ಜೈಪುರ/ಅಹಮದಾಬಾದ್/ಬಾಲಾಸೋರ್: ಪಹಲ್ಗಾಂನಲ್ಲಿ ಉಗ್ರರ ಗುಂಡಿಗೆ ಬಲಿಯಾದ 26 ಮಂದಿಯ ಅಂತ್ಯಸಂಸ್ಕಾರವನ್ನು ಅವರವರ ತವರುಗಳಲ್ಲಿ ಗುರುವಾರ ನಡೆಸಲಾಗಿದೆ.
ಈ ವೇಳೆ, ಅವರ ಸತಿ-ಸುತರಾದಿಯಾಗಿ ಪರಿವಾರದವರ ಆಕ್ರಂದನ ಮುಗಿಲುಮುಟ್ಟಿತ್ತು. ಶಿವಮೊಗ್ಗದ ಮಂಜುನಾಥ್, ಬೆಂಗಳೂರಿನ ಭರತ್ ಭೂಷಣ್, ಒಡಿಶಾದ ಬಾಲಾಸೋರ್ ಜಿಲ್ಲೆಯ ಪ್ರಶಾಂತ್ ಸತ್ಪತಿ, ಜೈಪುರದ ನೀರಜ್ ಉದ್ವಾನಿ, ಗುಜರಾತ್‌ನ ಭಾವನಗರ ನಿವಾಸಿ ಯತೀಶ್ ಪರಂ, ಅವರ ಮಗ ಸ್ಮಿತ್, ಸೂರತ್‌ನ ಶೈಲೇಶ್ ಕಲಾಥಿಯಾ, ಉತ್ತರಪ್ರದೇಶದ ಹಾಥಿಪುರದ ಶುಭಂ ದ್ವಿವೇದಿ ಸೇರಿದಂತೆ ದಾಳಿಗೆ ಬಲಿಯಾದವರಿಗೆ ಕ್ರಿಯಾಕರ್ಮಗಳನ್ನು ಮಾಡಲಾಯಿತು.
ಅರುಣಾಚಲದಲ್ಲಿ ಸ್ಮಾರಕ: ‘ಪ್ರವಾಸಕ್ಕೆಂದು ತೆರಳಿ ಉಗ್ರದಾಳಿಗೆ ಹತರಾದ ಭಾರತೀಯ ವಾಯುಪಡೆಯ ಕಾರ್ಪೋರಲ್ ತಾಗೆ ಹೈಲ್ಯಾಂಗ್ ಅವರ ಸ್ಮರಣಾರ್ಥ ಅವರ ಹುಟ್ಟೂರಿನಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗುವುದು’ ಎಂದು ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಘೋಷಿಸಿದ್ದಾರೆ.