ಭಾರತ - ಪಾಕ್‌ ರಾಜತಾಂತ್ರಿಕ ಯುದ್ಧ: ಪಹಲ್ಗಾಂ ದಾಳಿ ಬಳಿಕ ಎರಡೂ ದೇಶಗಳ ಸಂಘರ್ಷ । ಪ್ರತೀಕಾರ

KannadaprabhaNewsNetwork | Updated : Apr 25 2025, 06:56 AM IST

ಸಾರಾಂಶ

ಕಾಶ್ಮೀರದ ಪಹಲ್ಗಾಂನಲ್ಲಿ ಉಗ್ರರು 26 ಮಂದಿಯನ್ನು ಹತ್ಯೆಗೈದ ಬೆನ್ನಲ್ಲೇ ಸಿಂಧು ಒಪ್ಪಂದ ಅಮಾನತು, ಸಾರ್ಕ್‌ ವೀಸಾ ರದ್ದು, ಅಟ್ಟಾರಿ ಗಡಿ ಬಂದ್‌ನಂತಹ ಕಠಿಣ ರಾಜತಾಂತ್ರಿಕ ಕ್ರಮಗಳನ್ನು ಘೋಷಿಸಿದ್ದ ಭಾರತ ವಿರುದ್ಧ ಈಗ ಪಾಕಿಸ್ತಾನ ಪ್ರತೀಕಾರಕ್ಕೆ ಇಳಿದಿದೆ.

ಇಸ್ಲಾಮಾಬಾದ್‌: ಪಹಲ್ಗಾಂ ದಾಳಿ ಬೆನ್ನಲ್ಲೇ ಉಗ್ರರ ಆಶ್ರಯ ತಾಣವಾದ ಪಾಕಿಸ್ತಾನದ ವಿರುದ್ಧ ಕಠಿಣ ರಾಜತಾಂತ್ರಿಕ ಕ್ರಮಗಳನ್ನು ಘೋಷಿಸಿದ್ದ ಭಾರತದ ವಿರುದ್ಧ ಪಾಕಿಸ್ತಾನ ಕೂಡ ಪ್ರತಿಕ್ರಮಗಳನ್ನು ಘೋಷಿಸಿದೆ. ಉಭಯ ದೇಶಗಳ ನಡುವಣ ವಿವಾದವನ್ನು ಎರಡೂ ದೇಶಗಳೇ ಬಗೆಹರಿಸಿಕೊಳ್ಳಬೇಕು ಎಂದು ಸಾರುವ ಹಾಗೂ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ನಿರ್ಧರಿಸುವ, 1972ರಲ್ಲಿ ಏರ್ಪಟ್ಟ ಅತ್ಯಂತ ಮಹತ್ವದ ಶಿಮ್ಲಾ ಅಗ್ರಿಮೆಂಟ್‌ ಸೇರಿ ಎಲ್ಲ ಒಪ್ಪಂದವನ್ನೂ ಅಮಾನತುಗೊಳಿಸುವುದಾಗಿ ಸಾರಿದೆ.

ಜೊತೆಗೆ ‘24 ಕೋಟಿ ಪಾಕಿಸ್ತಾನಿಯರ ಜೀವಾಳವಾಗಿರುವ ಸಿಂಧು ಜಲ ಒಪ್ಪಂದ ಅಮಾನತನ್ನು ಯುದ್ಧ ಎಂದು ಪರಿಗಣಿಸಲಾಗುವುದು’ ಎಂದು ಯುದ್ಧೋತ್ಸಾಹದ ಮಾತುಗಳನ್ನು ಆಡಿದೆ.

ಭಾರತದ ಕ್ರಮಗಳ ಬೆನ್ನಲ್ಲೇ, ಹಿರಿಯ ಸಚಿವರು, ಸೇನೆಯ ಮೂರೂ ವಿಭಾಗಗಳ ಮುಖ್ಯಸ್ಥರ ಜೊತೆ ಪ್ರಧಾನಿ ಶೆಹಬಾಜ್‌ ಷರೀಫ್‌ ಗುರುವಾರ ತುರ್ತು ಸಭೆ ನಡೆಸಿದರು.

ಭಾರತ ಜತೆಗಿನ ಎಲ್ಲ ಒಪ್ಪಂದಗಳನ್ನು ಅಮಾನತುಗೊಳಿಸುವುದಾಗಿ ಪಾಕಿಸ್ತಾನ ಹೇಳುವುದರಿಂದ ಶಿಮ್ಲಾ ಒಪ್ಪಂದ ಕೂಡ ನಿಷ್ಕ್ರಿಯವಾಗಲಿದೆ. ತನ್ಮೂಲಕ ಎರಡು ದೇಶಗಳ ನಡುವಣ ಕಾಶ್ಮೀರ ವಿವಾದವನ್ನು ವಿಶ್ವ ಮಟ್ಟದ ವಿವಾದವಾಗಿಸಲು ಪಾಕಿಸ್ತಾನ ಹೊಂಚು ಹಾಕಿದಂತಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಭಾರತೀಯರಿಗೆ ನೀಡಲಾಗಿರುವ ಎಲ್ಲ ಸಾರ್ಕ್‌ ವೀಸಾ ರದ್ದು ಮಾಡಲಾಗುವುದು. ಆದರೆ ಇದರಿಂದ ಸಿಖ್ಖರಿಗೆ ಮಾತ್ರ ವಿನಾಯಿತಿ ಇರುತ್ತದೆ. ಪಾಕಿಸ್ತಾನದ ವಾಯು ಪ್ರದೇಶದಲ್ಲಿ ಯಾವುದೇ ಭಾರತೀಯ ವಿಮಾನ ಹಾರಾಟ ನಡೆಸಕೂಡದು. ವಾಘಾ ಗಡಿಯನ್ನು ಬಂದ್‌ ಮಾಡಲಿದ್ದು, 48 ಗಂಟೆಗಳಲ್ಲಿ ಭಾರತೀಯರು ದೇಶ ತೊರೆಯಬೇಕು. ಭಾರತದೊಂದಿನ ಎಲ್ಲ ಬಗೆಯ ವ್ಯಾಪಾರ ಬಂದ್‌ ಮಾಡಲಾಗುವುದು ಎಂದು ಪಾಕಿಸ್ತಾನ ಘೋಷಿಸಿದೆ.

