ಡಿಕೆಸು ಹೆಸರಿನಲ್ಲಿ ವಂಚಿಸಿದ್ದ ಬಂಗಾರಿ ಇ.ಡಿ. ಟೀಂ ಬಲೆಗೆ - ಐಶ್ವರ್ಯ ಮನೆಗಳಲ್ಲಿ ಶೋಧ ಕಾರ್ಯ

KannadaprabhaNewsNetwork | Updated : Apr 25 2025, 06:49 AM IST

ಸಾರಾಂಶ

ಮಾಜಿ ಸಂಸದ ಡಿ.ಕೆ.ಸುರೇಶ್ ಹೆಸರೇಳಿಕೊಂಡು ಕೋಟ್ಯಂತರ ರು. ಮೌಲ್ಯದ ಚಿನ್ನ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ(ಇ.ಡಿ.)ದ ಅಧಿಕಾರಿಗಳು ಆರೋಪಿ ಐಶ್ವರ್ಯಗೌಡ ಹಾಗೂ ಶಾಸಕ ವಿನಯ್‌ ಕುಲಕರ್ಣಿ ಅವರಿಗೆ ಸೇರಿದ ಸ್ಥಳಗಳ ಮೇಲೆ ಗುರುವಾರ ದಾಳಿ ನಡೆಸಿ ಶೋಧ ಕೈಗೊಂಡಿದ್ದಾರೆ.

 ಬೆಂಗಳೂರು : ಮಾಜಿ ಸಂಸದ ಡಿ.ಕೆ.ಸುರೇಶ್ ಹೆಸರೇಳಿಕೊಂಡು ಕೋಟ್ಯಂತರ ರು. ಮೌಲ್ಯದ ಚಿನ್ನ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ(ಇ.ಡಿ.)ದ ಅಧಿಕಾರಿಗಳು ಆರೋಪಿ ಐಶ್ವರ್ಯಗೌಡ ಹಾಗೂ ಶಾಸಕ ವಿನಯ್‌ ಕುಲಕರ್ಣಿ ಅವರಿಗೆ ಸೇರಿದ ಸ್ಥಳಗಳ ಮೇಲೆ ಗುರುವಾರ ದಾಳಿ ನಡೆಸಿ ಶೋಧ ಕೈಗೊಂಡಿದ್ದಾರೆ. ನಂತರ ವಿಚಾರಣೆ ವೇಳೆ ಸೂಕ್ತ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಐಶ್ವರ್ಯ ಗೌಡ ಅವರನ್ನು ಇ.ಡಿ. ಅಧಿಕಾರಿಗಳು ಬಂಧಿಸಿದ್ದಾರೆ.

ಪ್ರಕರಣ ಸಂಬಂಧ ಆರೋಪಿ ಐಶ್ವರ್ಯಗೌಡಗೆ ಸೇರಿದ ಬೆಂಗಳೂರು ಮತ್ತು ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದ ನಿವಾಸ ಹಾಗೂ ವಿನಯ್ ಕುಲಕರ್ಣಿ ಅವರ ಬೆಂಗಳೂರು ನಿವಾಸದಲ್ಲಿ ಇ.ಡಿ. ಅಧಿಕಾರಿಗಳು ಶೋಧ ಕಾರ್ಯ ನಡೆಸಿದರು. ಪರಿಶೀಲನೆ ವೇಳೆ ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳು, ಬ್ಯಾಂಕ್‌ ವಹಿವಾಟು ಸೇರಿ ಇತರೆ ಮಾಹಿತಿಗಳನ್ನು ಕಲೆಹಾಕಿದರು.

ರಾತ್ರಿವರೆಗೆ ಶೋಧ:

