ಫಿರೋಜಾಬಾದ್: ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮ ನಡೆದ ದಿನದಂದೇ ತಮ್ಮ ಕುಟುಂಬದಲ್ಲಿ ಜನಿಸಿದ ಗಂಡು ಮಗುವಿಗೆ ಮುಸ್ಲಿಂ ಮಹಿಳೆಯೊಬ್ಬರು ‘ರಾಮ ರಹೀಮ’ ಎಂದು ನಾಮಕರಣ ಮಾಡುವ ಮೂಲಕ ಹಿಂದೂ- ಮುಸ್ಲಿಂ ಸೌಹಾರ್ದತೆಯನ್ನು ಮೆರೆದಿದ್ದಾರೆ.
ಫರ್ಜಾನಾ ಎಂಬ ಮಹಿಳೆ ಸೋಮವಾರ ಉತ್ತರ ಪ್ರದೇಶದ ಫಿರೋಜಾಬಾದ್ ಜಿಲ್ಲಾ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿನ ಅಜ್ಜಿ ಹುಸ್ನಾ ಬಾನು ಎಂಬುವರು ಮಗುವಿಗೆ ’ರಾಮ ರಹೀಮ’ ಎಂದು ಹೆಸರಿಟ್ಟಿದ್ದಾರೆ.
ಅಲ್ಲದೇ ‘ಹಿಂದೂ- ಮುಸ್ಲಿಂ ಏಕತೆಯ ಸಂದೇಶ ನೀಡಲು ಮಗುವಿಗೆ ಈ ಹೆಸರಿಟ್ಟಿದ್ದೇನೆ’ ಎಂದು ಬಾನು ಹೇಳಿದ್ದಾರೆ.
ಪ್ರತಿಷ್ಠಾಪನೆ ವೇಳೆ ನೂರಾರು ರಾಮ, ಸೀತೆ, ಲಕ್ಷ್ಮಣರ ಜನನ
ಅಯೋಧ್ಯೆಯಲ್ಲಿ ರಾಮಂದಿರದಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆಯ ಮುಹೂರ್ತದಲ್ಲೇ ದೇಶಾದ್ಯಂತ ಸಾಕಷ್ಟು ಮಹಿಳೆಯರು ನವಜಾತ ಶಿಶುಗಳಿಗೆ ಜನ್ಮ ನೀಡಿದ್ದಾರೆ.
ಇದಕ್ಕಾಗಿ ವೈದ್ಯರೊಂದಿಗೆ ಮೊದಲೇ ಮಾತುಕತೆ ನಡೆಸಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಅಲ್ಲದೇ ಸೋಮವಾರ ಜನಿಸಿದ ಬಹುತೇಕ ಮಕ್ಕಳಿಗೆ ರಾಮ ಮತ್ತು ಸೀತಾ ಎಂಬ ಹೆಸರುಗಳನ್ನೇ ಇಡಲಾಗಿದೆ.
ಡೆಲಿವರಿ ದಿನಾಂಕ ಜ.23ಕ್ಕೆ ನೀಡಿದ್ದರೂ ಥಾಣೆ ಮಹಿಳೆಯೊಬ್ಬರು ಪ್ರಾಣಪ್ರತಿಷ್ಠಾಪನೆ ಸಮಯಕ್ಕೆ ಶಸ್ತ್ರಚಿಕಿತ್ಸೆಯ ಮೂಲಕ ಮಗು ಜನಿಸುವಂತೆ ಮಾಡಿಕೊಂಡಿದ್ದಾರೆ.
ಮಗು ಮತ್ತು ತಾಯಿ ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಕರ್ನಾಟಕದ ವಿಜಯಪುರದ ಶ್ರೀ ಸಿದ್ದೇಶ್ವರ ಲೋಕ ಕಲ್ಯಾಣ ಚಾರಿಟೇಬಲ್ ಆಸ್ಪತ್ರೆಯಲ್ಲಿ ಸೋಮವಾರ 20 ಮಂದಿಗೆ ಹೆರಿಗೆ ಮಾಡಿಸಲಾಗಿದೆ.
ಇವರಲ್ಲಿ ಬಹುತೇಕರು ಮಕ್ಕಳಿಗೆ ರಾಮ. ಸೀತೆ. ಲಕ್ಷ್ಮಣ ಎಂದು ಹೆಸರಿಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.