ದೇಶದ ಗೌರವಾನ್ವಿತ ಉದ್ಯಮಿ ರತನ್‌ಗೆ ವಿದಾಯ ಹೋಗಿ ಬನ್ನಿ, ಟಾಟಾ - ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ

Published : Oct 11, 2024, 04:50 AM IST
Ratan tata last photo

ಸಾರಾಂಶ

ಬುಧವಾರ ನಿಧನರಾದ ಟಾಟಾ ಸಮೂಹ ಸಾಮ್ರಾಜ್ಯದ ವಿಶ್ರಾಂತ ಮುಖ್ಯಸ್ಥ ಹಾಗೂ ಶ್ರೇಷ್ಠ ಸಮಾಜಸೇವಕ ರತನ್ ಟಾಟಾ ಅವರ ಅಂತ್ಯಕ್ರಿಯೆ ಸಹಸ್ರಾರು ಶೋಕತಪ್ತ ಗಣ್ಯರು ಹಾಗೂ ಅಭಿಮಾನಿಗಳ ನಡುವೆ ಮುಂಬೈನ ವರ್ಲಿಯಲ್ಲಿರುವ ಪಾರ್ಸಿ ಚಿತಾಗಾರದಲ್ಲಿ ನೆರವೇರಿತು

ಮುಂಬೈ: ಬುಧವಾರ ನಿಧನರಾದ ಟಾಟಾ ಸಮೂಹ ಸಾಮ್ರಾಜ್ಯದ ವಿಶ್ರಾಂತ ಮುಖ್ಯಸ್ಥ ಹಾಗೂ ಶ್ರೇಷ್ಠ ಸಮಾಜಸೇವಕ ರತನ್ ಟಾಟಾ ಅವರ ಅಂತ್ಯಕ್ರಿಯೆ ಸಹಸ್ರಾರು ಶೋಕತಪ್ತ ಗಣ್ಯರು ಹಾಗೂ ಅಭಿಮಾನಿಗಳ ನಡುವೆ ಮುಂಬೈನ ವರ್ಲಿಯಲ್ಲಿರುವ ಪಾರ್ಸಿ ಚಿತಾಗಾರದಲ್ಲಿ ನೆರವೇರಿತು. ಇದರಿಂದ ಭಾರತದಲ್ಲಿ ದಶಕಗಳ ಕಾಲ ಉದ್ಯಮರಂಗದಲ್ಲಿ ಛಾಪು ಮೂಡಿಸಿದ್ದ ಉದ್ಯಮಿಯ ಯುಗಾಂತ್ಯವಾಯಿತು.

ಅಂತ್ಯಕ್ರಿಯೆಯು ಸರ್ಕಾರಿ ಗೌರವಗಳಿಂದ ಹಾಗೂ ಪಾರ್ಸಿ ಸಮುದಾಯದವರು ಅನುಸರಿಸುವ ವಿಧಿವಿಧಾನಗಳ ಪ್ರಕಾರ ನೆರವೇರಿತು. ಅವರನ್ನು ವಿದ್ಯುತ್ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು. ಮುಂಬೈ ಪೊಲೀಸರು ಟಾಟಾ ಅವರಿಗೆ ಗನ್ ಸೆಲ್ಯೂಟ್ ಮೂಲಕ ಗೌರವ ಸಲ್ಲಿಸಿದರು.

ಅಂತ್ಯಕ್ರಿಯೆಗೆ ಜನಸಾಗರ:

ಈ ವೇಳೆ ಟಾಟಾ ಅವರ ಮಲಸಹೋದರ ನೋಯೆಲ್ ಟಾಟಾ, ಟಾಟಾ ಗ್ರೂಪ್‌ನ ಅಧ್ಯಕ್ಷ ಎನ್. ಚಂದ್ರಶೇಖರನ್, ಭಾರತ ಸರ್ಕಾರದ ಪರ ಕೇಂದ್ರ ಗೃಹ ಸಚಿವ ಅಮಿತ್ ಶಾ, ಅವರ ಸಂಪುಟ ಸಹೋದ್ಯೋಗಿ ಪೀಯೂಷ್ ಗೋಯಲ್, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಿಎಂ ಸುಶೀಲ್ ಕುಮಾರ್ ಶಿಂಧೆ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಟಾಟಾ ಅವರ ಪ್ರೀತಿಯ ನಾಯಿ ‘ಗೋವಾ’ ಕೂಡ ತನ್ನ ಮಾಲೀಕನಿಗೆ ಗೌರವ ಸಲ್ಲಿಸಿದ್ದು ವಿಶೇಷವಾಗಿತ್ತು.

ಅಂತ್ಯಕ್ರಿಯೆಯ ನಂತರ, ದಕ್ಷಿಣ ಮುಂಬೈನ ಕೊಲಾಬಾದಲ್ಲಿರುವ ದಿವಂಗತ ಉದ್ಯಮಿಯ ಬಂಗಲೆಯಲ್ಲಿ ಇನ್ನೂ ಮೂರು ದಿನಗಳ ಧಾರ್ಮಿಕ ವಿಧಿವಿಧಾನಗಳನ್ನು ನಡೆಸಲಾಗುವುದು ಎಂದು ಅರ್ಚಕರೊಬ್ಬರು ಹೇಳಿದ್ದಾರೆ.

ಪದ್ಮವಿಭೂಷಣ ಪುರಸ್ಕೃತರಾದ ಟಾಟಾ ಅವರು ಅಲ್ಪಕಾಲದ ಅಸೌಖ್ಯದಿಂದ ಬುಧವಾರ ತಡರಾತ್ರಿ ನಗರದ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ನಂತರ ಗುರುವಾರ ನಸುಕಿನಲ್ಲಿ ಅವರ ಶವವನ್ನು ಮನೆಗೆ ತರಲಾಗಿತ್ತು. ಬಳಿಕ ಪಾರ್ಥಿವ ಶರೀರವನ್ನು ದಕ್ಷಿಣ ಮುಂಬೈನ ನಾರಿಮನ್ ಪಾಯಿಂಟ್‌ನಲ್ಲಿರುವ ನ್ಯಾಷನಲ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್‌ನಲ್ಲಿ (ಎನ್‌ಸಿಪಿಎ) ಬೆಳಿಗ್ಗೆ 10.30 ರಿಂದ ಸಂಜೆ 4ರವರೆಗೆ ಜನರು ಗೌರವ ಸಲ್ಲಿಸಲು ಇಡಲಾಗಿತ್ತು. ನಂತರ ಅವರ ಪಾರ್ಥಿವ ಶರೀರವನ್ನು ಅಂತಿಮ ವಿಧಿವಿಧಾನಗಳಿಗಾಗಿ ವರ್ಲಿ ಚಿತಾಗಾರಕ್ಕೆ ಕೊಂಡೊಯ್ಯಲಾಯಿತು.

PREV

Recommended Stories

15 ವರ್ಷ ಬಳಿಕ ಗುಜರಿ ವ್ಯಾಪ್ತಿಗೆಎಲೆಕ್ಟ್ರಿಕ್‌ ವಾಹನಗಳು ಬರಲ್ಲ?
ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