ಪಿಎಂ ಸೂರ್ಯ ಘರ್‌: ಉಚಿತ ವಿದ್ಯುತ್‌ ಯೋಜನೆಗೆ ಚಾಲನೆ

KannadaprabhaNewsNetwork | Updated : Feb 14 2024, 07:57 AM IST

ಸಾರಾಂಶ

ಸೌರ ವಿದ್ಯುತ್‌ ಬಳಕೆ ಹೆಚ್ಚಿಸುವ ಮತ್ತು ಸುಸ್ಥಿರ ಅಭಿವೃದ್ಧಿ ಯೋಜನೆಯ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ, ಮಂಗಳವಾರ ‘ಪಿಎಂ ಸೂರ್ಯ ಘರ್: ಉಚಿತ ವಿದ್ಯುತ್‌ ಯೋಜನೆ’ಗೆ ಚಾಲನೆ ನೀಡಿದ್ದಾರೆ.

ನವದೆಹಲಿ: ಸೌರ ವಿದ್ಯುತ್‌ ಬಳಕೆ ಹೆಚ್ಚಿಸುವ ಮತ್ತು ಸುಸ್ಥಿರ ಅಭಿವೃದ್ಧಿ ಯೋಜನೆಯ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ, ಮಂಗಳವಾರ ‘ಪಿಎಂ ಸೂರ್ಯ ಘರ್: ಉಚಿತ ವಿದ್ಯುತ್‌ ಯೋಜನೆ’ಗೆ ಚಾಲನೆ ನೀಡಿದ್ದಾರೆ.

ಇದರನ್ವಯ ಮನೆಯ ಮೇಲೆ ಅಥವಾ ತಮ್ಮ ನಿಗದಿತ ಜಾಗದಲ್ಲಿ ಸರ್ಕಾರ ನೀಡುವ ಸಬ್ಸಿಡಿ ಬಳಸಿಕೊಂಡು ಜನರು ಸೌರಫಲಕ ಅಳವಡಿಸಿ ವಿದ್ಯುತ್‌ ಉತ್ಪಾದಿಸಬಹುದು. 

ಮಾಸಿಕ 300 ಯುನಿಟ್‌ನಷ್ಟು ವಿದ್ಯುತ್ತನ್ನು ಉಚಿತವಾಗಿ ಬಳಕೆ ಮಾಡಿಕೊಂಡು ಉಳಿದಿದ್ದನ್ನು ವಿದ್ಯುತ್‌ ವಿತರಣಾ ಸಂಸ್ಥೆಗೆ ಮಾರಬಹುದಾಗಿದೆ.

ಅಯೋಧ್ಯೆ ರಾಮಮಂದಿರ ಉದ್ಘಾಟನೆ ದಿನ ಇಂಥದ್ದೊಂದು ಯೋಜನೆ ಜಾರಿ ಕುರಿತು ಹೇಳಿಕೆ ನೀಡಿದ್ದ ಮೋದಿ, ಮಂಗಳವಾರ ಯೋಜನೆ ಬಗ್ಗೆ ಟ್ವೀಟರ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

‘ಮೊದಲ ಹಂತದಲ್ಲಿ 1 ಕೋಟಿ ಮನೆಗಳಿಗೆ ಮಾಸಿಕ 300 ಯುನಿಟ್‌ ವಿದ್ಯುತ್‌ ಪೂರೈಕೆ ಗುರಿಯನ್ನು ಹಾಕಿಕೊಳ್ಳಲಾಗಿದೆ. ಯೋಜನೆ ಜಾರಿಗಾಗಿ 75 ಸಾವಿರ ಕೋಟಿ ರು.ಬಂಡವಾಳ ಹೂಡಲಾಗುವುದು. 

ಸೌರ ಫಲಕ ಹಾಕಿಕೊಳ್ಳುವ ಬಳಕೆದಾರರಿಗೆ ಬ್ಯಾಂಕ್‌ನಲ್ಲಿ ಅಗ್ಗದ ದರದಲ್ಲಿ ಸಾಲ, ಫಲಾನುಭವಿಗಳಿಗೆ ಸಬ್ಸಿಡಿ ನೀಡುವ ಮೂಲಕ ಬಳಕೆದಾರರಿಗೆ ಯಾವುದೇ ರೀತಿಯಲ್ಲಿ ಆರ್ಥಿಕ ಹೊರೆಯಾಗದಂತೆ ಯೋಜನೆ ಜಾರಿ ಉದ್ದೇಶ ಹೊಂದಲಾಗಿದೆ’ ಎಂದು ಪ್ರಧಾನಿ ಮಾಹಿತಿ ನೀಡಿದ್ದಾರೆ.

ಜೊತೆಗೆ, ಈ ಯೋಜನೆಯನ್ನು ಹೆಚ್ಚು ಜನಪ್ರಿಯಗೊಳಿಸುವ ಸಲುವಾಗಿ ನಗರಾಡಳಿತ ಸಂಸ್ಥೆಗಳು ಮತ್ತು ಪಂಚಾಯತ್‌ಗಳಿಗೆ ತಮ್ಮ ವ್ಯಾಪ್ತಿಯಲ್ಲಿ ಮನೆಗಳ ಮೇಲೆ ಸೌರಫಲಕ ಅಳವಡಿಕೆಯನ್ನು ಪ್ರೋತ್ಸಾಹಿಸಲು ನೆರವು ನೀಡಲಾಗುವುದು. 

ಈ ಯೋಜನೆ ಲಾಭ ಪಡೆದುಕೊಂಡರೆ ಹೆಚ್ಚುವರಿ ಆದಾಯ, ಕಡಿಮೆ ವಿದ್ಯುತ್‌ ಬಿಲ್‌ ಮತ್ತು ಉದ್ಯೋಗ ಸೃಷ್ಟಿ ಆಗಲಿದೆ ಎಂದು ಮೋದಿ ಹೇಳಿದ್ದಾರೆ.

ಅಲ್ಲದೆ, ‘ನಾವೆಲ್ಲರೂ ಸೌರ ವಿದ್ಯುತ್‌ ಬಳಕೆ ಹೆಚ್ಚಿಸೋಣ, ಸುಸ್ಥಿರ ಪ್ರಗತಿಗೆ ನೆರವಾಗೋಣ. ಈ ನಿಟ್ಟಿನಲ್ಲಿ ಪಿಎಂ ಸೂರ್ಯ ಘರ್‌: ಮುಫ್ತ್‌ ಬಿಜಲಿ ಯೋಜನೆಯನ್ನು ಪ್ರೋತ್ಸಾಹಿಸುವಂತೆ ಗೃಹ ಬಳಕೆದಾರರು ಅದರಲ್ಲೂ ವಿಶೇಷವಾಗಿ ಯುವ ಸಮೂಹವನ್ನು ಕೋರಿಕೊಳ್ಳುತ್ತೇನೆ. 

ಆಸಕ್ತರು https://pmsuryaghar.gov.in ವೆಬ್‌ತಾಣಕ್ಕೆ ತೆರಳುವ ಮೂಲಕ ಯೋಜನೆಗೆ ಹೆಸರು ನೊಂದಾಯಿಸಿಕೊಳ್ಳಬಹುದು’ ಎಂದು ಮೋದಿ ಕರೆ ನೀಡಿದ್ದಾರೆ.

Share this article