ಜು.15ಕ್ಕೆ ಮುಂಬೈನಲ್ಲಿ ದೇಶದ ಮೊದಲ ಟೆಸ್ಲಾ ಶೋರೂಂ ಉದ್ಘಾಟನೆ?

KannadaprabhaNewsNetwork |  
Published : Jul 11, 2025, 11:48 PM ISTUpdated : Jul 12, 2025, 04:53 AM IST
ಟೆಸ್ಲಾ | Kannada Prabha

ಸಾರಾಂಶ

ವಿಶ್ವದ ನಂ.1 ಶ್ರೀಮಂತ ಎಲಾನ್‌ ಮಸ್ಕ್‌ ಅವರ ಟೆಸ್ಲಾ ಕಾರುಗಳು ಭಾರತಕ್ಕೆ ಬರಲು ಸಜ್ಜಾಗಿವೆ. ಜು.15ರಂದು ಮುಂಬೈನಲ್ಲಿ, ದೇಶದ ಮೊದಲ ಟೆಸ್ಲಾ ಶೋರೂಂ ಉದ್ಘಾಟನೆಯಾಗಲಿದ್ದು, ಆಗಸ್ಟ್‌ನಿಂದ ಕಾರುಗಳ ಡೆಲಿವರಿ ಆರಂಭವಾಗಲಿದೆ ಎಂದು ವರದಿಯಾಗಿದೆ.

ಮುಂಬೈ: ವಿಶ್ವದ ನಂ.1 ಶ್ರೀಮಂತ ಎಲಾನ್‌ ಮಸ್ಕ್‌ ಅವರ ಟೆಸ್ಲಾ ಕಾರುಗಳು ಭಾರತಕ್ಕೆ ಬರಲು ಸಜ್ಜಾಗಿವೆ. ಜು.15ರಂದು ಮುಂಬೈನಲ್ಲಿ, ದೇಶದ ಮೊದಲ ಟೆಸ್ಲಾ ಶೋರೂಂ ಉದ್ಘಾಟನೆಯಾಗಲಿದ್ದು, ಆಗಸ್ಟ್‌ನಿಂದ ಕಾರುಗಳ ಡೆಲಿವರಿ ಆರಂಭವಾಗಲಿದೆ ಎಂದು ವರದಿಯಾಗಿದೆ. ಭಾರತಕ್ಕೆ ಡೆಲಿವರಿ ಆಗುವ ವೈ ಎಸ್‌ಯುವಿ ಮಾಡೆಲ್‌ನ ಕಾರುಗಳು ಚೀನಾದ ಕಂಪನಿಯಲ್ಲಿ ತಯಾರಾಗಿವೆ.

ಮುಂದಿನ ವಾರದಿಂದಲೇ ಗ್ರಾಹಕರು ಬುಕಿಂಗ್‌ ಆರಂಭಿಸಬಹುದು. ಆದರೆ ಮುಂಬೈನ್‌ ಶೋರೂಂ ಉದ್ಘಾಟನೆಯಾದ ಮೊದಲ ವಾರ ವಿಐಪಿಗಳು ಮತ್ತು ವ್ಯಾಪಾರ ಪಾಲುದಾರರಿಗೆ ಮೀಸಲಾಗಿರುತ್ತದೆ. ಬಳಿಕ ಸಾರ್ವಜನಿಕರಿಗೆ ತೆರೆದುಕೊಳ್ಳುತ್ತದೆ ಎನ್ನಲಾಗಿದೆ. 2ನೇ ಶೋರೂಂ ಜುಲೈ ಅಂತ್ಯಕ್ಕೆ ದೆಹಲಿಯಲ್ಲಿ ತಲೆಯೆತ್ತುವ ನಿರೀಕ್ಷೆಯಿದೆ.

