ಪಹಲ್ಗಾಂ ಘಟನಾ ಸ್ಥಳಕ್ಕೆ ಹೋಗಿ ಅಮಿತ್‌ ಶಾ ಪರಿಶೀಲನೆ - ಭಾರತ ಉಗ್ರವಾದಕ್ಕೆ ಬಾಗದು : ಶಪಥ

KannadaprabhaNewsNetwork |  
Published : Apr 24, 2025, 12:01 AM ISTUpdated : Apr 24, 2025, 06:01 AM IST
ಶಾ | Kannada Prabha

ಸಾರಾಂಶ

ಇಲ್ಲಿನ ಬೈಸರನ್‌ ಹುಲ್ಲುಗಾವಲು ಪ್ರದೇಶದಲ್ಲಿ ಉಗ್ರರಿಂದ ಭೀಕರ ನರಮೇಧ ನಡೆದ ಬೆನ್ನಲ್ಲೇ ಜಮ್ಮು ಕಾಶ್ಮೀರಕ್ಕೆ ದೌಡಾಯಿಸಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು, ಖುದ್ದು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಪಹಲ್ಗಾಂ: ಇಲ್ಲಿನ ಬೈಸರನ್‌ ಹುಲ್ಲುಗಾವಲು ಪ್ರದೇಶದಲ್ಲಿ ಉಗ್ರರಿಂದ ಭೀಕರ ನರಮೇಧ ನಡೆದ ಬೆನ್ನಲ್ಲೇ ಜಮ್ಮು ಕಾಶ್ಮೀರಕ್ಕೆ ದೌಡಾಯಿಸಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು, ಖುದ್ದು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ತಮ್ಮ ಎದುರು ನ್ಯಾಯಕ್ಕಾಗಿ ರೋದಿಸಿದ ಸಂತ್ರಸ್ತರನ್ನು ಸಂತೈಸಿ, ‘ಭಾರತ ಭಯೋತ್ಪಾದನೆಯ ಎದುರು ಬಾಗುವುದಿಲ್ಲ’ ಎಂದು ಗುಡುಗಿದ್ದಾರೆ.

ಉಗ್ರರ ಗುಂಡಿಗೆ ಬಲಿಯಾದವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಅವರು, ಬಳಿಕ ಸಂತ್ರಸ್ತರ ಕುಟುಂಬದವರನ್ನು ಭೇಟಿಯಾದರು. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ನೋವಿನಲ್ಲಿ ಕಂಬನಿಗರೆದು ಗೋಳಾಡುತ್ತಿದ್ದವರ ದುಃಖಕ್ಕೆ ಮಿಡಿದ ಸಚಿವರು, ಮಕ್ಕಳ ತಲೆ ಸವರಿ ಧೈರ್ಯ ತುಂಬಿದರು. ನೆರವಿನ ನಿರೀಕ್ಷೆಯಲ್ಲಿ ತಮ್ಮೆದುರು ಕೈಮುಗಿದ ವೃದ್ಧರಿಗೆ ಅಭಯ ನೀಡಿದರು.

ಇದೇ ವೇಳೆ, ‘ದಾಳಿಯ ಹಿಂದಿರುವ ಉಗ್ರರನ್ನು ನಾವು ಸುಮ್ಮನೆ ಬಿಡುವುದಿಲ್ಲ. ಭದ್ರತಾ ಪಡೆಗಳು ಅಪರಾಧಿಗಳಿಗೆ ತಕ್ಕ ಪಾಠ ಕಲಿಸಿ, ನ್ಯಾಯ ಒದಗಿಸುತ್ತಾರೆ’ ಎಂದು ಅವರು ಭರವಸೆ ನೀಡಿದರು. ಮೊದಲಿಗೆ, ಶ್ರೀನಗರದ ಪೊಲೀಸ್ ನಿಯಂತ್ರಣ ಕೊಠಡಿಯಲ್ಲಿ ಮೃತ ದೇಹಗಳಿಗೆ ಹೂಮಾಲೆ ಅರ್ಪಿಸುವ ಮೂಲಕ ಅಮಿತ್‌ ಶಾ, ಉಗ್ರದಾಳಿಯಲ್ಲಿ ಮಡಿದವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. 

ನಂತರ ಹೆಲಿಕಾಪ್ಟರ್‌ನಲ್ಲಿ, ದಾಳಿ ನಡೆದ ಬೈಸರನ್‌ಗೆ ತೆರಳಿದ ಅವರು, ಭದ್ರತಾ ಅಧಿಕಾರಿಗಳಿಂದ ಘಟನೆ ಕುರಿತ ಮಾಹಿತಿಗಳನ್ನು ಪಡೆದರು. ಬಳಿಕ ದಿಲ್ಲಿಗೆ ಮರಳಿದರು. ಉಗ್ರದಾಳಿಯ ಮಾಹಿತಿ ಪಡೆಯುತ್ತಿದ್ದಂತೆ ಮಂಗಳವಾರ ಸಂಜೆ ಶ್ರೀನಗರಕ್ಕೆ ಬಂದಿಳಿದಿದ್ದ ಅಮಿತ್‌ ಶಾ, ಲೆಫ್ಟಿನೆಂಟ್ ಗವರ್ನರ್ ಮನೋಜ್‌ ಸಿನ್ಹಾ ಅವರ ಜತೆ ಭದ್ರತೆ ಪರಿಶೀಲನಾ ಸಭೆ ನಡೆಸಿದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
ಭಾರತ-ಇಂಗ್ಲೆಂಡ್‌ ಸರಣಿ ಕ್ಲೈಮ್ಯಾಕ್ಸ್‌ ಇಂದು !