ನವದೆಹಲಿ: ಕಳೆದ ಒಂದು ವರ್ಷದಲ್ಲಿ, ಪ್ರಧಾನಮಂತ್ರಿಗಳ ಕಚೇರಿ (ಪಿಎಂಒ) ಸೇರಿದಂತೆ ಕೇಂದ್ರ ಸರ್ಕಾರದ 12 ಲಕ್ಷ ಇಮೇಲ್ ಖಾತೆಗಳು ರಾಷ್ಟ್ರೀಯ ಮಾಹಿತಿ ಕೇಂದ್ರ (ಎನ್‌ಐಸಿ) ಆಧರಿತ ವ್ಯವಸ್ಥೆಯಿಂದ ಸ್ವದೇಶಿ ಝೋಹೋ ವೇದಿಕೆಗೆ ಸ್ಥಳಾಂತರಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಇಮೇಲ್ ಸೇವೆಗಳನ್ನು ಈವರೆಗೆ ಎನ್‌ಐಸಿ ನಿರ್ವಹಿಸುತ್ತಿತ್ತು. ಆದರೆ, ಈಗ ಈ ಖಾತೆಗಳ ಡೇಟಾ ಸಂಗ್ರಹಣೆ ಮತ್ತು ಸಂಸ್ಕರಣೆಯ ಜವಾಬ್ದಾರಿಯನ್ನು ಝೋಹೋ ಕಂಪನಿಗೆ ವಹಿಸಲಾಗಿದೆ. ಇಮೇಲ್ ಖಾತೆಗಳ ಡೊಮೇನ್ ಹೆಸರುಗಳು (gov.in ಅಥವಾ nic.in) ಬದಲಾಗದೆ ಉಳಿದಿವೆ, ಆದರೆ ಡೇಟಾವನ್ನು ಝೋಹೋ ಸರ್ವರ್‌ಗಳಲ್ಲಿ ಸಂಗ್ರಹಿಸಲಾಗುತ್ತದೆ. ಸ್ವದೇಶಿ ತಂತ್ರಜ್ಞಾನವನ್ನು ಉತ್ತೇಜಿಸುವ ನಿಟ್ಟಿನಲ್ಲಿ, ಕಳೆದ ವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ಸಚಿವರು ತಮ್ಮ ವೈಯಕ್ತಿಕ ಇಮೇಲ್ ಖಾತೆಗಳನ್ನು ಗೂಗಲ್‌ನಿಂದ ಝೋಹೋಗೆ ಬದಲಿಸಿದ್ದರು.
ಸೆಪ್ಟೆಂಬರ್‌ನಲ್ಲಿ ಚಿಲ್ಲರೆ ಹಣದುಬ್ಬರ ಶೇ.1.54ಕ್ಕೆ ಇಳಿಕೆ: 8 ವರ್ಷದ ಕನಿಷ್ಠ
ನವದೆಹಲಿ: ತರಕಾರಿ, ಹಣ್ಣು, ಬೇಳೆಕಾಳುಗಳ ಬೆಲೆ ಇಳಿಕೆ ಬೆನ್ನಲ್ಲೇ ದೇಶದಲ್ಲಿ ಸೆಪ್ಟೆಂಬರ್ ತಿಂಗಳ ಚಿಲ್ಲರೆ ಹಣದುಬ್ಬರವು 8 ವರ್ಷಗಳಲ್ಲಿಯೇ ಅತ್ಯಂತ ಕನಿಷ್ಠ ಮಟ್ಟ ತಲುಪಿದ್ದು ಶೇ.1.54ರಷ್ಟು ದಾಖಲಾಗಿದೆ. 2025ರಲ್ಲಿ ಚಿಲ್ಲರೆ ಹಣದುಬ್ಬರವು ಶೇ.2ಕ್ಕಿಂತ ಕಡಿಮೆಯಾಗಿದ್ದು ಇದು ಎರಡನೇ ಬಾರಿ. ಅಲ್ಲದೇ 2017ರ ಜೂನ್ ತಿಂಗಳನ್ನು ಹೊರತು ಪಡಿಸಿ ಆ ಬಳಿಕ ಎಂದೂ ಇಷ್ಟೊಂದು ಕಡಿಮೆ ಮಟ್ಟಕ್ಕೆ ಇಳಿದಿರಲಿಲ್ಲ. 8 ವರ್ಷಗಳ ಹಿಂದೆ ಶೇ.1.46 ದಾಖಲಾಗಿತ್ತು. ಆಗಸ್ಟ್‌ಗೆ ಹೋಲಿಸಿದರೆ ಸೆಪ್ಟೆಂಬರ್ ತಿಂಗಳಿನಲ್ಲಿ 0. 53ರಷ್ಟು ಕಡಿಮೆಯಾಗಿದೆ. ಇನ್ನು ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಸೆಪ್ಟೆಂಬರ್ ತಿಂಗಳಿನಲ್ಲಿ ಆಹಾರ ಹಣದುಬ್ಬರವೂ ಇಳಿಕೆ ಕಂಡಿದೆ. ಹಿಂದಿನ ತಿಂಗಳಿಗಿಂತ ಶೇ.1.64ರಷ್ಟು ಕಡಿಮೆಯಾಗಿದ್ದು, ಇದು 2018ರ ಬಳಿಕದ ಕನಿಷ್ಠ.
