ಏರಿಂಡಿಯಾ ಆಯ್ತು, ಇಂಡಿಗೋ
ಟಿಕೆಟ್ ದರ ಇಂದಿನಿಂದ ಹೆಚ್ಚಳನವದೆಹಲಿ: ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಉಂಟಾಗಿರುವ ಇಂಧನ ಬೆಲೆ ಏರಿಕೆಯನ್ನು ಸರಿದೂಗಿಸಲು ಏರ್ ಇಂಡಿಯಾ ಬಳಿಕ ಭಾರತದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ ಇಂಡಿಗೋ ಕೂಡ ತನ್ನ ಟಿಕೆಟ್ ದರವನ್ನು ಹೆಚ್ಚಿಸಿದೆ.
ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನಗಳಿಗೆ 425 ರು.ನಿಂದ 2,300 ರು.ವರೆಗೆ ಇಂಧನ ಶುಲ್ಕ, ಹೊಸ ದರ ಮಾ.14ರಿಂದಲೇ ಜಾರಿಗೆ ಬರಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಇದರ ಬೆನ್ನಲ್ಲೇ ಸ್ಪೈಸ್‌ಜೆಟ್ ಮತ್ತು ಆಕಾಸಾ ಸಂಸ್ಥೆಗಳೂ ಈ ಕ್ರಮವನ್ನು ಅನುಸರಿಸಲಿವೆ ಎಂದು ಮೂಲಗಳಿಂದ ತಿಳಿದುಬಂದಿದೆ.===
ಭಾರತ ರೀತಿ ಇತರೆ ದೇಶಗಳಿಗೂ
ರಷ್ಯಾ ತೈಲ ಖರೀದಿಗೆ ಅವಕಾಶ
- ತೈಲ ಖರೀದಿಗೆ ತಾತ್ಕಾಲಿಕ ವಿನಾಯ್ತಿ ನೀಡಿದ ಅಮೆರಿಕವಾಷಿಂಗ್ಟನ್: ಮಧ್ಯಪ್ರಾಚ್ಯ ಸಂಘರ್ಷ ಇನ್ನಷ್ಟು ದಿನ ಮುಂದುವರಿಯುವ ಸಾಧ್ಯತೆ ಹಿನ್ನೆಲೆಯಲ್ಲಿ ಭಾರತದ ರೀತಿ ಇತರೆ ರಾಷ್ಟ್ರಗಳಿಗೂ ರಷ್ಯಾದಿಂದ ತಾತ್ಕಾಲಿಕವಾಗಿ ಕಚ್ಚಾತೈಲ ಖರೀದಿಗೆ ಅಮೆರಿಕ ಅನುಮತಿ ನೀಡಿದೆ.ಸಮುದ್ರದಲ್ಲೇ ಸಿಕ್ಕಿಹಾಕಿಕೊಂಡಿರುವ ರಷ್ಯಾದ ಟ್ಯಾಂಕರ್‌ಗಳಿಂದ ತೈಲ ಖರೀದಿಸಲು ಅಮೆರಿಕ ಈ ಅವಕಾಶ ನೀಡಿದ್ದು, ಈ ಮೂಲಕ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲಕ್ಕಾಗಿ ಹಾಹಾಕಾರ ಉಂಟಾಗುವುದನ್ನು ತಡೆಯುವ ಪ್ರಯತ್ನ ನಡೆಸುತ್ತಿದೆ.
ಮಧ್ಯಪ್ರಾಚ್ಯ ಸಂಘರ್ಷದ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ದಿಢೀರ್ ಏರಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ತೈಲ ಆಮದು ಮಾಡಿಕೊಳ್ಳುವ ರಾಷ್ಟ್ರಗಳಲ್ಲಿ ಒಂದಾದ ಭಾರತಕ್ಕೆ ರಷ್ಯಾದಿಂದ ತೈಲ ಖರೀದಿಸುವ ಸಂಬಂಧ ಈ ಹಿಂದೆ ಹೇರಿದ್ದ ನಿರ್ಬಂಧವನ್ನು 30 ದಿನಗಳ ಕಾಲ ರದ್ದು ಮಾಡುವುದಾಗಿ ತಿಳಿಸಿದ್ದು. ಇದರ ಬೆನ್ನಲ್ಲೇ ಇದೀಗ ಇತರೆ ದೇಶಗಳಿಗೂ ಇದೇ ರೀತಿ ರಷ್ಯಾದಿಂದ ತೈಲ ಖರೀದಿಗೆ ವಿನಾಯ್ತಿ ನೀಡುವುದಾಗಿ ತಿಳಿಸಿದೆ.ಇರಾನ್‌ನ ಭಯೋತ್ಪಾದಕ ಆಡಳಿತದಿಂದ ಎದುರಾಗಿರುವ ಬೆದರಿಕೆಯನ್ನು ಪರಿಹರಿಸುವ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಇಂಧನ ಮಾರುಕಟ್ಟೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಹಾಗೂ ತೈಲ ದರ ಭಾರೀ ಪ್ರಮಾಣದಲ್ಲಿ ಏರಿಕೆಯಾಗದಂತೆ ನೋಡಿಕೊಳ್ಳಲು ಟ್ರಂಪ್ ಆಡಳಿತ ಪ್ರಯತ್ನ ಮಾಡುತ್ತಿದೆ ಎಂದು ಅಮೆರಿಕದ ಖಜಾನೆ ಸಚಿವ ಸ್ಕಾಟ್ ಬೆಸೆಂಟ್ ತಿಳಿಸಿದ್ದಾರೆ.