ನೇಪಾಳ ಮೂಲಕ ಭಾರತದ ಮೇಲೆ ಪಾಕ್‌ ಉಗ್ರರ ದಾಳಿ ಸಾಧ್ಯತೆ: ನೇಪಾಳ ನಾಯಕ

ಕಠ್ಮಂಡು: ಸಾಧ್ಯವಾದ ಮಾರ್ಗಗಳಲ್ಲೆಲ್ಲಾ ಗಡಿನುಸುಳಿ, ಭಾರತಕ್ಕೆ ತಲೆನೋವು ತಂದೊಡ್ಡುತ್ತಿರುವ ಲಷ್ಕರ್‌, ಜೈಶ್‌ನಂತಹ ಪಾಕಿಸ್ತಾನ ಪೋಷಿತ ಉಗ್ರರು, ಇದಕ್ಕಾಗಿ ನೇಪಾಳವನ್ನೂ ಬಳಸಿಕೊಳ್ಳಬಹುದು ಎಂದು ನೇಪಾಳ ಅಧ್ಯಕ್ಷರ ಸಲಹೆಗಾರ ಸುನಿಲ್‌ ಬಹಾದುರ್‌ ಥಾಪಾ ಎಚ್ಚರಿಸಿದ್ದಾರೆ.ದಕ್ಷಿಣ ಏಷ್ಯಾ ಪ್ರದೇಶದಲ್ಲಿನ ಭಯೋತ್ಪಾದನಾ ಬೆದರಿಕೆಗಳನ್ನು ನಿಗ್ರಹಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ನೇಪಾಳ ಅಂತಾರಾಷ್ಟ್ರೀಯ ಸಹಕಾರ ಮತ್ತು ನಿಶ್ಚಯ ಸಂಸ್ಥೆ ಆಯೋಜಿಸಿದ ಉನ್ನತ ಮಟ್ಟದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಥಾಪಾ, ‘ಭಾರತದ ಮೇಲೆ ದಾಳಿ ಮಾಡಲು ಉಗ್ರರು ನೇಪಾಳವನ್ನು ಮಾರ್ಗವಾಗಿ ಬಳಸಬಹುದು’ ಎಂದು ಹೇಳಿದ್ದಾರೆ.

ಭಾರತ-ನೇಪಾಳ ನಡುವೆ 1,751 ಕಿ.ಮೀ. ಗಡಿ ಇದ್ದು, ಭದ್ರತಾ ತಪಾಸಣೆಯೂ ಅಷ್ಟಾಗಿಲ್ಲ. ಇದನ್ನು ಬಳಸಿಕೊಂಡು ಉಗ್ರರು, ತಮ್ಮ ಗುರುತನ್ನು ಮರೆಮಾಚಲು ನೇಪಾಳದ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ಗಡಿದಾಟುವ ಸಾಧ್ಯತೆಯಿದೆ. ಹಲವು ವರ್ಷಗಳಿಂದ ಇಂತಹ ಅನೇಕ ಉಗ್ರರನ್ನು ಸೆರೆಹಿಡಿಯಲಾಗಿದೆ.

ದೆಹಲಿಯಲ್ಲಿ ಸತತ 2ನೇ ದಿನವೂ ಭೂಕಂಪ: ಯಾವುದೇ ಹಾನಿಯಿಲ್ಲ

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸತತ 2ನೇ ದಿನ ಭೂಮಿ ಕಂಪಿಸಿದೆ. ಗುರುವಾರವಷ್ಟೇ 4.4 ತೀವ್ರತೆಗೆ ನಲುಗಿದ್ದ ರಾಜಧಾನಿಯಲ್ಲಿ ಶುಕ್ರವಾರವೂ ಸಹ 3.7 ತೀವ್ರತೆಯ ಭೂಕಂಪವಾಗಿದೆ. ಇದರಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ.ಶುಕ್ರವಾರ ಸಂಜೆ 7:49ರ ವೇಳೆಗೆ ದೆಹಲಿ ಸಮೀಪ ಹರ್ಯಾಣದ ಝಜ್ಜರ್‌ ಎಂಬಲ್ಲಿ ಕೇಂದ್ರಿತವಾಗಿ ಭೂಮಿ ಕಂಪಿಸಿದೆ. ಇದರಿಂದಾಗಿ ಆತಂಕಕ್ಕೊಳಗಾದ ಜನರು ಕೆಲ ಕಾಲ ಮನೆಯಿಂದ ಹೊರಬಂದರು. ಗುರುವಾರವೂ ಸಹ ಇದೇ ಪ್ರದೇಶ ಕೇಂದ್ರಿತವಾಗಿ 4.4 ತೀವ್ರತೆಯಲ್ಲಿ ಭೂಮಿ ಕಂಪಿಸಿತ್ತು.

ಸತತ 2ನೇ ದಿನದ ಭೂಕಂಪದಿಂದಾಗಿ ದೆಹಲಿಯ ಜನ ಆತಂಕಕ್ಕೊಳಗಾಗಿದ್ದಾರೆ.

