ಮುಂಬೈ: ಸೋಮವಾರವಷ್ಟೇ ತಮ್ಮ 3 ದಶಕಗಳ ಕಾಂಗ್ರೆಸ್ ರಾಜಕೀಯ ಜೀವನಕ್ಕೆ ವಿದಾಯ ಹೇಳಿದ್ದ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್ ಮಂಗಳವಾರ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಚವಾಣ್ ಇನ್ನು 1-2 ದಿನದಲ್ಲಿ ಮಹಾರಾಷ್ಟ್ರದಿಂದ ರಾಜ್ಯಸಭೆ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ.
ಮಂಗಳವಾರ ಇಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೆಂದ್ರ ಫಡ್ನವೀಸ್, ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಶೇಖರ್ ಬಾವನ್‌ಕುಳೆ ಮೊದಲಾದವರ ಸಮ್ಮುಖದಲ್ಲಿ ಚವಾಣ್ ಬಿಜೆಪಿ ಸೇರಿದರು.
ಈ ಬಗ್ಗೆ ಹೇಳಿಕೆ ನೀಡಿರುವ ಚವಾಣ್, ‘ಇಂದು ನನ್ನ ನನ್ನ ಹೊಸ ರಾಜಕೀಯ ಜೀವನದ ಆರಂಭವಾಗುತ್ತಿದೆ’ ಎಂದಿದ್ದಾರೆ.ಈ ಹಿಂದೆ ಮುಂಬೈನಲ್ಲಿ ನಡೆದ ಆದರ್ಶ್ ಹೌಸಿಂಗ್ ಸೊಸೈಟಿ ಹಗರಣದಲ್ಲಿ ಅಶೋಕ್ ಚವ್ಹಾಣ್ ಹೆಸರು ಪ್ರಮುಖವಾಗಿ ಕೇಳಿಬಂದಿತ್ತು.
ಈ ಹಿನ್ನೆಲೆಯಲ್ಲಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿ ಬಂದಿತ್ತು.
ಚವಾಣ್ ರಾಜೀನಾಮೆ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ‘ತಮ್ಮ ಮೇಲಿನ ಹಗರಣ ಆರೋಪಗಳಿಂದ ಮುಕ್ತರಾಗಲು ಚವಾಣ್ ಬಿಜೆಪಿ ಸೇರಿದ್ದಾರೆ’ ಎಂದು ಟೀಕಿಸಿದೆ.
ರಾಜೀನಾಮೆ ನೀಡಿದ 3ನೇ ನಾಯಕ: ಚವಾಣ್, ಮಹಾರಾಷ್ಟ್ರದಲ್ಲಿ 2 ವಾರದಲ್ಲಿ ಕಾಂಗ್ರೆಸ್ ಪಕ್ಷವನ್ನು 3ನೇ ನಾಯಕನಾಗಿದ್ದಾರೆ.
ಕೆಲವು ದಿನಗಳ ಹಿಂದೆ ಬಾಬಾ ಸಿದ್ದಿಕಿ ಹಾಗೂ ಮಿಲಿಂದ್ ದೇವ್ರಾ ಪಕ್ಷ ತೊರೆದಿದ್ದರು. ಕ್ರಮವಾಗಿ ಎನ್‌ಸಿಪಿ (ಅಜಿತ್ ಪವಾರ್ ಬಣ) ಹಾಗೂ ಶಿವಸೇನೆ (ಶಿಂಧೆ ಬಣ) ಸೇರಿದ್ದರು.
ಬಿಜೆಪಿ ಅಧ್ಯಕ್ಷ ಎನ್ನುವ ಬದಲು ಕಾಂಗ್ರೆಸ್ ಅಧ್ಯಕ್ಷ ಎಂದ ಚವಾಣ್ : ಕಾಂಗ್ರೆಸ್‌ನಲ್ಲಿ ಇಷ್ಟು ವರ್ಷ ಇದ್ದ ಪರಿಣಾಮವೋ ಏನೋ, ಅಭ್ಯಾಸ ಬಲದಿಂದ ಅಶೋಕ್ ಚವಾಣ್ ಅವರು ಮುಂಬೈ ಬಿಜೆಪಿ ಅಧ್ಯಕ್ಷ ಆಶೀಷ್ ಶೇಲಾರ್ ಅವರನ್ನು ‘ಮುಂಬೈ ಕಾಂಗ್ರೆಸ್ ಅಧ್ಯಕ್ಷ’ ಎಂದು ಬಾಯಿತಪ್ಪಿ ಕರೆದರು. ಆಗ ಸಭೆ ನಗೆಗಡಲಲ್ಲಿ ತೇಲಿತು.