ರಣವೀರ್‌ ಸಿಂಗ್‌, ಅಕ್ಷಯ್‌ ಖನ್ನಾ ಅಭಿನಯದ ಸ್ಪೈ ಥ್ರಿಲ್ಲರ್‌ ಚಿತ್ರ ಧುರಂಧರ್‌, ರಿಷಬ್‌ ಶೆಟ್ಟಿ ನಟನೆ, ನಿರ್ದೇಶನದ ‘ಕಾಂತಾರಾ: ಚಾಪ್ಟರ್‌ 1’ ಚಿತ್ರವನ್ನು ಹಿಂದಿಕ್ಕಿ 2025ರಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಚಿತ್ರವಾಗಿ ಹೊರಹೊಮ್ಮಿದೆ.

ಮುಂಬೈ: ರಣವೀರ್‌ ಸಿಂಗ್‌, ಅಕ್ಷಯ್‌ ಖನ್ನಾ ಅಭಿನಯದ ಸ್ಪೈ ಥ್ರಿಲ್ಲರ್‌ ಚಿತ್ರ ಧುರಂಧರ್‌, ರಿಷಬ್‌ ಶೆಟ್ಟಿ ನಟನೆ, ನಿರ್ದೇಶನದ ‘ಕಾಂತಾರಾ: ಚಾಪ್ಟರ್‌ 1’ ಚಿತ್ರವನ್ನು ಹಿಂದಿಕ್ಕಿ 2025ರಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಚಿತ್ರವಾಗಿ ಹೊರಹೊಮ್ಮಿದೆ. ಆದಿತ್ಯ ಧಾರ್‌ ನಿರ್ದೇಶನದ ಚಿತ್ರ ದೇಶೀಯವಾಗಿ 876.50 ಕೋಟಿ ರು.ಗಳಿಸಿ ಕಾಂತಾರದ (852.31 ಕೋಟಿ ರು.) ದಾಖಲೆಯನ್ನು ಹಿಂದಿಕ್ಕಿದೆ. ಜೊತೆಗೆ ರಣಬೀರ್‌ ಕಪೂರ್‌ ಅವರ ಜೀವಮಾನ ದಾಖಲೆಯಾದ ‘ಅನಿಮಲ್‌’ನ 553.87 ಕೋಟಿ ರು.ವನ್ನು ಧೂಳೀಪಟ ಮಾಡಿದೆ. ಈ ಚಿತ್ರವು ಪಾಕಿಸ್ತಾನದಲ್ಲಿ ಭಾರತೀಯ ಗುಪ್ತಚರರ ಕಥೆಯನ್ನು ಹೇಳುತ್ತದೆ.

