;Resize=(412,232))
ನವದೆಹಲಿ: ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಉಳಿದಿಬ್ಬರು ಆಯುಕ್ತರನ್ನು ಬದಿಗೊತ್ತಿ ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿದ್ದಾರೆ ಎಂಬ ವರದಿಗಳ ಬೆನ್ನಲ್ಲೇ, ಕೇಂದ್ರ ಚುನಾವಣಾ ಆಯೋಗದ ಮೂವರೂ ಆಯುಕ್ತರು ಶನಿವಾರ ಜಂಟಿ ಸುದ್ದಿಗೋಷ್ಠಿ ನಡೆಸಿ ತಮ್ಮಲ್ಲಿನ ಭಿನ್ನಾಭಿಪ್ರಾಯಗಳ ವರದಿಯನ್ನು ಸ್ಪಷ್ಟವಾಗಿ ಅಲ್ಲಗಳೆದರು.
ಅದರೆ ಪತ್ರಿಕಾಗೋಷ್ಠಿಯಲ್ಲಿ ಮೂವರೂ ಆಯುಕ್ತರು ನೀಡಿದ ಮಾಹಿತಿಗಳು, ಆಯುಕ್ತರಾದ ಸುಖ್‌ಬೀರ್ ಸಿಂಗ್ ಸಂಧು ಹಾಗೂ ವಿವೇಕ್ ಜೋಶಿ ಅವರು ಕಳೆದ 10 ತಿಂಗಳ ಅವಧಿಯಲ್ಲಿ ಆತಂಕರಿಕವಾಗಿ ಎತ್ತಿದ್ದ 14 ಆಕ್ಷೇಪಗಳನ್ನು ಪರಿಹರಿಸುವ ಕ್ರಮಗಳು ಎಂದೇ ವಿಶ್ಲೇಷಿಸಲಾಗಿದೆ. ಈ ಮೂಲಕ ಆಯೋಗಕ್ಕೆ ಅಂಟಿದ್ದ ಅಪವಾದ ದೂರಮಾಡುವ ಕ್ರಮ ಎಂದು ಬಣ್ಣಿಸಲಾಗಿದೆ.ಮುಖ್ಯವಾಗಿ ಹೊಸ ಮತದಾರರ ನೋಂದಣಿಯ ಫಾರಂ 6ರಲ್ಲಿನ ಬದಲಾವಣೆ ಬಗ್ಗೆ ಚುನಾವಣಾ ಆಯುಕ್ತ ವಿವೇಕ್ ಜೋಶಿ ಮತ್ತು ಸುಖ್‌ಬೀರ್ ಸಿಂಗ್ ಸಂಧು ಆಕ್ಷೇಪ ವ್ಯಕ್ತಪಡಿಸಿದ್ದರು. ನಿಯಮಾವಳಿಗಳಿಗೆ ತಿದ್ದುಪಡಿ ತಾರದೆ ಬದಲಾವಣೆ ಮಾಡುವಂತಿಲ್ಲ. ಇದು ಕಾನೂನುಬಾಹಿರ, ಅಕ್ರಮ ಎಂದು ಕರೆದಿದ್ದರು. ಈ ಬದಲಾವಣೆ ಕೇವಲ ಎಸ್‌ಐಆರ್ ಪ್ರಕ್ರಿಯೆಗಷ್ಟೇ ಸೀಮಿತವಾಗಿದೆ ಎಂದು ಆಯೋಗ ತಿಳಿಸಿದೆ.
ಇಸಿಐನೆಟ್‌ಗೆ ಎಂಟ್ರಿ ಕುರಿತ ಆಕ್ಷೇಪಗಳಿಗೆ ಸಂಬಂಧಿಸಿ, ಫೀಲ್ಡ್ ಅಧಿಕಾರಿಗಳು ಅವರ ಕಾನೂನುಬದ್ಧ ಅಧಿಕಾರಗಳಿಗಷ್ಟೇ ಇಸಿಐನೆಟ್‌ಗೆ ಪ್ರವೇಶ ಪಡೆಯಬಹುದು. ಹಿರಿಯ ಉಪ ಚುನಾವಣಾ ಆಯುಕ್ತರ ನೇತೃತ್ವದಲ್ಲಿ ಐಐಟಿ ಅಥವಾ ಐಐಐಟಿ ತಜ್ಞರನ್ನೊಳಗೊಂಡ ಸಮಿತಿ ಚುನಾವಣಾ ಕಾನೂನುಗಳು ಮತ್ತು ನಿಯಮಗಳಿಗೆ ಇಸಿಐನೆಟ್ ಅನುಗುಣವಾಗಿದೆಯೇ ಎಂದು ಪರಿಶೀಲಿಸಲಿದೆ ಎಂದು ಆಯೋಗ ಹೇಳಿದೆ.
ಗೋವಾದಲ್ಲಿ ಮತದಾರರ ಪಟ್ಟಿಯಿಂದ ತೆಗೆಯಲ್ಪಟ್ಟಿದ್ದ ಮತದಾರರಲ್ಲಿ 97 ಮತದಾರರ ಮರು ಸೇರ್ಪಡೆಗೆ ಆಯೋಗದ ಸಾಫ್ಟ್‌ವೇರ್‌ನಲ್ಲಿ ಅವಕಾಶವೇ ಇರಲಿಲ್ಲ ಎಂಬ ಆಕ್ಷೇಪಕ್ಕೆ ಸಂಬಂಧಿಸಿ, ಅಂಥ ಮತದಾರರ ಮನೆಗೆ ಭೇಟಿ ನೀಡಿ ಅವರ ಫಾರಂ ಸಂಗ್ರಹಿಸಲು ಬಿಎಲ್‌ಒಗಳಿಗೆ ನಿರ್ದೇಶಿಸಲಾಗಿದೆ. ಮತದಾರರಿಂದ ಫಾರಂ ಸಂಗ್ರಹಿಸಿ ಇಸಿಐನೆಟ್‌ಗೆ ಅಪ್ಲೋಡ್ ಮಾಡಬೇಕು. ನಂತರ ಸಿಆರ್‌ಒಗಳು ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಆಯೋಗ ಹೇಳಿದೆ. ಈಗಾಗಲೇ 97ರಲ್ಲಿ 81 ಮಂದಿ ಫಾರಂ 6 ಸಲ್ಲಿಸಿದ್ದಾರೆ.
