ರೈತರು-ಸರ್ಕಾರದ ನಡುವೆ 4ನೇ ಸುತ್ತಿನ ಚರ್ಚೆ

KannadaprabhaNewsNetwork | Updated : Feb 19 2024, 07:42 AM IST

ಸಾರಾಂಶ

ಸಕಾರಾತ್ಮಕ ಫಲಿತಾಂಶದ ಬಗ್ಗೆ ಉಭಯ ಬಣಗಳು ವಿಶ್ವಾಸ ವ್ಯಕ್ತಪಡಿಸಿದ್ದು, ರೈತರ ಬೇಡಿಕೆಗಳು ಈಡೇರಿಸಲು ಸರ್ಕಾರ ಒಪ್ಪಿಗೆ ನೀಡಲಿದೆ ಎನ್ನಲಾಗಿದೆ.

ಚಂಡೀಗಢ: ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಮಾನ್ಯತೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವ ಸಂಬಂಧ ಪ್ರತಿಭಟನಾ ನಿರತ ರೈತ ಸಂಘಟನೆಗಳು ಮತ್ತು ಕೇಂದ್ರ ಸರ್ಕಾರ ಭಾನುವಾರ 4ನೇ ಸುತ್ತಿನ ಮಾತುಕತೆ ನಡೆಸಿವೆ. ಮಾತುಕತೆ ವೇಳೆ ಸಕಾರಾತ್ಮಕ ಫಲಿತಾಂಶ ಹೊರಬೀಳುವ ವಿಶ್ವಾಸವನ್ನು ಉಭಯ ಬಣಗಳು ವ್ಯಕ್ತಪಡಿಸಿವೆ.

ಈ ಮೊದಲು ನಡೆದ 3 ಸುತ್ತಿನ ಮಾತುಕತೆಯಲ್ಲಿ, ರೈತರ ಮೇಲಿನ ಕೇಸು ವಾಪಸ್‌, ಮೃತ ರೈತರಿಗೆ ಪರಿಹಾರ ವಿತರಣೆ ಮೊದಲಾದ ವಿಷಯಗಳ ಬಗ್ಗೆ ಕೇಂದ್ರ ಸರ್ಕಾರ ಸಮ್ಮತಿಸಿತ್ತು. 

ಆದರೆ ಕನಿಷ್ಠ ಖಾತರಿ ಬೆಲೆಗೆ ಕಾನೂನಿನ ಮಾನ್ಯತೆ, ರೈತರು, ಕೃಷಿ ಕಾರ್ಮಿಕರಿಗೆ ಪಿಂಚಣಿ ಮೊದಲಾದ ವಿಷಯಗಳ ಬಗ್ಗೆ ಭಿನ್ನಾಭಿಪ್ರಾಯ ಮುಂದುವರೆದಿತ್ತು. ಹೀಗಾಗಿ ಉಭಯ ಬಣಗಳು ಭಾನುವಾರ ಮತ್ತೊಂದು ಸುತ್ತಿನ ಮಾತುಕತೆ ನಡೆಸಿವೆ.

ಕೇಂದ್ರ ಸರ್ಕಾರದ ಪರವಾಗಿ ಕೃಷಿ ಖಾತೆ ಸಚಿವ ಅರ್ಜುನ್‌ ಮುಂಡಾ, ವಾಣಿಜ್ಯ ಖಾತೆ ಸಚಿವ ಪಿಯೂಶ್‌ ಗೋಯಲ್‌ ಹಾಗೂ ಗೃಹ ಖಾತೆಯ ರಾಜ್ಯ ಸಚಿವ ನಿತ್ಯಾನಂದ ರೈ ಮಾತುಕತೆಯಲ್ಲಿ ಭಾಗಿಯಾಗಿದ್ದಾರೆ.

ಮತ್ತೊಂದೆಡೆ ಪಂಜಾಬ್‌ ಮತ್ತು ಹರ್ಯಾಣದ 200ಕ್ಕೂ ಹೆಚ್ಚು ರೈತ ಸಂಘಟನೆಗಳ ಪರವಾಗಿ ಹಲವು ರೈತ ನಾಯಕರು ಭಾಗಿಯಾಗಿದ್ದಾರೆ.

Share this article