ತಿರುಪತಿ ಲಡ್ಡು ವಿವಾದ : ದೇಗುಲ ಧಾರ್ಮಿಕವಾಗಿ ಶುದ್ಧೀಕರಣಗೊಳಿಸುವ ಪ್ರಕ್ರಿಯೆ ಪೂರ್ಣ

KannadaprabhaNewsNetwork | Updated : Sep 24 2024, 06:58 AM IST

ಸಾರಾಂಶ

ತಿರುಪತಿ ಲಡ್ಡು ತಯಾರಿಕೆಯಲ್ಲಿ ಬಳಸಿದ ತುಪ್ಪದಲ್ಲಿ ಕಲ್ಬೆರಕೆ ಪತ್ತೆಯಾದ ಹಿನ್ನೆಲೆಯಲ್ಲಿ ತಿರುಮಲ ದೇಗುಲದ ಸಮುಚ್ಚಯವನ್ನು ಧಾರ್ಮಿಕವಾಗಿ ಶುದ್ಧೀಕರಣಗೊಳಿಸಲಾಗಿದೆ. ಲಡ್ಡು ತಯಾರಿಕಾ ಕೊಠಡಿ ಸೇರಿದಂತೆ ದೇಗುಲದ ಸಮುಚ್ಚಯದಲ್ಲಿ ಮಹಾಶಾಂತಿ ಹೋಮ, ಪಂಚಗವ್ಯ ಪ್ರೋಕ್ಷಣೆ ನಡೆಸಲಾಗಿದೆ.

ತಿರುಮಲ: ತಿರುಪತಿ ವೆಂಕಟೇಶ್ವರ ದೇವಾಲಯದ ಪ್ರಸಿದ್ಧ ಶ್ರೀವಾರಿ ಲಡ್ಡು ಪ್ರಸಾದ ತಯಾರಿಕೆಗೆ ಬಳಸಿದ ತುಪ್ಪದಲ್ಲಿ ದನ, ಹಂದಿಯ ಕೊಬ್ಬು ಮತ್ತು ಮೀನಿನ ಎಣ್ಣೆ ಪತ್ತೆಯಾದ ಹಿನ್ನೆಲೆಯಲ್ಲಿ ಇಡೀ ವೆಂಕಟೇಶ್ವರ ದೇಗುಲದ ಸಮುಚ್ಚಯವನ್ನು ಧಾರ್ಮಿಕವಾಗಿ ಶುದ್ಧೀಕರಣಗೊಳಿಸುವ ಪ್ರಕ್ರಿಯೆ ಸೋಮವಾರ ಯಶಸ್ವಿಯಾಗಿ ಸಂಪನ್ನಗೊಂಡಿದೆ.

8 ಅರ್ಚಕರು, ಮೂರು ಆಗಮ ಸಲಹೆಗಾರರ ನೇತೃತ್ವದಲ್ಲಿ ಬೆಳಗ್ಗೆ 6 ಗಂಟೆಯಿಂದ 10 ಗಂಟೆಗಳ ಅವಧಿಯಲ್ಲಿ ಈ ಕಾರ್ಯಕ್ರಮ ನಡೆಯಿತು. ಲಡ್ಡು ತಯಾರಿಸುವ ಕೊಠಡಿ, ಪ್ರಸಾದ ತಯಾರಿಸುವ ಕೊಠಡಿಗಳಲ್ಲಿ ಮಹಾಶಾಂತಿ ಹೋಮ ನಡೆಸಲಾಯಿತು. ಬಳಿಕ ಪಂಚಗವ್ಯವನ್ನು ಲಡ್ಡು ತಯಾರಿ, ಪ್ರಸಾದ ತಯಾರಿ ಕೊಠಡಿ ಮತ್ತು ದೇಗುಲದ ಸಮುಚ್ಚಯಗಳಲ್ಲಿ ಪ್ರೋಕ್ಷಣೆ ಮಾಡುವ ಮೂಲಕ ಅದನ್ನು ಶುದ್ಧೀಕರಿಸಲಾಯಿತು.

ಇಡೀ ದೇಗುಲ ಪವಿತ್ರವಾಗಿದೆ- ಘೋಷಣೆ:

‘ತಪ್ಪನ್ನು ಸರಿಪಡಿಸಿಕೊಂಡು ದೇಗುಲದ ಪ್ರಾವಿತ್ರ್ಯತೆಯನ್ನು ಕಾಪಾಡುವ ಸಲುವಾಗಿ ಈ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇಡೀ ದೇಗುಲ ಪವಿತ್ರವಾಗಿದೆ’ ಎಂದು ಎಂದು ಮುಖ್ಯ ಅರ್ಚಕ ವೇಣುಗೋಪಾಲ ದೀಕ್ಷಿತುಲು ಘೋಷಿಸಿದ್ದಾರೆ.