ಬಿಜೆಪಿ ಫೈರ್‌ಬ್ರಾಂಡ್‌ ಶಾಸಕ ರಾಜಾ ಸಿಂಗ್‌ ರಾಜೀನಾಮೆ ಅಂಗೀಕಾರ

ನವದೆಹಲಿ: ತೆಲಂಗಾಣದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ನೇಮಕದ ವಿಚಾರವಾಗಿ ಅಸಮಾಧಾನಗೊಂಡು ಪಕ್ಷಕ್ಕೆ ಫೈರ್‌ಬ್ರಾಂಡ್‌ ಶಾಸಕ ರಾಜಾ ಸಿಂಗ್‌ ಅವರು ಸಲ್ಲಿಸಿದ್ದ ರಾಜೀನಾಮೆಯನ್ನು ಬಿಜೆಪಿ ಅಂಗೀಕರಿಸಿದೆ.ಕಳೆದ ತಿಂಗಳು ತೆಲಂಗಾಣದ ಬಿಜೆಪಿಗೆ ರಾಮಚಂದ್ರ ರಾವ್‌ ಅವರನ್ನು ನೇಮಿಸುವ ಬಗ್ಗೆ ಅಸಮಾಧಾನಗೊಂಡಿದ್ದ ರಾಜಾ ಸಿಂಗ್‌ ಅವರು ಅಂದಿನ ಅಧ್ಯಕ್ಷ ಜಿ.ಕಿಶನ್‌ ರೆಡ್ಡಿ ಅವರಿಗೆ ಪತ್ರ ಬರೆದು ನಿರ್ಧಾರ ಸರಿಯಿಲ್ಲ ಎಂದು ಹೇಳಿದ್ದರು. ಜೊತೆಗೆ ರಾಜೀನಾಮೆ ಸಲ್ಲಿಸಿದ್ದರು. ಇದನ್ನು ಅಂಗೀಕರಿಸಿರುವ ಬಿಜೆಪಿ,‘ರಾಜಾ ಸಿಂಗ್‌ ಅವರ ಹೇಳಿಕೆಗಳು ಪಕ್ಷದ ನಿಲುವು ಮತ್ತು ಸಿದ್ಧಾಂತಗಳಿಗೆ ವಿರುದ್ಧವಾಗಿದೆ. ಸಿಂಗ್‌ ಅಭಿಪ್ರಾಯಗಳು ಅಪ್ರಸ್ತುತವಾಗಿದೆ’ ಎಂದು ಹೇಳಿದೆ.

ಇನ್ಮು ಕೇಂದ್ರ ಸರ್ಕಾರಿ ಕಚೇರಿಗಳಲ್ಲೂ ಎಣ್ಣೆ, ಸಕ್ಕರೆ ಬಗ್ಗೆ ಅರಿವು ಫಲಕ

ನವದೆಹಲಿ: ಜನರಲ್ಲಿ ಸಕ್ಕರೆ ಮತ್ತು ಎಣ್ಣೆ ಪದಾರ್ಥದ ಬಳಕೆ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಕೇಂದ್ರ ಸರ್ಕಾರವು ಎಲ್ಲಾ ಸರ್ಕಾರಿ ಕಚೇರಿಗಳು, ರೈಲ್ವೆ ನಿಲ್ದಾಣಗಳಲ್ಲಿ, ಆಸ್ಪತ್ರೆಯಲ್ಲಿ ಬೋರ್ಡ್‌ಗಳನ್ನು ಅಳವಡಿಸಲಿದೆ.ಈ ಮೊದಲು ಸಿಬಿಎಸ್‌ಇ ತನ್ನ ಎಲ್ಲಾ ಶಾಲೆಗಳಲ್ಲಿ ಮಕ್ಕಳಿಗೆ ಜಾಗೃತೆ ಉಂಟು ಮಾಡಲು ಬೋರ್ಡುಗಳನ್ನು ಅಳವಡಿಸಿತ್ತು. ಇದರಿಂದ ಪ್ರೇರೇಪಿತವಾಗಿರುವ ಕೇಂದ್ರ ಆರೋಗ್ಯ ಇಲಾಖೆಯು ಎಲ್ಲಾ ಇಲಾಖೆಗಳ ಕಚೇರಿಗಳಲ್ಲಿಯೂ ಸಕ್ಕರೆ ಮತ್ತು ಎಣ್ಣೆಯಿಂದಾಗುವ ತೊಂದರೆಗಳ ಬಗ್ಗೆ ಮಾಹಿತಿ ನೀಡುವ ಬೋರ್ಡುಗಳನ್ನು ಅಳವಡಿಸಲಿದೆ. ಈ ಮೂಲಕ ಜನರಿಗೆ ಸಕ್ಕರೆ ಮತ್ತು ಎಣ್ಣೆ ಪದಾರ್ಥಗಳನ್ನು ಸರಿಯಾದ ಕ್ರಮದಲ್ಲಿ ಸೇವಿಸುವ ಅರಿವು ಮೂಡಿಸಲಿದೆ.

PREV
Read more Articles on