ಕಾಶ್ಮೀರ ಪಹಲ್ಗಾಂನ ದಾಳಿಕೋರರು ಎಲ್ಲೇ ಇದ್ದರೂ ಬಿಡೋದಿಲ್ಲ : ಪ್ರಧಾನಿ ಮೋದಿ

KannadaprabhaNewsNetwork |  
Published : Apr 24, 2025, 11:46 PM ISTUpdated : Apr 25, 2025, 06:58 AM IST
ಮೋದಿ  | Kannada Prabha

ಸಾರಾಂಶ

ಕಾಶ್ಮೀರದ ಪಹಲ್ಗಾಂನಲ್ಲಿ 26 ಮಂದಿಯನ್ನು ಅಮಾನುಷವಾಗಿ ಹತ್ಯೆಗೈದ ಉಗ್ರಗಾಮಿಗಳು ಮತ್ತು ಉಗ್ರವಾದಕ್ಕೆ ಪ್ರೋತ್ಸಾಹ ನೀಡುತ್ತಿರುವವರು ಎಲ್ಲೇ ಅಡಗಿದ್ದರೂ ಬಿಡುವುದಿಲ್ಲ. ಅವರ ಕಲ್ಪನೆಗೂ ನಿಲುಕದ ಶಿಕ್ಷೆಯನ್ನು ನಾವು ನೀಡಲಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದಾರೆ.

ಮಧುಬನಿ (ಬಿಹಾರ): ಕಾಶ್ಮೀರದ ಪಹಲ್ಗಾಂನಲ್ಲಿ 26 ಮಂದಿಯನ್ನು ಅಮಾನುಷವಾಗಿ ಹತ್ಯೆಗೈದ ಉಗ್ರಗಾಮಿಗಳು ಮತ್ತು ಉಗ್ರವಾದಕ್ಕೆ ಪ್ರೋತ್ಸಾಹ ನೀಡುತ್ತಿರುವವರು ಎಲ್ಲೇ ಅಡಗಿದ್ದರೂ ಬಿಡುವುದಿಲ್ಲ. ಅವರ ಕಲ್ಪನೆಗೂ ನಿಲುಕದ ಶಿಕ್ಷೆಯನ್ನು ನಾವು ನೀಡಲಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಗುಡುಗಿದ್ದಾರೆ. ಈ ಮೂಲಕ ಉಗ್ರರು ಮತ್ತು ಅವರಿಗೆ ನೆರವಾದ ಪಾಕಿಸ್ತಾನಕ್ಕೆ ಪ್ರಧಾನಿ ಮೋದಿ ಸ್ಪಷ್ಟ ಮತ್ತು ದಿಟ್ಟ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಏ.22ರ ಪಹಲ್ಗಾಂ ಉಗ್ರ ದಾಳಿ ಕುರಿತು ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಪ್ರತಿಕ್ರಿಯೆ ನೀಡಿದ ಪ್ರಧಾನಿ ಮೋದಿ, ಉಗ್ರಗಾಮಿಗಳು ಮತ್ತು ಅವರಿಗೆ ಬೆಂಬಲವಾಗಿ ನಿಂತಿರುವ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುವ ಶಪಥ ಮಾಡಿದ್ದಾರೆ. ಜತೆಗೆ, ಭಯೋತ್ಪಾದನೆಯು ಯಾವತ್ತಿಗೂ ಭಾರತದ ಸ್ಪೂರ್ತಿಯನ್ನು ಮುರಿಯಲು ಸಾಧ್ಯವಿಲ್ಲ ಎಂದೂ ಎಂದೂ ಸ್ಪಷ್ಟಪಡಿಸಿದ್ದಾರೆ.

ಬಿಹಾರದ ಮಧುಬನಿಯಲ್ಲಿ ಗುರುವಾರ ಆಯೋಜಿಸಿದ್ದ ರಾಷ್ಟ್ರೀಯ ಪಂಚಾಯತ್‌ ರಾಜ್‌ ದಿನದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ರ್‍ಯಾಲಿಯಲ್ಲಿ ಮೋದಿ ಮಾತನಾಡಿದರು.