==

ಸ್ವಯಂ ಗಡೀಪಾರಾದ್ರೆ 2.7 ಲಕ್ಷ ಪ್ರೋತ್ಸಾಹಧನ: ವಲಸಿಗರಿಗೆ ಟ್ರಂಪ್‌ ಆಫರ್‌

ವಾಷಿಂಗ್ಟನ್‌: ಅಕ್ರಮ ವಲಸಿಗರನ್ನು ದೇಶದಿಂದ ಹೊರಹಾಕಲು ನಾನಾ ಪ್ರಯತ್ನ ಮಾಡುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಇದೀಗ ಸ್ವಯಂ ಗಡೀಪಾರಾಗುವವರಿಗೆ $3,000 (ಸುಮಾರು 2.7 ಲಕ್ಷ ರು.) ಪ್ರೋತ್ಸಾಹಧನ ನೀಡುವುದಾಗಿ ಘೋಷಿಸಿದ್ದಾರೆ. ಈ ವರ್ಷದ ಅಂತ್ಯದವರೆಗೆ ಈ ಆಫರ್‌ ಜಾರಿಯಲ್ಲಿರಲಿದ್ದು, ಆ ಬಳಿಕವೂ ಅಕ್ರಮವಾಗಿ ನೆಲೆ ನಿಲ್ಲುವವರಿಗೆ ಕಠಿಣ ಶಿಕ್ಷೆಯ ಎಚ್ಚರಿಕೆ ನೀಡಿದ್ದಾರೆ. ಗಡೀಪಾರಾಗಲು ಇಚ್ಛಿಸುವವರಿಗೆ ಸಿಬಿಪಿ ಹೋಂ ಆ್ಯಪ್‌ ಅಭಿವೃದ್ಧಿಪಡಿಸಲಾಗಿದೆ. ಅದರಲ್ಲಿ ನೋಂದಾಯಿಸಿಕೊಳ್ಳುವ ಮೂಲಕ $3,000 ಹಣ ಪಡೆದು, ಸ್ವದೇಶಕ್ಕೆ ಮರಳಬಹುದಾಗಿದೆ. ಡಿ.31ರವರೆಗೆ ಮಾತ್ರ ಇದಕ್ಕೆ ಅವಕಾಶವಿರಲಿದೆ.ಈ ಹಿಂದೆ ಪ್ರೋತ್ಸಾಹಧನ $1,000 ಇತ್ತು. ಈಗ 3 ಪಟ್ಟು ಹೆಚ್ಚಿಸಲಾಗಿದೆ.

==

ಪಾಕ್‌ ವಿಮಾನ ಸಂಸ್ಥೆ 40000 ಕೋಟಿಗೆ ಸೇಲ್‌

ಇಸ್ಲಾಮಾಬಾದ್‌: ಹರಾಜಿಗೆ ಇಟ್ಟಿದ್ದ ಪಾಕಿಸ್ತಾನದ ಸರ್ಕಾರಿ ಸ್ವಾಮ್ಯದ ಪಾಕಿಸ್ತಾನ್‌ ಇಂಟರ್‌ನ್ಯಾಷನಲ್‌ ಏರ್‌ಲೈನ್ಸ್‌ ಕೊನೆಗೂ ಬಿಕರಿಯಾಗಿದೆ. ಪಿಎಐ ಅನ್ನು ಆರಿಫ್‌ ಹಬೀಬ್‌ ಗ್ರೂಪ್‌ 135 ಲಕ್ಷ ಪಾಕಿಸ್ತಾನದ ರುಪಾಯಿ (4000 ಕೋಟಿ ರು.) ನೀಡಿ ಖರೀದಿಸಿದೆ. ಪಾಕ್‌ಗೆ ಐಎಂಎಫ್‌ ಸಾಲ ನೀಡುವ ವೇಳೆ ಭಾರೀ ನಷ್ಟದಲ್ಲಿರುವ ಪಿಎಐ ಅನ್ನು ಮಾರಾಟ ಮಾಡುವ ಷರತ್ತು ವಿಧಿಸಿತ್ತು. ಖರೀದಿ ಬಿಡ್‌ನಲ್ಲಿ ಪಾಕ್‌ ಸೇನೆ ಒಡೆತನದ ಕಂಪನಿ ಸೇರಿ ಒಟ್ಟು 4 ಕಂಪನ ಭಾಗವಹಿಸಿದ್ದವು.

