ರಿಕೂಟ ಅತಿಹೆಚ್ಚು ಸ್ಥಾನ ಪಡೆದರೂ ಬಹುಮತಕ್ಕೆ ಅಗತ್ಯವಾದ 46 ಸ್ಥಾನಗಳಿಗಿಂತ ಕೊಂಚ ಹಿಂದುಳಿಯಬಹುದು ಎಂದು ಹೇಳಿದ್ದವು. ಆದರೆ ಇಲ್ಲೂ ಸಮೀಕ್ಷೆಗಳು ಉಲ್ಟಾ ಆಗಿ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರಸ್ ಸ್ಪಷ್ಟಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ.
ಆ್ಯಕ್ಸಿಸ್ ಮೈ ಇಂಡಿಯಾ ಎನ್‌ಸಿ- ಕಾಂಗ್ರೆಸ್‌ಗೆ 35-45, ರಿಪಬ್ಲಿಕ್ -ಗುಲಿಸ್ತಾನ್ 31-36, ದೈನಿಕ್ ಭಾಸ್ಕರ್ 35-40 ಸ್ಥಾನ ನೀಡಿತ್ತು.ಇನ್ನು ಆ್ಯಕ್ಸಿಸ್ ಮೈ ಇಂಡಿಯಾ ಬಿಜೆಪಿಗೆ 24-34, ರಿಪಬ್ಲಿಕ್ - ಗುಲಿಸ್ತಾನ್ 28-30, ದೈನಿಕ್ ಭಾಸ್ಕರ್ 20-25 ಸ್ಥಾನ ನೀಡಿತ್ತು.
--ಸಮೀಕ್ಷೆಗಳೆಲ್ಲ ಟೈಂಪಾಸ್
ಇತ್ತೀಚಿನ ಲೋಕಸಭಾ ಚುನಾವಣೆಯಲ್ಲಿನ ವೈಫಲ್ಯದ ಹೊರತಾಗಿಯೂ ಚಾನೆಲ್‌ಗಳು ಮತ್ತೆ ಎಕ್ಸಿಟ್ ಪೋಲ್ ಬಗ್ಗೆ ತಲೆಕೆಡಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ. ಆದರೆ ಚಾನೆಲ್, ವಾಟ್ಸಪ್ ಮತ್ತು ಜಾಲತಾಣಗಳಲ್ಲಿ ಗದ್ದಲವನ್ನು ನಾನು ಬದಿಗೊತ್ತುತ್ತೇನೆ. ಏಕೆಂದರೆ ಅ.8ರಂದು ಮತ ಎಣಿಕೆಯ ದಿನ ಯಾವ ಅಂಕಿ ಸಂಖ್ಯೆ ಹೊರಬೀಳುತ್ತದೆಯೋ ಅದು ಮುಖ್ಯ. ಉಳಿದಿದ್ದೆಲ್ಲಾ ಟೈಂ ಪಾಸ್.ಒಮರ್ ಅಬ್ದುಲ್ಲಾ (ಅ.5ರಂದು ಚುನಾವಣೋತ್ತರ ಸಮೀಕ್ಷೆ ದಿನ ನೀಡಿದ್ದ ಹೇಳಿಕೆ)
==ಕರ್ನಾಟಕ ರೀತಿ ಗ್ಯಾರಂಟಿ ಭರವಸೆ ನೀಡಿದ್ದ ಕಾಂಗ್ರೆಸ್‌ಗೆ ನಿರಾಸೆ
ಶ್ರೀನಗರ/ಚಂಡೀಗಢ: ಹರ್ಯಾಣ ಹಾಗೂ ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಕರ್ನಾಟಕ ಹಾಗೂ ತೆಲಂಗಾಣ ಮಾದರಿಯಲ್ಲಿ ಹಲವು ಉಚಿತ ಕೊಡುಗೆಗಳ ಗ್ಯಾರಂಟಿ ಘೋಷಿಸಿದ್ದರೂ ಅಲ್ಲಿ ಅವು ಫಲ ನೀಡಿಲ್ಲ.ಹರ್ಯಾಣದಲ್ಲಿ ಕಾಂಗ್ರೆಸ್ 7 ಗ್ಯಾರಂಟಿ ಭರವಸೆ ನೀಡಿತ್ತು. ಆದರೆ ಕೇವಲ 37 ಸ್ಥಾನ ಗಳಿಸಿ ಸೋತಿದೆ. ಇನ್ನು ಕಾಶ್ಮೀರದಲ್ಲಿ ಎನ್‌ಸಿ ಜತೆ ಮೈತ್ರಿ ಮಾಡಿಕೊಂಡು 32 ಸ್ಥಾನಗಳಲ್ಲಿ ಕಣಕ್ಕಿಳಿದಿತ್ತು. ಆದರೆ ಕೇವಲ 6 ಕ್ಷೇತ್ರಗಳಲ್ಲಿ ಗೆದ್ದಿದೆ.ಕಾಶ್ಮೀರದಲ್ಲಿ ಎನ್‌ಸಿ ಹಾಗೂ ಕಾಂಗ್ರೆಸ್ ಮಿತ್ರಪಕ್ಷಗಳಾದರೂ ಪ್ರತ್ಯೇಕ ಪ್ರಣಾಳಿಕೆ ಪ್ರಕಟಿಸಿದ್ದವು. ಎನ್‌ಸಿ ಗ್ಯಾರಂಟಿಗಳನ್ನು ಪ್ರಕಟಿಸಿರಲಿಲ್ಲ. ಕಾಂಗ್ರೆಸ್ ಮಾತ್ರ 5 ಗ್ಯಾರಂಟಿ ಪ್ರಕಟಿಸಿತ್ತು.
==ಒಮರ್ ಅಬ್ದುಲ್ಲಾಗೆ 2 ಕ್ಷೇತ್ರದಲ್ಲೂ ಜಯ, ಮುಫ್ತಿ ಪುತ್ರಿಗೆ ಸೋಲು
ಶ್ರೀನಗರ: ಜಮ್ಮು-ಕಾಶ್ಮೀರ ವಿಧಾನಸಭೆ ಚುನಾವಣೆಯಲ್ಲಿ ಸಿಎಂ ಅಭ್ಯರ್ಥಿ ಎಂದೇ ಬಿಂಬಿತ ಆಗಿರುವ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಒಮರ್ ಅಬ್ದುಲ್ಲಾ ಅವರು ಬದ್ಗಾಂ ಹಾಗೂ ಗಂದರ್‌ಬಾಲ್ ಎರಡೂ ಕ್ಷೇತ್ರದಲ್ಲಿ ಜಯಿಸಿದ್ದಾರೆ. ಈ ಮೂಲಕ ಕಳೆದ ಲೋಕಸಭೆ ಚುನಾವಣೆಯಲ್ಲಿ ಅನುಭವಿಸಿದ್ದ ಸೋಲಿನ ನೋವನ್ನು ದೂರ ಮಾಡಿಕೊಂಡಿದ್ದಾರೆ. ಆದರೆ ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಅವರ ಪುತ್ರಿ ಅವರು ಬಿಜ್‌ಬೆಹಾರಾ ಕ್ಷೇತ್ರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಅಭ್ಯರ್ಥಿ ವಿರುದ್ಧ ಸೋತಿದ್ದಾರೆ.