ಅಲ್ಲದೆ, ‘ಶಾಂತಿಹೋಮ, ಪಂಚಗವ್ಯ ಪ್ರೋಕ್ಷಣೆ ಬಳಿಕ ಎಲ್ಲವನ್ನೂ ಶುದ್ಧಿ ಮಾಡಿದಂತೆ ಆಗಿದೆ. ಹೀಗಾಗಿ ಭಕ್ತಾದಿಗಳು ಎಂದಿನಂತೆ ಆಗಮಿಸಿ ಬಾಲಾಜಿಯ ಕೃಪೆಗೆ ಪಾತ್ರರಾಗಬೇಕು ಮತ್ತು ಲಡ್ಡು ಖರೀದಿಸಬೇಕು’ ಎಂದು ದೇಗುಲದ ಅರ್ಚಕರು ಮನವಿ ಮಾಡಿದ್ದಾರೆ.

ಏನಿದು ಲಡ್ಡು ವಿವಾದ?:

ಮಾಜಿ ಮುಖ್ಯಮಂತ್ರಿ ಜಗನ್‌ಮೋಹನ್‌ ರೆಡ್ಡಿ ಅವರ ವೈಎಸ್‌ಆರ್‌ ಕಾಂಗ್ರೆಸ್‌ ಸರ್ಕಾರದ ಆಡಳಿತದ ಅವಧಿಯಲ್ಲಿ ತಿರುಪತಿ ಲಡ್ಡು ತಯಾರಿಸಲು ಕಲಬೆರಕೆ ತುಪ್ಪ ಬಳಸಲಾಗಿದೆ. ಹೀಗೆ ಬಳಸಲಾದ ತುಪ್ಪದಲ್ಲಿ ದನ, ಹಂದಿಯ ಕೊಬ್ಬು ಮತ್ತು ಮೀನಿನ ಎಣ್ಣೆ ಇರುವುದು ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿದೆ ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆರೋಪಿಸಿದ್ದರು. ಬಳಿಕ ದೇಗುಲದ ಆಡಳಿತದ ಉಸ್ತುವಾರಿ ಹೊತ್ತಿರುವ ಟಿಟಿಡಿ ಕೂಡಾ ಇದನ್ನು ಖಚಿತಪಡಿಸಿತ್ತು.

 ಲಡ್ಡು ವಿವಾದ: ಸುಪ್ರೀಂ ಕೋರ್ಟ್‌ ಉಸ್ತುವಾರಿ ತನಿಖೆಗೆ ಸ್ವಾಮಿ ಅರ್ಜಿ

ನವದೆಹಲಿ: ತಿರುಪತಿ ಲಡ್ಡು ವಿವಾದಕ್ಕೆ ಸಂಬಂಧಿಸಿದಂತೆ ಬಿಜೆಪಿ ನಾಯಕ ಸುಬ್ರಮಣಿಯಂ ಸ್ವಾಮಿ ಅವರು ಸುಪ್ರೀಂ ಕೋರ್ಟ್‌ ಮೇಲುಸ್ತುವಾರಿಯಲ್ಲಿ ತನಿಖೆ ನಡೆಸಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದಾರೆ.ಈ ಅರ್ಜಿಯಲ್ಲಿ ತಿರುಪತಿ ಲಡ್ಡು ತಯಾರಿಕೆಯಲ್ಲಿ ಬಳಸಿದ್ದ ತುಪ್ಪ ಮತ್ತು ಇನ್ನಿತರ ಪದಾರ್ಥಗಳ ಬಗ್ಗೆ ವಿಸ್ತೃತ ವರದಿ ನೀಡುವಂತೆ ಸುಪ್ರೀಂ ಕೋರ್ಟ್‌ ಆಂಧ್ರಪ್ರದೇಶ ಸರ್ಕಾರಕ್ಕೆಸೂಚಿಸಬೇಕು. ಸಂಬಂಧಪಟ್ಟ ಪ್ರಾಧಿಕಾರದಿಂದ ವಿವರವಾದ ವಿಧಿವಿಜ್ಞಾನ ವರದಿ ಪಡೆಯಲು ಸುಪ್ರೀಂ ಮಧ್ಯಂತರ ನಿರ್ದೇಶನವನ್ನು ನೀಡಬೇಕೆಂದು ಸ್ವಾಮಿ ಕೋರಿದ್ದಾರೆ,

ಮತ್ತೊಂದೆಡೆ ಟಿಟಿಡಿ ಮಾಜಿ ಮುಖ್ಯಸ್ಥ, ರಾಜ್ಯಸಭಾ ಸದಸ್ಯ, ವೈ.ವಿ.ಸುಬ್ಬಾರೆಡ್ಡಿ ಅವರು ಸ್ವತಂತ್ರ ಸಮಿತಿಯಿಂದ ತನಿಖೆಗೆ ಅರ್ಜಿ ಸಲ್ಲಿಸಿದ್ದಾರೆ.