ಮೋದಿ ಹೇಳಿದ್ದಿಷ್ಟು:

‘ಗೆಳೆಯರೇ, ನಾನು ಇಂದು ಬಿಹಾರದ ನೆಲದಲ್ಲಿ ನಿಂತು ಇಡೀ ವಿಶ್ವಕ್ಕೆ ಹೇಳಬಯಸುವುದು ಇಷ್ಟೆ: ಭಾರತವು ಪಹಲ್ಗಾಂ ದಾಳಿಯ ಹಿಂದಿರುವ ಎಲ್ಲ ಉಗ್ರರು ಮತ್ತು ಸೂತ್ರಧಾರರನ್ನು ಗುರುತಿಸಿ, ಪತ್ತೆ ಹಚ್ಚಿ, ಶಿಕ್ಷೆ ನೀಡಲಿದೆ. ಅದಕ್ಕಾಗಿ ನಾವು ಸಾಧ್ಯವಿರುವ ಎಲ್ಲಾ ಗರಿಷ್ಠ ಪ್ರಯತ್ನಗಳನ್ನು ಮಾಡಲಿದ್ದೇವೆ’ ಎಂದು ಎಚ್ಚರಿಕೆ ನೀಡಿದರು.ಜೊತೆಗೆ, ಘಟನೆಗೆ ಸಂಬಂಧಿಸಿ ನ್ಯಾಯ ಒದಗಿಸಲು ಎಲ್ಲಾ ರೀತಿಯಲ್ಲೂ ನಾವು ಪ್ರಯತ್ನಿಸಲಿದ್ದೇವೆ. ಈ ವಿಚಾರದಲ್ಲಿ ಇಡೀ ದೇಶ ಒಗ್ಗಟ್ಟಾಗಿ ನಿಂತಿದೆ. ಮಾನವೀಯತೆಯಲ್ಲಿ ನಂಬಿಕೆ ಇರಿಸಿರುವ ಪ್ರತಿಯೊಬ್ಬರೂ ನಮ್ಮ ಜತೆಗಿದ್ದಾರೆ. ಈ ಸಮಯದಲ್ಲಿ ನಮ್ಮ ಜತೆಗೆ ನಿಂತ ಹಲವು ದೇಶಗಳ ಜನ ಮತ್ತು ಮುಖಂಡರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಇದೇ ವೇಳೆ ಪಾಕಿಸ್ತಾನದ ಹೆಸರೇಳದೆ ತಿರುಗೇಟು ನೀಡಿದ ಅವರು, ಪಹಲ್ಗಾಂ ‘ದಾಳಿಕೋರರು ಮತ್ತು ಷಡ್ಯಂತ್ರ ರೂಪಿಸಿದ ಇಬ್ಬರೂ ಕಲ್ಪನೆಗೂ ಮೀರಿದ ಶಿಕ್ಷೆಗೆ ಗುರಿಯಾಗಲಿದ್ದಾರೆ. ಖಂಡಿತಾ ಅವರಿಗೆ ಶಿಕ್ಷೆ ವಿಧಿಸಿಯೇ ತೀರುತ್ತೇವೆ, 140 ಕೋಟಿ ಭಾರತೀಯರ ಇಚ್ಛಾಶಕ್ತಿ ಖಂಡಿತವಾಗಿಯೂ ಉಗ್ರವಾದದ ಬೆಂಬಲಿಗರ ಬೆನ್ನು ಮುರಿಯಲಿದೆ’ ಎಂಬ ಸಂದೇಶ ರವಾನಿಸಿದ್ದಾರೆ.

