ಇಸ್ಲಾಮಾಬಾದ್: ಪಹಲ್ಗಾಂ ದಾಳಿ ಕುರಿತು ವಿಶ್ವಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿರುವ ನಡುವೆಯೇ, ಪಾಕಿಸ್ತಾನದ ಮಾಜಿ ಕ್ರಿಕೆಟಿಗ ದಾನಿಶ್ ಕನೇರಿಯಾ ದಾಳಿಯಲ್ಲಿ ತಮ್ಮದೇ ದೇಶದ ಕೈವಾಡವಿರುವುದಾಗಿ ಆರೋಪ ಮಾಡಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಪಹಲ್ಗಾಂ ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನದ ಕೈವಾಡ ಇಲ್ಲವೆಂದಾದರೆ, ಪ್ರಧಾನಿ ಶೆಹಬಾಜ್ ಷರೀಪ್ ಘಟನೆಯನ್ನು ಏಕೆ ಖಂಡಿಸಿಲ್ಲ? ಯಾಕೆ ನಿಮ್ಮ ಭದ್ರತಾ ಪಡೆಗಳು ಒಮ್ಮೆಲೆ ಎಚ್ಚರಗೊಂಡವು? ಏಕೆಂದರೆ, ನಿಮಗೆ ಸತ್ಯ ತಿಳಿದಿದೆ. ನೀವು ಭಯೋತ್ಪಾದಕರಿಗೆ ಆಶ್ರಯ ನೀಡುತ್ತಿದ್ದೀರಿ ಮತ್ತು ಪೋಷಿಸುತ್ತಿದ್ದೀರಿ. ನಿಮಗೆ ನಾಚಿಕೆಯಾಗಬೇಕು’ ಎಂದು ಪಾಕಿಸ್ತಾನ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕನೇರಿಯಾ 2000-2010ರ ಅವಧಿಯಲ್ಲಿ ಪಾಕಿಸ್ತಾನ ತಂಡವನ್ನು ಪ್ರತಿನಿಧಿಸಿದ ಹಿಂದೂ ಕ್ರಿಕೆಟಿಗ.
ಭಾರತದ ರಾಜತಾಂತ್ರಿಕ ಶಾಕ್: ಪಾಕ್ ಷೇರುಪೇಟೆ ಭಾರೀ ಕುಸಿತ
ನವದೆಹಲಿ: ಪಹಲ್ಗಾಂನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತ್ಯುತ್ತರವಾಗಿ ಭಾರತ ಪಾಕಿಸ್ತಾನದ ವಿರುದ್ಧ ರಾಜತಾಂತ್ರಿಕ ಅಸ್ತ್ರಗಳನ್ನು ಪ್ರಯೋಗಿಸಿದ ಬೆನ್ನಲ್ಲೇ ಪಾಕಿಸ್ತಾನದ ಷೇರುಪೇಟೆ ಭಾರೀ ಕುಸಿತ ಕಂಡಿದೆ. ಪಾಕಿಸ್ತಾನದ ಕೆಎಸ್‌ಇ100 ಸೂಚ್ಯಂಕವು ಗುರುವಾರ 2098 ಅಂಕ ಕುಸಿತ ಕಂಡಿದೆ. ಗುರುವಾರದ ಅಂತ್ಯಕ್ಕೆ ಪಾಕಿಸ್ತಾನದ ಷೇರು ಮಾರುಕಟ್ಟೆಯು 2098 ಅಂಕ ಕುಸಿತದೊಂದಿಗೆ 115,128ರಲ್ಲಿ ಮುಕ್ತಾಯ ಗೊಂಡಿತು. ಕೆಎಸ್‌ಇ100 ಸೂಚ್ಯಂಕವು ಕಳೆದ ಒಂದು ವರ್ಷದಿಂದ ಶೇ.64.28ರಷ್ಟು ಏರಿಕೆಯಾಗಿ 70,562- 1,20,796 ರಲ್ಲಿ ವಹಿವಾಟು ನಡೆಸುತ್ತಿತ್ತು.
ದಾಳಿಯಲ್ಲಿ ಪಾಕ್ ಸಮರ್ಥನೆ: ಅಸ್ಸಾಂ ಶಾಸಕನ ಬಂಧನ
ಗುವಾಹಟಿ: ಪಹಲ್ಗಾಂನಲ್ಲಿ ನಡೆದಿದ್ದ ಉಗ್ರ ದಾಳಿಗೆ ಸಂಬಂದಿಸಿದಂತೆ ಪಾಕಿಸ್ತಾನ ಮತ್ತು ಅದರ ಸಹಭಾಗಿತ್ವ ಸಮರ್ಥಿಸಿಕೊಂಡ ಆರೋಪದಲ್ಲಿ ಅಸ್ಸಾಂನ ವಿಪಕ್ಷ ಎಐಯುಡಿಎಫ್ ಶಾಸಕ ಅಮಿನುಲ್ಲಾ ಇಸ್ಲಾಂರನ್ನು ಪೊಲೀಸರು ದೇಶದ್ರೋಹ ಪ್ರಕರಣದಡಿ ಬಂಧಿಸಿದ್ದಾರೆ.