ಸಭೆ ಬಳಿಕ ಪಾಕ್‌ ರಾಷ್ಟ್ರೀಯ ಭದ್ರತಾ ಸಮಿತಿ ಹೇಳಿಕೆ ಬಿಡುಗಡೆ ಮಾಡಿದ್ದು, ‘ಪಾಕಿಸ್ತಾನ ಎಲ್ಲಾ ಮಾದರಿಯ ಭಯೋತ್ಪಾದನೆಯನ್ನು ಖಂಡಿಸುತ್ತದೆ. ದೇಶದ ಸಾರ್ವಭೌಮತ್ವ ಮತ್ತು ಜನರ ಭದ್ರತೆಗೆ ಬೆದರಿಕೆ ಬಂದಲ್ಲಿ, ಎಲ್ಲಾ ಮಾರ್ಗಗಳಲ್ಲಿ ಪ್ರತಿಕ್ರಮ ಕೈಗೊಳ್ಳುತ್ತೇವೆ. ಭಾರತ ತನ್ನ ರಾಜಕೀಯ ಲಾಭಕ್ಕಾಗಿ ಪಹಲ್ಗಾಮ್‌ನಂತಹ ಘಟನೆಗಳನ್ನು ಬಳಸಿಕೊಳ್ಳುವುದನ್ನು ನಿಲ್ಲಿಸಬೇಕು. ಇದರಿಂದ ಶಾಂತಿ ಮತ್ತು ಸ್ಥಿರತೆ ಸ್ಥಾಪನೆಗೆ ಅಡ್ಡಿಯಾಗುತ್ತದೆ’ ಎಂದಿದೆ.

ಒಪ್ಪಂದಕ್ಕೆ ಪಾಕ್‌ ಕೊಕ್‌

- ಎಲ್‌ಒಸಿ ನಿರ್ಧರಿಸುವ ಶಿಮ್ಲಾ ಒಪ್ಪಂದವೂ ಅಮಾನತು

- ಸಿಂಧು ನೀರಿಗೆ ಅಡ್ಡಿ ಯುದ್ಧಕ್ಕೆ ಸಮ ಎಂದು ರಣೋತ್ಸಾಹ

- ವಾಘಾ ಬಂದ್‌ । ದೇಶ ಬಿಡಲು ಭಾರತೀಯರಿಗೆ ತಾಕೀತು

- ಭಾರತದ ವಿಮಾನಗಳು ತನ್ನ ಆಗಸ ಬಳಕೆಗೂ ನಿಷೇಧ

ಉಗ್ರರ ಕೃತ್ಯವನ್ನು ಖಂಡಿಸಿಯೇ ಇಲ್ಲ ಪಾಕ್‌ ಪ್ರಧಾನಿ!

ನೆರೆಯ ದೇಶಗಳಲ್ಲಿ ಉಗ್ರರ ದಾಳಿಗಳು ನಡೆದಾಗ ಪ್ರಧಾನಮಂತ್ರಿಗಳು ಅದನ್ನು ಖಂಡಿಸುವುದು ಮಾಮೂಲಿ. ಭಾರತದಲ್ಲಿ 26 ಮಂದಿಯನ್ನು ಉಗ್ರರು ಕೊಂದು ಹಾಕಿದ್ದರೂ ಸೌಜನ್ಯಕ್ಕೂ ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್‌ ಅದನ್ನು ಖಂಡಿಸಿಲ್ಲ!

ಪಾಕ್‌ ಕ್ರಮಗಳೇನು?- ಎಲ್‌ಒಸಿ ನಿರ್ಧರಿಸುವ ಶಿಮ್ಲಾ ಅಗ್ರಿಮೆಂಟ್‌ ಸೇರಿ ಭಾರತದೊಂದಿಗಿನ ಎಲ್ಲ ಒಪ್ಪಂದ ರದ್ದು- ಭಾರತೀಯರಿಗೆ ನೀಡಲಾಗುವ ಸಾರ್ಕ್‌ ವೀಸಾ ರದ್ದು. ಆದರೆ ಸಿಖ್ಖರಿಗೆ ವಿನಾಯ್ತಿ- ತನ್ನ ವಾಯುಪ್ರದೇಶದಲ್ಲಿ ಎಲ್ಲಾ ಭಾರತೀಯ ವಿಮಾನಗಳ ಹಾರಾಟವನ್ನು ನಿರ್ಬಂಧ- ವಾಘಾ ಗಡಿ ಬಂದ್‌. ಭಾರತೀಯರಿಗೆ ದೇಶ ಬಿಡಲು 48 ಗಂಟೆ ಸಮಯಾವಕಾಶ- ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ದೂತಾವಾಸದಲ್ಲಿ 30 ಜನರಿಗೆ ಮಾತ್ರ ಅವಕಾಶ- ಭಾರತದೊಂದಿಗಿನ ಎಲ್ಲಾ ನೇರ, 3ನೇ ದೇಶಗಳ ಮೂಲಕ ನಡೆವ ವ್ಯಾಪಾರ ಪೂರ್ಣ ಬಂದ್‌

Share this article