ಔರಂಗಜೇಬ್‌ನನ್ನೇ ಹೂತು ಹಾಕಿದ್ದೇವೆ, ಮೋದಿ ಯಾವ ಲೆಕ್ಕ?: ರಾವುತ್ ವಿವಾದ
ಮುಂಬೈ: ಒಂದಿಲ್ಲೊಂದು ವಿವಾದಗಳಿಂದಲೇ ಸುದ್ದಿ ಆಗುತ್ತಿರುವ ಶಿವಸೇನೆ ಯುಬಿಟಿ ಬಣದ ನಾಯಕ ಸಂಜಯ್ ರಾವುತ್ ಮತ್ತೊಂದು ವಿವಾದಾತ್ಮ ಹೇಳಿಕೆ ನೀಡಿದ್ದು, ‘ ಔರಂಗಜೇಬ್‌ನನ್ನೇ ಸಮಾಧಿ ಮಾಡಿದ್ದೇವೆ. ಹಾಗಿದ್ದರೆ ಮೋದಿ ಯಾವ ಲೆಕ್ಕ’ ಎಂದು ಕೀಳು ಹೇಳಿಕೆ ನೀಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡುವ ವೇಳೆ ಅವರು, ‘ ಗುಜರಾತಿನಲ್ಲಿ ಹುಟ್ಟಿದ ಔರಂಗಜೇಬ್ 27 ವರ್ಷ ಮಹಾರಾಷ್ಟ್ರ ವಶಪಡಿಸಿಕೊಳ್ಳಲು ಹೋರಾಡಿದ. ಕೊನೆಯಲ್ಲಿ ಅವನನ್ನು ಇಲ್ಲಿ ಸಮಾಧಿ ಮಾಡಿದ್ದೇವೆ. ಹಾಕಿದ್ದಾರೆ ಪ್ರಧಾನಿ ನರೇಂದ್ರ ಮೋದಿ ಯಾವ ಲೆಕ್ಕ?’ ಎಂದಿರುವುದು ಸದ್ಯ ವಿವಾದಕ್ಕೆ ಕಾರಣವಾಗಿದೆ.
ಆರೆಸ್ಸಿಸ್ಸಿಗ ಆತ್ಮಹತ್ಯೆ ತನಿಖೆಗೆ ಪ್ರಿಯಾಂಕಾ ಒತ್ತಾಯ: ಬಿಜೆಪಿ ಕಿಡಿ
ತಿರುವನಂತಪುರಂ: ಆರ್‌ಎಸ್‌ಎಸ್ ಶಿಬಿರದಲ್ಲಿ ಲೈಂಗಿಕ ಕಿರುಕುಳ ನಡೆದಿದೆ ಎಂದು ಆರೋಪಿಸಿ ಕೇರಳದಲ್ಲಿ 26 ವರ್ಷದ ಟೆಕ್ಕಿ ಆನಂದು ಅಜಿ ಎಂಬ ಟೆಕ್ಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಪ್ರಕರಣ ಇದೀಗ ರಾಜಕೀಯ ಜಟಾಪಟಿಗೆ ಕಾರಣವಾಗಿದೆ. ಈ ಕುರಿತ ತನಿಖೆಗೆ ಸದೆ ಪ್ರಿಯಾಂಕಾ ಗಾಂಧಿ ಆಗ್ರಹಿಸಿದ್ದರೆ, ಬಿಜೆಪಿ ಸತ್ಯಾಂಶ ಬಯಲಿಗೆ ಒತ್ತಾಯಿಸಿದೆ.ಕೊಟ್ಟಾಯಂ ಮೂಲದ ಆನಂದು ಅಜಿ ಲಾಡ್ಜ್‌ವೊಂದರಲ್ಲಿ 15 ಪುಟಗಳ ಡೆತ್‌ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಅದರಲ್ಲಿ ತನ್ನ ಸಾವಿಗೆ ಆರ್‌ಎಸ್‌ಎಸ್ ಶಿಬಿರದಲ್ಲಿ ನಡೆದ ಲೈಂಗಿಕ ಕಿರುಕುಳವೇ ಕಾರಣ ಎಂದು ಆರೋಪಿಸಿದ್ದಾನೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ,‘ ಇದು ನಿಜವಾಗಿದ್ದರೆ ಖಂಡಿತ ಭಯಾನಕ. ದೇಶಾದ್ಯಂತ ಲಕ್ಷಾಂತರ ಮಕ್ಕಳು, ಯುವಕರು ಶಿಬಿರದಲ್ಲಿ ಭಾಗಿಯಾಗುತ್ತಾರೆ. ಆರ್‌ಎಸ್‌ಎಸ್ ನಾಯಕರು ಮಧ್ಯಪ್ರವೇಶಿಸಿ ಕಠಿಣ ಕ್ರಮಕೈಗೊಳ್ಳಬೇಕು’ ಎಂದಿದ್ದಾರೆ.
ಇತ್ತ ಬಿಜೆಪಿಯೂ ಸತ್ಯಾಸತ್ಯತೆ ಬಯಲಿದೆ ಆಗ್ರಹಿಸಿದೆ. ಟೆಕ್ಕಿ ಸಾವಿನ ವಿಚಾರದಲ್ಲಿ ಕಾಂಗ್ರೆಸ್ ನೀಚ ರಾಜಕೀಯ ಮಾಡುತ್ತಿದ್ದು, ಸತ್ಯಾಂಶ ಬಯಲಿಗೆ ಬರಬೇಕು ಎಂದು ಆಗ್ರಹಿಸಿದೆ.