ಪ್ರವಾಸಿಗರ ನರಮೇಧ

KannadaprabhaNewsNetwork | Published : Apr 23, 2025 2:01 AM

ಸಾರಾಂಶ

ಬೇಸಿಗೆ ಪ್ರವಾಸಕ್ಕೆಂದು ಕಣಿವೆ ರಾಜ್ಯ ಕಾಶ್ಮೀರಕ್ಕೆ ತೆರಳಿದ್ದ ಪ್ರವಾಸಿಗರನ್ನು ಗುರಿಯಾಗಿಸಿ ಉಗ್ರರು ಮಂಗಳವಾರ ಭೀಕರ ನರಮೇಧ ನಡೆಸಿದ್ದಾರೆ.

ಕಾಶ್ಮೀರ ಸಹಾಯವಾಣಿ

ಸಂತ್ರಸ್ತರಿಗೆ ಸಹಾಯ ಮಾಡಲು ಅನಂತನಾಗ್ ಜಿಲ್ಲಾ ಪೊಲೀಸರು ಹಾಗೂ ಜಿಲ್ಲಾಡಳಿತ ಪ್ರತ್ಯೇಕ ಸಹಾಯವಾಣಿ ಕೇಂದ್ರವನ್ನು ತೆರೆದಿದ್ದಾರೆ. ಅಗತ್ಯವಿದ್ದವರು 9596777669, 01932225870, 01932222337, 7780885759, 9697982527 ಮತ್ತು 6006365245 ಸಂಖ್ಯೆಗಳಿಗೆ ಕರೆ ಮಾಡಬಹುದಾಗಿದೆ. ಜೊತೆಗೆ 9419051940ಗೆ ವಾಟ್ಸಾಪ್‌ ಮಾಡಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

----

ಏನಾಯ್ತು?

ಕಾಶ್ಮೀರಕ್ಕೆ ತೆರಳಿದ್ದ ಕನ್ನಡಿಗರು ಸೇರಿ ಪ್ರವಾಸಿಗರ ಮೇಲೆ 5 ಉಗ್ರರಿಂದ ಏಕಾಏಕಿ ಭೀಕರ ಗುಂಡಿನ ದಾಳಿ. 26 ಜನರ ಸಾವು

ಎಲ್ಲಿ?

ಪಹಲ್ಗಾಮ್‌ ಜಿಲ್ಲೆಯ ಬೈಸರಣ್ ಎಂಬ ಪ್ರವಾಸಿ ತಾಣದಲ್ಲಿ ಘಟನೆ. ಲಷ್ಕರ್‌ ಎ ತೊಯ್ಬಾ ನಂಟಿನ ಉಗ್ರ ಸಂಘಟನೆಯಿಂದ ಕೃತ್ಯ

ಯಾವಾಗ?

ಮಂಗಳವಾರ ಮಧ್ಯಾಹ್ನ 3 ಗಂಟೆಯ ವೇಳೆಗೆ ದಾಳಿ. ಉಗ್ರರ ಪತ್ತೆಗೆ ಭಾರೀ ಕಾರ್ಯಾಚರಣೆ

---

ಶ್ರೀನಗರ: ಬೇಸಿಗೆ ಪ್ರವಾಸಕ್ಕೆಂದು ಕಣಿವೆ ರಾಜ್ಯ ಕಾಶ್ಮೀರಕ್ಕೆ ತೆರಳಿದ್ದ ಪ್ರವಾಸಿಗರನ್ನು ಗುರಿಯಾಗಿಸಿ ಉಗ್ರರು ಮಂಗಳವಾರ ಭೀಕರ ನರಮೇಧ ನಡೆಸಿದ್ದಾರೆ. ದಕ್ಷಿಣ ಕಾಶ್ಮೀರದ ಪಹಲ್ಗಾಮ್ ಜಿಲ್ಲೆಯ ಬೈಸರನ್‌ ಹಲ್ಲುಗಾವಲು ಪ್ರದೇಶದಲ್ಲಿ ಕುಟುಂಬ ಸದಸ್ಯರೊಂದಿಗೆ ಕಾಲ ಕಳೆಯುತ್ತಿದ್ದ ಪ್ರವಾಸಿಗರನ್ನು ಗುರಿಯಾಗಿಸಿ ನಡೆಸಿದ ದಾಳಿಯಲ್ಲಿ ಇಬ್ಬರು ಕನ್ನಡಿಗರು ಸೇರಿದಂತೆ 28 ಜನರು ಸಾವನ್ನಪ್ಪಿದ್ದಾರೆ.

