ನವದೆಹಲಿ: ಎಲೆಕ್ಟ್ರಾನಿಕ್ ಮತಯಂತ್ರಗಳ (ಇವಿಎಂ) ಕುರಿತು ಪದೇ ಪದೇ ಅನುಮಾನ ವ್ಯಕ್ತವಾಗುತ್ತಿರುವುದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ಎಲ್ಲದರ ಬಗ್ಗೆಯೂ ಅನುಮಾನ ವ್ಯಕ್ತಪಡಿಸುವುದು ಸರಿಯಲ್ಲ. ಅತಿಯಾದ ಅನುಮಾನ ಕೂಡಾ ದೊಡ್ಡ ಜೊತೆಗೆ ಪದೇ ಪದೇ ಇಂಥ ನಿಲವು ವ್ಯಕ್ತಪಡಿಸಿದರೆ ಜನರಲ್ಲೂ ಗೊಂದಲ ಸೃಷ್ಟಿಯಾಗುತ್ತದೆ. ಚುನಾವಣಾ ಆಯೋಗ ಒಳ್ಳೆಯ ಕೆಲಸ ಮಾಡಿದಾಗ ಅದನ್ನು ಮೆಚ್ಚುವ ಕೆಲಸ ಮಾಡಿ ಎಂದು ಸಲಹೆ ನೀಡಿದೆ.
ಇವಿಎಂ ಬದಲು ಮರಳಿ ಬ್ಯಾಲೆಟ್ ಪೇಪರ್ ಮತದಾನ ವ್ಯವಸ್ಥೆ ಜಾರಿ ಮಾಡಬೇಕು ಎಂದು ಕೋರಿ ಸಲ್ಲಿಸಲಾದ ಅರ್ಜಿ ವಿಚಾರಣೆ ವೇಳೆ ಈ ಸಲಹೆ ನೀಡಿದ ನ್ಯಾ.ಸಂಜೀವ್ ಖನ್ನಾ ಅವರನ್ನೊಳಗೊಂಡ ನ್ಯಾಯಪೀಠ, ‘ಚುನಾವಣಾ ಪ್ರಕ್ರಿಯೆ ಪವಿತ್ರವಾದದ್ದು. ಅದರ ಪಾವಿತ್ರ್ಯತೆ ಕಾಪಾಡಿ. ಯಾರಿಗೂ ಕೂಡ ಅವರ ನಿರೀಕ್ಷೆಯಂತೆ ಕೆಲಸ ನಡೆಯುತ್ತಿಲ್ಲ ಎನ್ನುವ ಆತಂಕವನ್ನು ಮೂಡಿಸಬೇಡಿ’ ಎಂದು ಅರ್ಜಿದಾರರಿಗೆ ಕಿವಿ ಮಾತು ಹೇಳಿತು.
ಪದೇ ಪದೇ ಛೀಮಾರಿ ಹಾಕಿದರೂ ಕೂಡ ಈ ರೀತಿಯ ಅರ್ಜಿ ಸಲ್ಲಿಸಿ ಮತದಾರರ ಪ್ರಜಾಪ್ರಭುತ್ವ ಆಯ್ಕೆಯನ್ನು ತಮಾಷೆಯನ್ನಾಗಿ ನೋಡಲಾಗುತ್ತಿದೆ. ಚುನಾವಣಾ ಆಯೋಗ ಒಳ್ಳೆಯ ಕೆಲಸ ಮಾಡಿದರೆ ಪ್ರಶಂಶಿಸಬೇಕು. ಸುಮ್ಮನೆ ಅನುಮಾನ ಪಟ್ಟರೆ ಜನರಿಗೂ ಗೊಂದಲ ಸೃಷ್ಟಿಯಾಗುತ್ತದೆ. ಮತದಾನದ ಮೇಲೆಯೂ ಪರಿಣಾಮ ಬೀಳಲಿದೆ’ ಎಂದು ನ್ಯಾಯಪೀಠ ಹೇಳಿತು.
ಇದೇ ಸಂದರ್ಭದಲ್ಲಿ ಚುನಾವಣಾ ಆಯೋಗ ಇವಿಎಂ ಕಾರ್ಯ ನಿರ್ವಹಣೆಯ ಬಗ್ಗೆ ಕೋರ್ಟ್ ಗೆ ವಿವರವಾಗಿ ಮಾಹಿತಿ ಸಲ್ಲಿಕೆ ಮಾಡಿತು. ‘ ಯಾವ ಪಕ್ಷಗಳಿಗೆ ಇವಿಎಂಗಳಲ್ಲಿ ಯಾವ ಕ್ರಮ ಸಂಖ್ಯೆಯ ಬಟನ್ ನೀಡಲಾಗುತ್ತದೆ, ಯಾವ ರಾಜ್ಯ ಅಥವಾ ಯಾವ ಕ್ಷೇತ್ರಗಳಿಗೆ ಯಾವ ಇವಿಎಂ ಯಂತ್ರಗಳನ್ನು ನೀಡಲಾಗುತ್ತದೆ ಎಂಬ ವಿಷಯ ಸ್ವತಃ ಇವಿಎಂ ತಯಾರಿಸಿದವರಿಗೂ ಗೊತ್ತಾಗುವುದಿಲ್ಲ’ ಎಂದು ಮಾಹಿತಿ ನೀಡಿತು.