==

ಅಖಲಾಕ್‌ ಕೊಲೆ ಆರೋಪಿ ವಿರುದ್ಧದ ಪ್ರಕರಣ ರದ್ದಿಗೆ ನ್ಯಾಯಾಲಯ ನಕಾರ

ನವದೆಹಲಿ: ಗೋಹತ್ಯೆ ಮಾಡಿ ಅದರ ಮಾಂಸ ಸೇವಿಸಿದ್ದಾರೆಂದು 2015ರಲ್ಲಿ ಮೊಹಮ್ಮದ್‌ ಅಖಲಾಕ್‌ ಎಂಬುವವರನ್ನು ಹತ್ಯೆ ಮಾಡಿದ್ದ ಆರೋಪಿಗಳ ವಿರುದ್ಧದ ಎಲ್ಲಾ ಪ್ರಕರಣಗಳನ್ನು ರದ್ದುಪಡಿಸಬೇಕು ಹಾಗೂ ಆ ಮೂಲಕ ಸಾಮಾಜಿಕ ಸಾಮರಸ್ಯ ಕಾಪಾಡಬೇಕು ಎಂದು ಕೋರಿದ್ದ ಉತ್ತರಪ್ರದೇಶ ಸರ್ಕಾರದ ಮನವಿಯನ್ನು ಸೂರಜ್‌ಪುರದ ಹೆಚ್ಚುವರಿ ಕೋರ್ಟ್‌ ತಳ್ಳಿಹಾಕಿದೆ. ಸರ್ಕಾರದ ಮನವಿಯನ್ನು ‘ಆಧಾರರಹಿತ ಮತ್ತು ಕ್ಷುಲ್ಲಕ’ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟಿದ್ದಾರೆ. ಇದನ್ನು ಸ್ವಾಗತಿಸಿರುವ ಅಖಲಾಕ್‌ ಪರ ವಕೀಲರು, ‘ನ್ಯಾಯಾಧೀಶರು ತಮ್ಮ ಅಭಿಪ್ರಾಯದ ಮೂಲಕ ಉದಾಹರಣೆಯಾಗಿದ್ದಾರೆ. ಮೃತರ ಪರಿವಾರಕ್ಕೆ ನ್ಯಾಯ ಸಿಕ್ಕಿದಂತಾಗಿದೆ’ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ. ಕೋರ್ಟ್‌ ಪ್ರಕರಣದ ತನಿಖೆಯನ್ನು 2026ರ ಜ.6ರಂದು ನಡೆಸಲು ನಿರ್ಧರಿಸಿದೆ.

==

ಎಸ್‌ಐಆರ್‌ ಬಳಿಕ 4 ರಾಜ್ಯಗಳಲ್ಲಿ 95 ಲಕ್ಷ ಅರ್ನಹರ ಹೆಸರು ರದ್ದು

ನವದೆಹಲಿ: ಚುನಾವಣಾ ಆಯೋಗ ನಡೆಸುತ್ತಿರುವ ವಿಶೇಷ ಮತಪಟ್ಟಿ ಪರಿಷ್ಕರಣೆ ವೇಳೆ ಕೇರಳ, ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ಅಂಡಮಾನ್‌, ನಿಕೋಬಾರ್‌ ದ್ವೀಪಗಳ 95 ಲಕ್ಷ ಮತದಾರರನ್ನು ಕರಡು ಮತಪಟ್ಟಿಯಿಂದ ಕೈಬಿಡಲಾಗಿದೆ. ಈ ಪೈಕಿ ಅಂಡಮಾನ್‌ ನಿಕೋಬಾರ್‌ ದ್ವೀಪದ 3.10 ಲಕ್ಷ ಮತದಾರರ ಪೈಕಿ 64,000 ಜನರನ್ನು, ಕೇರಳದ 2.78 ಕೋಟಿ ಜನರಲ್ಲಿ 24.08 ಲಕ್ಷ ಮತದಾರರನ್ನು, ಮಧ್ಯ ಪ್ರದೇಶದ 42.74 ಮತ್ತು ಛತ್ತೀಸ್‌ಗಢದ 27.34 ಲಕ್ಷ ಮತದಾರರ ಹೆಸರುಗಳನ್ನು ಮತಪಟ್ಟಿಯಿಂದ ತೆಗೆದುಹಾಕಲಾಗಿದೆ. ಕರಡುಪಟ್ಟಿಯಲ್ಲಿ ಹೆಸರಿಲ್ಲದವರು ತಮ್ಮ ಹೆಸರನ್ನು ಸೇರಿಸಬಹುದಾಗಿದೆ.