ಮೃತ ಕನ್ನಡಿಗರನ್ನು ಶಿವಮೊಗ್ಗದ ಉದ್ಯಮಿ ಮಂಜುನಾಥ್‌ ರಾವ್‌ ಮತ್ತು ಬೆಂಗಳೂರಿನ ಭರತ್‌ ಭೂಷಣ್‌ ಎಂದು ಗುರುತಿಸಲಾಗಿದೆ. ಮೃತರಲ್ಲಿ ಇಬ್ಬರು ವಿದೇಶಿಯರು ಕೂಡಾ ಇದ್ದಾರೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು ಅವರನ್ನು ಸಮೀಪದ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಉಗ್ರರ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿಯಾದಿ ಗಣ್ಯರು ಕಟುನುಡಿಗಳಲ್ಲಿ ಖಂಡಿಸಿದ್ದಾರೆ. ಮತ್ತೊಂದೆಗೆ ಸುದ್ದಿ ತಿಳಿದ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಕಾಶ್ಮೀರಕ್ಕೆ ದೌಡಾಯಿಸಿದ್ದು, ಹಿರಿಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಮಾಹಿತಿ ಪಡೆದುಕೊಂಡಿದ್ದಾರೆ.

ಈ ದಾಳಿಯನ್ನು ಜಮ್ಮು ಕಾಶ್ಮೀರದಲ್ಲಿ 370ನೇ ವಿಧಿ ರದ್ದುಪಡಿಸಿದ ಬಳಿಕದ, ಪುಲ್ವಾಮಾದಲ್ಲಿ ಯೋಧರ ಗುರಿಯಾಗಿಸಿ ನಡೆಸಿದ ಬಳಿಕ ಅತಿದೊಡ್ಡ ದಾಳಿಯಾಗಿದೆ. ಜೊತೆಗೆ ಕಾಶ್ಮಿರದಲ್ಲಿ ಪ್ರವಾಸಿಗರನ್ನು ಗುರಿಯಾಗಿಸಿ ಕಳೆದ 25 ವರ್ಷಗಳಲ್ಲೇ ನಡೆಸಿದ ಅತಿದೊಡ್ಡ ದಾಳಿ ಎಂದು ಬಣ್ಣಿಸಲಾಗಿದೆ

ಭಾರತದ ಮಿನಿ ಸ್ವಿಜರ್ಲೆಂಡ್‌ ಎಂದೇ ಖ್ಯಾತಿ ಪಡೆದಿರುವ ಕಾಶ್ಮೀರದ ಪಹಲ್ಗಾಂನ ಸುಂದರ ಬೈಸರನ್‌ ಹುಲ್ಲುಗಾವಲು ಪ್ರದೇಶದಲ್ಲಿ ನಡೆದ ದಾಳಿಯ ಹೊಣೆಯನ್ನು ಲಷ್ಕರ್ ಎ ತೊಯ್ಬಾ ಸಂಘಟನೆಯ ಅಧೀನ ಸಂಘಟನೆಯಾದ ದ ರೆಸಿಸ್ಟನ್ಸ್ ಫ್ರಂಟ್‌ (ಟಿಆರ್‌ಎಫ್‌) ಸಂಘಟನೆ ಹೊತ್ತುಕೊಂಡಿದೆ. ದಕ್ಷಿಣ ಕಾಶ್ಮೀರದಿಂದ ಕಿಶ್ತ್ವಾರ್ ಮೂಲಕ ಆಗಮಿಸಿ ಇವರು ದಾಳಿ ನಡೆಸಿರಬಹುದು ಎಂಬ ಶಂಕೆ ಇದೆ. ಇದು ಪ್ರಧಾನಿ ನರೇಂದ್ರ ಮೋದಿ ಸೌದಿ ಅರೇಬಿಯಾಗೆ ತೆರಳಿದ್ದಾಗ ಹಾಗೂ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್‌ ಭಾರತಕ್ಕೆ ಆಗಮಿಸಿದಾಗ ಘಟನೆ ನಡೆದಿದೆ. ಅಲ್ಲದೆ, 26/11 ದಾಳಿ ಸಂಚುಕೋರ ತಹಾವುರ್‌ ರಾಣಾ ಭಾರತಕ್ಕೆ ಗಡೀಪಾರಾದ ಬೆನ್ನಲ್ಲೇ ನಡೆದ ದಾಳಿಯಾಗಿದೆ. ಹೀಗಾಗಿ ಉಗ್ರರು ವಿಶೇಷ ಸಂದೇಶ ನೀಡಲು ದಾಳಿ ಮಾಡಿರಬಹುದು ಎಂದು ಶಂಕಿಸಲಾಗಿದೆ.