ದಾಳಿ ವೇಳೆ ಇ.ಡಿ. ಅಧಿಕಾರಿಗಳು ಕಡತಗಳನ್ನು ಪರಿಶೀಲಿಸಿದರು. ಬೆಳಗ್ಗೆಯಿಂದ ರಾತ್ರಿವರೆಗೆ ಶೋಧ ಕಾರ್ಯ ನಡೆಸಿ, ಸ್ಥಳದಲ್ಲಿದ್ದವರನ್ನು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಮಳವಳ್ಳಿಯಲ್ಲಿ ಐಶ್ವರ್ಯ ಗೌಡ ತಾಯಿ ಮತ್ತು ಸಹೋದರನನ್ನು ಕೆಲ ದಾಖಲೆಗಳ ಸಂಬಂಧ ವಿಚಾರಣೆ ನಡೆಸಿದರು ಎಂದು ಮೂಲಗಳು ಹೇಳಿವೆ. ಈ ಮಧ್ಯೆ, ಐಶ್ವರ್ಯ ಗೌಡ ಅವರನ್ನು ಇ.ಡಿ. ಅಧಿಕಾರಿಗಳು ವಿಚಾರಣೆಗೆ ಒಳಪಡಿಸಿದ್ದು, ಈ ವೇಳೆ ಆಕೆ ಸೂಕ್ತ ಮಾಹಿತಿ ನೀಡಲಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಇ.ಡಿ. ಅಧಿಕಾರಿಗಳು ಬಂಧಿಸಿದ್ದಾರೆ ಎಂದು ಹೇಳಲಾಗಿದೆ.

ವಾರಾಹಿ ಗೋಲ್ಡ್‌ ಮಾಲಕಿ ದೂರು:

ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಅಂಗಡಿ ಮಾಲಕಿ ವನಿತಾ ಎಸ್.ಐತಾಳ್ ಎಂಬುವರಿಗೆ ಐಶ್ವರ್ಯ ಗೌಡ ವಂಚನೆ ಎಸಗಿದ್ದರು. ಡಿ.ಕೆ.ಸುರೇಶ್ ಸಹೋದರಿ ಎಂದು ಹೇಳಿಕೊಂಡು ಮೋಸ ಮಾಡಲಾಗಿತ್ತು. ಈ ಬಗ್ಗೆ ಚಿನ್ನದ ಅಂಗಡಿ ಮಾಲಕಿ ಆಡಿಯೋ ಕ್ಲಿಪಿಂಗ್ ಮತ್ತು ಇತರ ದಾಖಲೆಗಳ ಸಹಿತ ಪೊಲೀಸರಿಗೆ ದೂರು ನೀಡಿದ್ದರು.

ಚಿನ್ನ ಖರೀದಿ ನೆಪದಲ್ಲಿ ಡಿ.ಕೆ.ಸುರೇಶ್ ಹೆಸರು ಹೇಳಿಕೊಂಡು 9.82 ಕೋಟಿ ರು. ಮೌಲ್ಯದ 14.6 ಕೆ.ಜಿ. ಚಿನ್ನ ವಂಚನೆ ಎಸಗಿದ ಆರೋಪ ಮಾಡಲಾಗಿದೆ. ಈ ಬಗ್ಗೆ ವನಿತಾ ಎಸ್.ಐತಾಳ್ ಚಂದ್ರಾಲೇಔಟ್ ಠಾಣೆಗೆ ದೂರು ನೀಡಿದ್ದರು. ನಂತರ ಡಿ.ಕೆ.ಸುರೇಶ್ ಸಹ ದೂರು ಕೊಟ್ಟಿದ್ದರು. ಜತೆಗೆ, ಮಂಡ್ಯದಲ್ಲೂ ದೂರು ದಾಖಲಾಗಿತ್ತು. ಕೋಟ್ಯಂತರ ರು. ವ್ಯವಹಾರ ನಡೆದಿರುವ ಹಿನ್ನೆಲೆಯಲ್ಲಿ ಇ.ಡಿ. ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಐಶ್ವರ್ಯ ಗೌಡ ಪತಿ ಹರೀಶ್ ಹೆಸರಿನಲ್ಲಿ ನೋಂದಣಿಯಾಗಿರುವ ಐಷಾರಾಮಿ ಬೆನ್ಜ್‌ ಕಾರನ್ನು ಶಾಸಕ ವಿನಯ್ ಕುಲಕರ್ಣಿ ಬಳಸಿರುವುದು ಪೊಲೀಸ್‌ ತನಿಖೆಯಿಂದ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಹೆಸರು ಸಹ ಕೇಳಿಬಂದಿದೆ. ಈ ಸಂಬಂಧ ಇ.ಡಿ. ಅಧಿಕಾರಿಗಳು ದಾಳಿ ನಡೆಸಿ ಶೋಧ ನಡೆಸಿ ಹಲವು ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ. ಐಶ್ವರ್ಯಗೌಡ ಮತ್ತು ವಿನಯ್‌ ನಡುವಿನ ವ್ಯವಹಾರ ಸಂಬಂಧ ವಿಚಾರಣೆ ನಡೆಸಿ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ ಎಂದು ಹೇಳಲಾಗಿದೆ.

Share this article