ನವದೆಹಲಿ : ‘ಹತ್ಯೆ ಪ್ರಕರಣದಲ್ಲಿ ಯೆಮೆನ್‌ನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಕೇರಳ ಮೂಲದ ನರ್ಸ್ ನಿಮಿಷ ಪ್ರಿಯಾಗೆ ಕ್ಷಮಾದಾನ ಕೊಡಿಸುವ ಸಂಧಾನ ಮಾತುಕತೆಯನ್ನು ಆಕೆಯ ಕುಟುಂಬದವರಷ್ಟೇ ನಡೆಸಬೇಕು. ಹೊರಗಿನವರಿಗೆ ಅವಕಾಶ ನೀಡುವುದು ಭದ್ರತೆ, ಇನ್ನಿತರ ಕಾರಣಗಳಿಂದ ಸಾಧುವಲ್ಲ’ ಎಂದು ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರ್ಕಾರ ತಿಳಿಸಿದೆ.
ಅಲ್ಲದೆ, ಜು.16ರಂದು ಜಾರಿಯಾಗಬೇಕಿದ್ದ ಗಲ್ಲು ಶಿಕ್ಷೆಗೆ ಯೆಮೆನ್ ಆಡಳಿತ ತಡೆ ನೀಡಿರುವ ವಿಚಾರವನ್ನೂ ಇದೇ ವೇಳೆ ಕೇಂದ್ರ ಸರ್ಕಾರವು ದ್ವಿಸದಸ್ಯ ನ್ಯಾಯಪೀಠದ ಗಮನಕ್ಕೆ ತಂದಿದೆ.
ಶುಕ್ರವಾರ ನಡೆದ ವಿಚಾರನೆ ವೇಳೆ ವಾದ ಮಂಡಿಸಿದ ಕೇಂದ್ರ ಸರ್ಕಾರದ ಪರ ವಕೀಲರು, ‘ನಿಮಿಷಪ್ರಿಯಾರನ್ನು ಗಲ್ಲು ಶಿಕ್ಷೆಯಿಂದ ಪಾರು ಮಾಡಲು ಸಾಧ್ಯವಾದ ಎಲ್ಲಾ ಪ್ರಯತ್ನ ನಡೆಸಲಾಗುವುದು. ಈ ನಿಟ್ಟಿನಲ್ಲಿ ಪ್ರಯತ್ನಗಳು ನಡೆಯುತ್ತಲೂ ಇವೆ’ ಎಂದು ಹೇಳಿತು
ಈಗಾಗಲೇ ನಿಮಿಷಾ ಪ್ರಿಯಾ ತಾಯಿ ಯೆಮೆನ್‌ನಲ್ಲಿದ್ದು ಕ್ಷಮಾದಾನಕ್ಕಾಗಿ ಸಂತ್ರಸ್ತರ ಕುಟುಂಬದ ಮನವೊಲಿಕೆಗೆ ಪ್ರಯತ್ನಿಸುತ್ತಿದ್ದಾರೆ. ಆಕೆಯ ಜತೆಗೆ ಕೇರಳದ ಮುಸ್ಲಿಂ ವಿದ್ವಾಂಸ, ಇಂಟರ್‌ನ್ಯಾಷನಲ್ ಆ್ಯಕ್ಷನ್ ಕೌನ್ಸಿಲ್ ಹಾಗೂ ಸರ್ಕಾರದ ಪ್ರತಿನಿಧಿಯೊಬ್ಬರನ್ನೂ ಕಳುಹಿಸಿಕೊಡಲು ಅವಕಾಶ ನೀಡಬೇಕು’ ಎಂದು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಅರ್ಜಿದಾರರ ಪರ ವಕೀಲರು ಮನವಿ ಮಾಡಿದರು.
ಅರ್ಜಿದಾರರ ಈ ಬೇಡಿಕೆಗೆ ಪ್ರತಿಕ್ರಿಯಿಸಿದ ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಅವರು, ‘ಭದ್ರತೆ ಮತ್ತು ಇತರೆ ಕಾರಣಗಳಿಗಾಗಿ ಕೇವಲ ನಿಮಿಷ ಪ್ರಿಯಾ ಅವರ ಕುಟುಂಬ ಮಾತ್ರ ಬ್ಲಡ್ ಮನಿ ವಿಚಾರವಾಗಿ ಸಂತ್ರಸ್ತ ಕುಟುಂಬದ ಜತೆಗೆ ಮಾತುಕತೆ ನಡೆಸಬೇಕು. ಹೊರಗಿನ ಯಾವುದೇ ಪ್ರತಿನಿಧಿಗಳಿಗೆ ಈ ವಿಚಾರದಲ್ಲಿ ಅವಕಾಶ ನೀಡುವುದು ಕಷ್ಟ’ ಎಂದು ಹೇಳಿದರು.
ಕೊನೆಗೆ ಈ ವಿಚಾರದಲ್ಲಿ ಯಾವ ತೀರ್ಮಾನ ತೆಗೆದುಕೊಳ್ಳಬೇಕು ಎಂಬುದನ್ನು ಸರ್ಕಾರದ ವಿವೇಚನೆಗೆ ಬಿಡುವುದಾಗಿ ನ್ಯಾಯಾಲಯ ತಿಳಿಸಿತು.