ಈ ಬಗ್ಗೆ ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದು, ‘ ಶಾಸಕರು ಪಾಕಿಸ್ತಾನ ಮತ್ತು ಅದರ ದಾಳಿಯನ್ನು ಸಮರ್ಥಿಸಿಕೊಳ್ಳುತ್ತಿರುವ ವಿಡಿಯೋವೊಂದನ್ನು ನೋಡಿದ್ದೇವೆ. ಆ ಬಳಿಕ ನಾನು ಪೊಲೀಸರಿಗೆ ಕೂಡಲೇ ಕ್ರಮ ಕೈಗೊಳ್ಳಲು ಸೂಚಿಸಿದೆ. ಅದರಂತೆ ಅವರನ್ನು ಬಂಧಿಸಲಾಗಿದೆ’ ಎಂದಿದ್ದಾರೆ. ಈ ವಿಚಾರವಾಗಿ ಎಐಯುಡಿಎಫ್ ಅಂತರವನ್ನು ಕಾಯ್ದುಕೊಂಡಿದೆ. ಇದು ಅವರ ವೈಯಕ್ತಿಕ ಹೇಳಿಕೆ ಹೊರತು ಪಕ್ಷದಲ್ಲ ಎಂದಿದೆ.
ಮೃತ ಎಲ್ಲ 26 ಜನರ ಕುಟುಂಬಗಳಿಗೆ ಅಸ್ಸಾಂ ₹5 ಲಕ್ಷ ಪರಿಹಾರ
ಗುವಾಹಟಿ: ಪಹಲ್ಗಾಂ ದಾಳಿಯಲ್ಲಿ ಮೃತಪಟ್ಟ ಎಲ್ಲಾ 26 ಜನರ ಕುಟುಂಬಗಳಿಗೆ ತಲಾ 5 ಲಕ್ಷ ರು. ಪರಿಹಾರಧನ ನೀಡುವುದಾಗಿ ಅಸ್ಸಾಂ ಸರ್ಕಾರ ಘೋಷಿಸಿದೆ. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ‘ಮೃತರು ಮತ್ತು ಅವರ ಕುಟುಂಬಗಳ ತ್ಯಾಗಕ್ಕೆ ಗೌರವಾರ್ಥವಾಗಿ ನಮ್ಮ ಸರ್ಕಾರ 5 ಲಕ್ಷ ರು.ಗಳ ಸಣ್ಣ ಮೊತ್ತವನ್ನು ಸಹಾಯಧನವಾಗಿ ನೀಡಲು ನಿರ್ಧರಿಸಿದೆ. ಮೃತರ ಕುಟುಂಬಗಳ ನೋವನ್ನು ನಾವು ಅರ್ಥಮಾಡಿಕೊಳ್ಳುತ್ತೇವೆ’ ಎಂದರು.
ಮಡಿದವರ ವಿಮಾ ಕ್ಲೈಂ ಇತ್ಯರ್ಥ ನಿಯಮಗಳಲ್ಲಿ ಸಡಿಲಿಕೆ: ಎಲ್‌ಐಸಿ
ನವದೆಹಲಿ: ಪಹಲ್ಗಾಂ ಉಗ್ರದಾಳಿ ಸಂತ್ರಸ್ತರಿಗೆ ನೆರವಾಗುವ ಸಲುವಾಗಿ ಅವರ ಕ್ಲೈಂ ಇತ್ಯರ್ಥ(ಸೆಟಲ್ಮೆಂಟ್) ನಿಯಮಗಳನ್ನು ಸಡಿಲಗೊಳಿಸಿರುವುದಾಗಿ ಎಲ್‌ಐಸಿ ಘೋಷಿಸಿದೆ.ಈ ಕುರಿತು ಎಲ್‌ಐಸಿ ಸಿಇಒ ಸಿದ್ದಾರ್ಥ ಮೊಹಂತಿ ಮಾತನಾಡಿದ್ದು, ‘ಪಾಲಿಸಿದಾರರ ಕಷ್ಟ ಕಡಿಮೆ ಮಾಡಲು ನಮ್ಮ ವಿಮಾ ಕಂಪನಿಯು ಅನೇಕ ರಿಯಾಯಿತಿಗಳನ್ನು ಘೋಷಿಸಿದೆ. ಪಾಲಿಸಿದಾರರು ಉಗ್ರದಾಳಿಯಲ್ಲಿ ಬಲಿಯಾದುದಕ್ಕೆ ಸಾಕ್ಷಿಯಾಗಿ ಮರಣ ಪ್ರಮಾಣಪತ್ರದ ಬದಲು, ಸರ್ಕಾರಿ ದಾಖಲೆಗಳಲ್ಲಿನ ಯಾವುದೇ ಪುರಾವೆಗಳು, ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ನೀಡಿರುವ ಪರಿಹಾದ ಧನವನ್ನು ಸಾಕ್ಷಿಯಾಗಿ ಪರಿಗಣಿಸಲಾಗುವುದು’ ಎಂದು ತಿಳಿಸಿದ್ದಾರೆ.