ಇಡೀ ದೇಶ ಪಹಲ್ಗಾಂ ಉಗ್ರ ದಾಳಿಯಲ್ಲಿ ಜೀವತೆತ್ತ 26 ಮಂದಿಗಾಗಿ ಕಣ್ಣೀರು ಹಾಕುತ್ತಿದೆ. ಇಡೀ ದೇಶದ ಜನ ಮೃತರ ಕುಟುಂಬದ ಜತೆಗೆ ನಿಂತಿದ್ದಾರೆ. ಕೆಲವರು ಪುತ್ರರು, ಇನ್ನು ಕೆಲವರು ಸಹೋದರರು ಮತ್ತು ಇನ್ನೊಂದಷ್ಟು ಮಂದಿ ಜೀವನ ಸಂಗಾತಿಯನ್ನೇ ಕಳೆದುಕೊಂಡಿದ್ದಾರೆ. ಉಗ್ರರ ಗುಂಡಿಗೆ ಬಲಿಯಾದವರಲ್ಲಿ ಕೆಲವರು ಬಂಗಾಳಿ, ಕನ್ನಡ, ಮರಾಠಿ, ಒಡಿಯಾ ಮಾತನಾಡಿದರೆ, ಇನ್ನು ಕೆಲವರು ಗುಜರಾತಿ, ಬಿಹಾರಿ ಮಾತನಾಡುವವರಾಗಿದ್ದರು. ಹೀಗೆ ದೇಶದ ವಿವಿಧ ಭಾಗಗಳಿಗೆ ಸೇರಿದವರು ಸಾವಿಗೀಡಾಗಿದ್ದಾರೆ. ಹೀಗಾಗಿ ಕಾರ್ಗಿಲ್‌ನಿಂದ ಕನ್ಯಾಕುಮಾರಿವರೆಗೆ ನಮ್ಮ ನೋವು ಒಂದೇ ತೆರನಾಗಿದೆ. ಈ ದಾಳಿ ಅಮಾಯಕ ಪ್ರವಾಸಿಗರ ಮೇಲೆ ನಡೆದ ದಾಳಿಯಷ್ಟೇ ಅಲ್ಲ, ಭಾರತದ ಆತ್ಮದ ಮೇಲೆ ದಾಳಿ ನಡೆಸುವ ಶತ್ರುಗಳ ದಾಷ್ಟ್ಯ ಇದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೃತರಿಗಾಗಿ ಮೌನಾಚರಣೆ

ರಾಷ್ಟ್ರೀಯ ಪಂಚಾಯತ್ ರಾಜ್‌ ದಿನಾಚರಣೆ ಹಿನ್ನೆಲೆಯಲ್ಲಿ ಮಧುಬನಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಷಣ ಆರಂಭಿಸುವ ಮುನ್ನ ಪ್ರಧಾನಿ ಮೋದಿ ಅವರು ಕೆಲ ಕ್ಷಣ ಮೌನಾಚರಿಸಿ ಪಹಲ್ಗಾಂ ದಾಳಿಯಲ್ಲಿ ಮೃತರಿಗಾಗಿ ಸಂತಾಪ ಸೂಚಿಸಿದರು. ಆಗ ವೇದಿಕೆ ಮೇಲಿದ್ದ ಮತ್ತು ಕಾರ್ಯಕ್ರಮದಲ್ಲಿ ಸೇರಿದ್ದ ಸಾವಿರಾರು ಮಂದಿ ಕೂಡ ಮೌನಾಚರಿಸಿ ಉಗ್ರ ದಾಳಿಯಲ್ಲಿ ಮೃತರಿಗೆ ಗೌರವ ಸೂಚಿಸಿದರು.

 ಹಿಂದಿ ಬದಲು ಇಂಗ್ಲಿಷ್‌ ಭಾಷಣ

ಬಿಹಾರ ಕಾರ್ಯಕ್ರಮದಲ್ಲಿ ಹಿಂದಿಯಲ್ಲಿ ಭಾಷಣ ಆರಂಭಿಸಿದ ಪ್ರಧಾನಿ ಮೋದಿ ಇದ್ದಕ್ಕಿದ್ದಂತೆ ತಮ್ಮ ಭಾಷಣವನ್ನು ಇಂಗ್ಲಿಷ್‌ನಲ್ಲಿ ನಡೆಸುವ ಮೂಲಕ ತಮ್ಮ ಮಾತು ಜಗತ್ತಿನ ಮೂಲೆಮೂಲೆಗೂ, ಯಾರಿಗೆ ತಲುಪಬೇಕೋ ಅವರಿಗೆ ತಲುಪುವಂತೆ ನೋಡಿಕೊಂಡರು. ಬಳಿಕ ಹಿಂದಿಯಲ್ಲಿ ತಮ್ಮ ಭಾಷಣದ ಮುಂದುವರೆಸಿದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !