ಜನರು ಸ್ಥಿರ, ಶಾಶ್ವತ, ಬದ್ಧತೆಯ ಸರ್ಕಾರಕ್ಕೆ ಮತ ನೀಡಿದ್ದಾರೆ
ಜಗತ್ತಿನ ಯಾವುದೇ ಶಕ್ತಿಯೂ ಕಾಶ್ಮೀರಕ್ಕಿನ್ನು ವಿಶೇಷ ಸ್ಥಾನ ಮರಳಿ ನೀಡಲು ಸಾಧ್ಯವಿಲ್ಲ
ನವದೆಹಲಿ: ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆ ಫಲಿತಾಂಶವು ದೇಶದ ಮೂಡ್ ಏನಿದೆ ಎಂಬುದರ ಸುಳಿವು ನೀಡಿದೆ. ಜನರು ಸ್ಥಿರ, ಶಾಶ್ವತ ಹಾಗೂ ಬದ್ಧತೆಯ ಸರ್ಕಾರಕ್ಕೆ ಮತ ನೀಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.ಜೊತೆಗೆ, 2024ರ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಲಿದೆ. ಜನರು ತಮ್ಮನ್ನು ಏಕೆ ಒಪ್ಪಿಕೊಳ್ಳುತ್ತಿಲ್ಲ ಎಂಬ ಬಗ್ಗೆ ವಿಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದೂ ನುಡಿದಿದ್ದಾರೆ.ಮಾಧ್ಯಮ ಸಂಸ್ಥೆಯೊಂದರ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಕೆಲವರು ಬಿಜೆಪಿಗೆ ರಾಷ್ಟ್ರ ಮಟ್ಟದಲ್ಲಿ ಮಾತ್ರ ಜನಬೆಂಬಲವಿದೆ. ರಾಜ್ಯಗಳಲ್ಲಿ ಬೆಂಬಲ ಇಲ್ಲ ಎಂದು ಹೇಳುತ್ತಿದ್ದರು. ಆ ನಂಬಿಕೆಯನ್ನೂ ವಿಧಾನಸಭೆ ಚುನಾವಣೆಗಳ ಫಲಿತಾಂಶ ಸುಳ್ಳಾಗಿಸಿದೆ. ನಾವು ಮೂರು ರಾಜ್ಯಗಳಲ್ಲಿ ಸರ್ಕಾರ ರಚನೆ ಮಾಡಿದ್ದಷ್ಟೇ ಅಲ್ಲ, ತೆಲಂಗಾಣದಲ್ಲೂ ಬಿಜೆಪಿಯ ಮತಗಳಿಕೆ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿದ್ದೇವೆ’ ಎಂದು ಹೇಳಿದರು.
ಕಾಶ್ಮೀರಕ್ಕಿನ್ನು ವಿಶೇಷ ಸ್ಥಾನ ಸಿಗದು:ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂಪಡೆಯಲು ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಮೋದಿ, ‘ಜಗತ್ತಿನ ಯಾವುದೇ ಶಕ್ತಿಯೂ ಇನ್ನು ಅದನ್ನು ಮರಳಿ ತರಲು ಸಾಧ್ಯವಿಲ್ಲ’ ಎಂದು ಮೋದಿ ಹೇಳಿದರು.
ಇಂಡಿಯಾ ಕೂಟದ ಷಡ್ಯಂತ್ರ ವಿಫಲ:ವಿಪಕ್ಷಗಳ ಇಂಡಿಯಾ ಒಕ್ಕೂಟದ ಬಗ್ಗೆ ಪ್ರತಿಕ್ರಿಯಿಸಿದ ಮೋದಿ, ‘ಇದು ಎದುರಿಗೊಂದು ರೀತಿಯಲ್ಲಿ ಕಾಣಿಸಿದರೆ, ತೆರೆಮರೆಯಲ್ಲಿ ಇದರ ಉದ್ದೇಶ ಬೇರೆಯೇ ಇದೆ. ಬಿಜೆಪಿಯ ಮತ ಒಡೆಯಬೇಕು ಎಂಬ ಉದ್ದೇಶಕ್ಕಾಗಿ ಅವರು ಈ ಮೈತ್ರಿಕೂಟ ರಚಿಸಿಕೊಂಡಿದ್ದಾರೆ. ಆದರೆ ಜನರು ಅವರ ಷಡ್ಯಂತ್ರವನ್ನು ವಿಫಲಗೊಳಿಸಿದ್ದಾರೆ’ ಎಂದು ಹೇಳಿದರು.