==ಕಚ್ಚಾ ತೈಲ ಬೆಲೆ 100 ಡಾಲರ್ ಆಸುಪಾಸಿನಲ್ಲಿ ಸ್ಥಿರ
ಹಾಂಕಾಂಗ್: ಯುದ್ಧದ ಪರಿಣಾಮ ತೀವ್ರ ಹೊಯ್ದಾಟ ನಡೆಸುತ್ತಿರುವ ಅಂತಾರಾಷ್ಟ್ರೀಯ ಕಚ್ಚಾತೈಲ ದರ ಶುಕ್ರವಾರ ಕೊಂಚ ಸ್ಥಿರತೆ ಕಾಯ್ದುಕೊಂಡಿದೆ. ಅಂತಾರಾಷ್ಟ್ರೀಯ ಮಾನದಂಡದ ಬ್ರೆಂಟ್ ಕಚ್ಚಾ ತೈಲ ದರ ಗುರುವಾರದಂತೆ 100 ಡಾಲರ್ ಆಸುಪಾಸಿನಲ್ಲಿ ಇದ್ದು, ಬ್ಯಾರೆಲ್‌ಗೆ 95.22 ಡಾಲರ್ ದಾಖಲಿಸಿದೆ. ಇನ್ನು ಅಮೆರಿಕ ಕಚ್ಚಾತೈಲ ದರ 95.22 ಡಾಲರ್ ಇದೆ. ಮಂಗಳವಾರ ಬ್ಯಾರೆಲ್‌ಗೆ 120 ಡಾಲರ್ ಬೆಲೆ ದಾಖಲಿಸಿದ್ದ ಕಚ್ಚಾತೈಲ ದರ, 4 ವರ್ಷದ ಗರಿಷ್ಠ ದರ ದಾಖಲಿಸಿತ್ತು. ಆದರೆ ಬುಧವಾರ 100 ಡಾಲರ್‌ಗಿಂತ ಕೆಳಗೆ ಇಳಿದಿತ್ತು.==
ರು. ಮೌಲ್ಯ ₹92.45ಕ್ಕೆ ಕುಸಿತ: ಸಾರ್ವಕಾಲಿಕ ಕನಿಷ್ಠಮುಂಬೈ: ಒಂದು ದಿನ ಕುಸಿತಕ್ಕೆ ಬ್ರೇಕ್ ನೀಡಿದ ಬಳಿಕ, ಡಾಲರ್ ಎದುರು ರುಪಾಯಿ ಮೌಲ್ಯ ಶುಕ್ರವಾರ ಪುನಃ ಕುಸಿದಿದೆ. 20 ಪೈಸೆ ಕುಸಿದಿರುವ ಅದು 92.45 ರು.ಗೆ ಅಂತ್ಯಗೊಳ್ಳುವುದರೊಂದಿಗೆ ಸಾರ್ವಕಾಲಿಕ ಕನಿಷ್ಠ ಕಂಡಿದೆ.ತೈಲ ಬೆಲೆಗಳು 100 ಡಾಲರ್ ಗಡಿಯಲ್ಲಿ ಸ್ಥಿರವಾಗಿರುವುದು, ವಿದೇಶಿ ಹೂಡಿಕೆಗಳ ಹೊರಹರಿವು, ಷೇರುಪೇಟೆ ಕುಸಿತ- ಸೇರಿದಂತೆ ನಾನಾ ಕಾರಣಗಳಿಂದ ರುಪಾಯಿ ಮೌಲ್ಯ ಕುಸಿದಿದೆ. ದಿನದ ಮಧ್ಯಂತರದಲ್ಲಿ ಡಾಲರ್ ಎದುರು ದಾಖಲೆಯ 92.47 ರು.ಗೂ ರುಪಾಯಿ ಮೌಲ್ಯ ಕುಸಿದಿತ್ತು.
==ಹೋರ್ಮುಜ್‌ನಿಂದ ಇನ್ನೊಂದು ಭಾರತ ಹಡಗು ಸುರಕ್ಷಿತ ಸಂಚಾರ
ನವದೆಹಲಿ: ಸಮರ ಪ್ರಕ್ಷುಬ್ಧ ಇರಾನ್ ಬಳಿಯ ನಿರ್ಬಂಧಿತ ಹೋರ್ಮುಜ್ ಜಲಸಂಧಿ ಮೂಲಕ ಇನ್ನೊಂದು ಭಾರತದ ಹಡಗು ಯಶಸ್ವಿಯಾಗಿ ಪ್ರಯಾಣಿಸಿದೆ. ಗ್ಯಾಸೋಲಿನ್ ಹೊತ್ತು ಆಫ್ರಿಕಾಗೆ ಸಾಗುತ್ತಿದ್ದ ಜಗತ್‌ಪ್ರಕಾಶ್ ಹೆಸರಿನ ಹಡಗು ಹೋರ್ಮುಜ್ ಜಲಸಂಧಿಯನ್ನು ಯಶಸ್ವಿಯಾಗಿ ದಾಟಿದೆ ಎಂದು ಭಾರತ ಸರ್ಕಾರ ಹೇಳಿದೆ.ಬುಧವಾರವಷ್ಟೇ ಭಾರತಕ್ಕೆ 1.35 ಲಕ್ಷ ಟನ್ ಅನಿಲ ಹೊತ್ತ ಹಡಗೊಂದು ಹೋರ್ಮುಜ್ ದಾಟಿ ಮುಂಬೈ ಕರಾವಳಿ ಪ್ರವೇಶಿಸಿತ್ತು. ಅದು ಯುದ್ಧ ಆರಂಭವಾದ ನಂತರ ಹೋರ್ಮುಜ್ ದಾಟಿ ಭಾರತಕ್ಕೆ ಬಂದ ಮೊದಲ ಹಡಗಾಗಿತ್ತು.