ಲಡ್ಡು ವಿವಾದದ ಸ್ವಯಂಪ್ರೇರಿತ ವಿಚಾರಣೆ: ಸುಪ್ರೀಂಗೆ ವಿಎಚ್‌ಪಿ ಆಗ್ರಹ

ತಿರುಪತಿ: ಇಲ್ಲಿನ ವೆಂಕಟೇಶ್ವರ ದೇಗುಲದ ಲಡ್ಡು ಪ್ರಸಾದದಲ್ಲಿ ಪ್ರಾಣಿ ಕೊಬ್ಬು ಪತ್ತೆಯಾಗಿರುವ ಬಗ್ಗೆ ಸುಪ್ರೀಂ ಕೋರ್ಟ್‌ ಸ್ವಯಂಪ್ರೇರಿತವಾಗಿ ಮೊಕದ್ದಮೆ ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಆಗ್ರಹಿಸಿದೆ.ಸೋಮವಾರ ತಿರುಪತಿಯಲ್ಲಿ ಸಭೆ ನಡೆಸಿದ ವಿಎಚ್‌ಪಿಯ ಕೇಂದ್ರೀಯ ಮಾರ್ಗದರ್ಶಕ ಮಂಡಲ, ‘ಲಡ್ಡು ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ತನಿಖೆ ನಡೆಸಬೇಕು. ಜೊತೆಗೆ ನಿರ್ದಿಷ್ಟ ಸಮಯದಲ್ಲಿ ತಪ್ಪಿತಸ್ಥರನ್ನು ಹಿಡಿದು ಶಿಕ್ಷೆಗೆ ಒಳಪಡಿಸಬೇಕು’ ಎಂದು ಆಗ್ರಹಿಸಿದೆ.

ತಿರುಪತಿಗೆ ಕಳಪೆ ತುಪ್ಪ: ಎಆರ್‌ ಡೈರಿ ಸಂಸ್ಥೆಗೆ ಕೇಂದ್ರದ ನೋಟಿಸ್‌

ದಿಂಡಿಗಲ್‌: ತಿರುಪತಿ ತಿಮ್ಮಪ್ಪನ ದೇಗುಲಕ್ಕೆ ಲಡ್ಡು ತಯಾರಿಸಲು ಬಳಸುವ ತುಪ್ಪ ಕಲಬೆರಕೆಯಾಗಿತ್ತು ಎಂಬ ಆರೋಪಗಳ ಬೆನ್ನಲ್ಲೇ, ಇಂಥ ತುಪ್ಪ ಪೂರೈಸಿದ ಚೆನ್ನೈ ಮೂಲದ ಎಆರ್‌ ಡೈರಿ ಸಂಸ್ಥೆಗೆ ಕೇಂದ್ರ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರ ನೋಟಿಸ್‌ ಜಾರಿ ಮಾಡಿದೆ. ಅದರಲ್ಲಿ ಕಳಪೆ ತುಪ್ಪ ಪೂರೈಕೆ ಕುರಿತ ಆರೋಪಗಳಿಗೆ ಸ್ಪಷ್ಟನೆ ನೀಡುವಂತೆ ಸೂಚಿಸಲಾಗಿದೆ.

ಕಳೆದ ಜೂ.14ರಿಂದ ಎಆರ್‌ ಡೈರಿ ಸಂಸ್ಥೆಗೆ ತಿರುಪತಿಗೆ ತುಪ್ಪ ಪೂರೈಕೆ ಆರಂಭಿಸಿತ್ತು. ಈ ನಡುವೆ ಜುಲೈ ತಿಂಗಳಲ್ಲಿ ಇತರೆ ನಾಲ್ಕು ಸಂಸ್ಥೆಗಳ ಜೊತೆಗೆ ಎಆರ್‌ ಡೈರಿಗೆ ಸೇರಿದ ತುಪ್ಪ ಪೂರೈಸುವ ಲಾರಿಗಳ ಮಾದರಿ ಸಂಗ್ರಹಿಸಿ ಪರೀಕ್ಷಿಸಿದ ವೇಳೆ, ಎಆರ್‌ ಡೈರಿ ಪೂರೈಸಲು ತಂದಿದ್ದ ತುಪ್ಪದಲ್ಲಿ ಹಸು, ಹಂದಿಯ ಕೊಬ್ಬು ಮತ್ತು ಮೀನಿನ ಎಣ್ಣೆಯ ಅಂಶಗಳು ಪತ್ತೆಯಾಗಿದ್ದವು. ಈ ಹಿನ್ನೆಲೆಯಲ್ಲಿ ತುಪ್ಪ ಮರಳಿಸಿದ್ದ ಟಿಟಿಡಿ, ಕಂಪನಿಯನ್ನು ಕಪ್ಪುಪಟ್ಟಿಗೂ ಸೇರಿಸಿತ್ತು.

ಅದರ ಬೆನ್ನಲ್ಲೇ ಇದೀಗ ಕೇಂದ್ರ ಸರ್ಕಾರ ಕೂಡಾ ನೋಟಿಸ್‌ ಜಾರಿ ಮಾಡಿದೆ.

Share this article