ಆಗಿದ್ದೇನು?:ಜಮ್ಮು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಪಹಲ್ಗಾಮ್‌ನ ಬೈಸರನ್‌ ಹುಲ್ಲುಗಾಲು ಮಿನಿ ಸ್ವಿಜರ್ಲೆಂಡ್‌ ಎಂದೇ ಖ್ಯಾತಿ ಪಡೆದಿದೆ. ಅಪ್ರತಿಮ ಪ್ರಾಕೃತಿಕ ಸೌಂದರ್ಯದ ಕಾರಣ ಇದಕ್ಕೆ ಇಲ್ಲಿ ಅನೇಕ ಹಿಂದಿ ಚಿತ್ರಗಳೂ ಚಿತ್ರೀಕರಣಗೊಂಡಿವೆ. ಆದರೆ ಈ ಪ್ರದೇಶ ಬೆಟ್ಟಗುಡ್ಡದಿಂದ ಕೂಡಿದೆ. ಹೀಗಾಗಿ ವಾಹನಕ್ಕೆ ಪ್ರವೇಶಿಸಲಾಗದು. ಕಾಲ್ನಡಿಗೆ ಅಥವಾ ಕುದುರೆ ಮೂಲಕ ತಲುಪಬೇಕು. ಈ ಪ್ರಕೃತಿ ಸೌಂದರ್ಯ ಆಸ್ವಾದಿಸಲು ಭಾರತದ ವಿವಿಧ ಭಾಗ ಹಾಗೂ ವಿದೇಶಗಳಿಂದ ಪ್ರವಾಸಿಗರು ಆಗಮಿಸಿದ್ದರು.

ಆದರೆ ಪಕ್ಕದ ಅಡವಿಗಳಲ್ಲಿ ಅವಿತಿದ್ದ ಸುಮಾರು 5 ಉಗ್ರರು, ಅಲ್ಲಿಂದ ಹೊರಬಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಪ್ರವಾಸಿಗರ ಜಾತಿ-ಧರ್ಮ ಕೇಳಿ, ಅವರು ಮುಸ್ಲಿಮರಲ್ಲ ಎಂದು ಖಚಿತಪಡಿಸಿಕೊಂಡು ದಾಳಿ ನಡೆಸಿ ಪರಾರಿಯಾಗಿದ್ದಾರೆ. ಬಳಿಕ ಸ್ಥಳೀಯರು ಅಲ್ಲಿ ನೆರೆದು ಕುದುರೆ ಮೂಲಕ ಹಾಗೂ ಮೈಮೇಲೆ ಗಾಯಾಳುಗಳನ್ನು ಹೊತ್ತು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಆಗ ಹೆಚ್ಚಿನ ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿದ್ದು, ಪರಾರಿಯಾದ ಉಗ್ರರಿಗೆ ಶೋಧ ಆರಂಭಿಸಿದ್ದಾರೆ.

ಮೃತರಲ್ಲಿ ಗುಜರಾತ್‌, ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ- ಹೀಗೆ ವಿವಿಧ ರಾಜ್ಯದ ಜನರಿದ್ದಾರೆ.

ಬೆಚ್ಚಿ ಬೀಳಿಸಿದ ಘಟನೆ:

ಭಯೋತ್ಪಾದಕ ದಾಳಿಗಳಿಂದ ತತ್ತರಿಸಿದ್ದ ಕಾಶ್ಮೀರದಲ್ಲಿ ಇತ್ತೀಚಿನ ದಿನಗಳಲ್ಲಿ ಶಾಂತ ಸ್ಥಿತಿ ನೆಲೆಸಿದ್ದು, ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿರುವ ನಡುವೆಯೇ ದಾಳಿ ನಡೆದಿದೆ.

----

ಪಹಲ್ಗಾಂ ಎಂಬ ‘ಮಿನಿ ಸ್ವಿಜರ್ಲೆಂಡ್‌’

ದಕ್ಷಿಣ ಕಾಶ್ಮೀರದ ದಕ್ಷಿಣದಲ್ಲಿರುವ ಅನಂತನಾಗ್‌ ಜಿಲ್ಲೆಯ ಪಹಲ್ಗಾಂ, ‘ಮಿನಿ ಸ್ವಿಜರ್‌ಲೆಂಡ್‌’ ಎಂದೇ ಹೆಸರುವಾಸಿ. ಇದಕ್ಕೆ ಕಾರಣ, ಕಣ್ಣು ಹಾಯಿಸಿದಷ್ಟು ದೂರ ಕಾಣುವ ಹಸಿರು ಹಾಸು, ಹಿಮಾಚ್ಛಾದಿತ ಪರ್ವತಗಳು, ಅವುಗಳ ನಡುವೆ ಬಳುಕುತ್ತಾ ಹರಿಯುವ ಲಿಡ್ಡರ್‌ ನದಿ ಹಾಗೂ ಹಂಗುಲ್, ಕಸ್ತೂರಿ ಜಿಂಕೆ ಇತ್ಯಾದಿಗಳನ್ನೊಳಗೊಂಡ ವೈವಿಧ್ಯಮಯ ಪ್ರಾಣಿಸಂಕುಲ. ಅತಿಹೆಚ್ಚು ಪ್ರವಾಸಿಗರನ್ನು, ಅದರಲ್ಲೂ ನವವಿವಾಹಿತ ಜೋಡಿಗಳನ್ನು ಸೆಳೆಯುವ ರಾಜ್ಯದ ಪ್ರವಾಸಿ ತಾಣಗಳಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುವ ಪಹಲ್ಗಾಂ, ತನ್ನ ಪ್ರಶಾಂತತೆಗೂ ಹೆಸರುವಾಸಿಯಾಗಿದೆ.

Share this article