ಇನ್ನು ಮತದಾರರ ಪಟ್ಟಿ ಡೇಟಾಬೇಸ್‌ಗೆ ಪ್ರವೇಶದ ಕುರಿತು ಪರಿಶೀಲನೆ ನಡೆಸಲು ಐಟಿ ತಜ್ಞರನ್ನು ಒಳಗೊಂಡ ಸಮಿತಿ ರಚಿಸಲಾಗುವುದು ಎಂದು ತಿಳಿಸಿದೆ.
ಅದೇ ರೀತಿ ಆಯೋಗದ ಪೂರ್ಣ ಅನುಮೋದನೆ ಇಲ್ಲದೆ ಚುನಾವಣಾ ಆಯೋಗದ ಹೆಸರಿನಲ್ಲಿ ಸಂವಹನ, ಐಟಿ ವಿಭಾಗದ ಮೇಲ್ವಿಚಾರಣೆಯಲ್ಲಿ ಏಕಪಕ್ಷೀಯ ನಿರ್ಧಾರ ಮತ್ತು ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಸಂಬಂಧಿಸಿದ ಮೇಲ್ಮನವಿಗಳ ಕುರಿತ ಪ್ರಶ್ನೆಗೆ, ನಿಯಮಾನುಸಾರ ಕ್ರಮ ಕೈಗೊಳ್ಳಲಾಗಿದೆ. ಪಶ್ಚಿಮ ಬಂಗಾಳದಲ್ಲಿ ಎಸ್‌ಐಆರ್ ಪ್ರಕ್ರಿಯೆ ವೇಳೆ ಅಥವಾ ನಂತರ ಯಾವುದೇ ಮತದಾರರ ಹೆಸರು ಪಟ್ಟಿಯಿಂದ ಹೊರಗಿದ್ದರೆ ಅವರು ಇಆರ್‌ಒಗೆ ಹೆಸರು ಸೇರ್ಪಡೆಗೆ ಮನವಿ ಸಲ್ಲಿಸಬಹುದಾಗಿದೆ ಮತ್ತು ಸಿಇಒಗಳು, ಡಿಇಒಗಳು ಮತ್ತು ಇಆರ್‌ಒಗಳು ಇಂಥ ಮತದಾರರಿಗಾಗಿ ವಿಶೇಷ ನೋಂದಣಿ ಪ್ರಕ್ರಿಯೆ ಆರಂಭಿಸುವಂತೆ ಸೂಚಿಸಲಾಗಿದೆ ಎಂದು ಆಯೋಗ ತಿಳಿಸಿದೆ.
ನಕಲಿ ಪಟ್ಟಿ ಲಾಭ ಪಡೆದವರಿಂದ ಆಯೋಗದ ವಿರುದ್ಧ ಕಿಡಿ: ಬಿಜೆಪಿ
ನವದೆಹಲಿ: ಚುನಾವಣಾ ಆಯೋಗ ಮತ್ತು ಎಸ್‌ಐಆರ್ ವಿರುದ್ಧ ಕಾಂಗ್ರೆಸ್ ಸೇರಿ ವಿಪಕ್ಷಗಳು ಮುಗಿಬಿದ್ದಿರುವ ಬೆನ್ನಲ್ಲೇ, ನಕಲಿ ಮತದಾರರ ಪಟ್ಟಿಯಿಂದ ಲಾಭ ಪಡೆಯುತ್ತಿದ್ದವರು ಇದೀಗ ಆಯೋಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಬಿಜೆಪಿ ಕಿಡಿಕಾರಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರದ ಆಡಳಿತ ಪಕ್ಷ ‘ಎಸ್‌ಐಆರ್ ಪ್ರಕ್ರಿಯೆಯಡಿ 31 ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ ಮತದಾರರ ಪಟ್ಟಿಯಿಂದ ಎರಡು ಕಡೆ ಹೆಸರು ಹೊಂದಿದ್ದ 1 ಕೋಟಿಗೂ ಹೆಚ್ಚು, 2.8 ಕೋಟಿ ಮೃತ ಮತದಾರರು ಮತ್ತು ವಾಸಸ್ಥಳ ಬದಲಾವಣೆ ಮತ್ತು ಪ್ರಕ್ರಿಯೆಗೆ ಗೈರಾದ 9.43 ಕೋಟಿ ಜನರ ಹೆಸರನ್ನು ಕೈಬಿಡಲಾಗಿದೆ. ಇದು ಸಣ್ಣ ಮಟ್ಟದ ನವೀಕರಣವಲ್ಲ, ಬದಲಿಗೆ ದೇಶದ ಒಟ್ಟು ಮತದಾರರ ಪೈಕಿ ಶೇ.9.92ರಷ್ಟಿದೆ. ಹೀಗಿದ್ದೂ, ನಿಖರವಾದ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ಉದ್ದೇಶದ ಈ ಪ್ರಕ್ರಿಯೆಯನ್ನು ಇಂಡಿಯಾ ಒಕ್ಕೂಟ ವಿರೋಧಿಸುತ್ತಿದೆ’ ಎಂದು ಆಕ್ಷೇಪಿಸಿದೆ.