2027ರ ಆ.15ಕ್ಕೆ ಮೊದಲಬುಲೆಟ್‌ ರೈಲು ಸಂಚಾರ

KannadaprabhaNewsNetwork |  
Published : Jan 02, 2026, 03:00 AM ISTUpdated : Jan 02, 2026, 05:12 AM IST
Bullet Train

ಸಾರಾಂಶ

ದೇಶದ ಮೊದಲ ಬುಲೆಟ್‌ ರೈಲಿನ ಸಂಚಾರ 2027ರ ಆ.15ರಂದು ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯ ದಿನದಂದು ರೈಲಿಗೆ ಚಾಲನೆ ನೀಡಲಿದ್ದಾರೆ.ಮೊದಲಿಗೆ ಗುಜರಾತ್‌ನ ಸೂರತ್‌ ಮತ್ತು ಬಿಳಿಮೋರಾ (50 ಕಿ.ಮೀ) ನಡುವೆ ಹಂತವು ಉದ್ಘಾಟನೆಗೊಳ್ಳಲಿದೆ.

 ನವದೆಹಲಿ: ದೇಶದ ಮೊದಲ ಬುಲೆಟ್‌ ರೈಲಿನ ಸಂಚಾರ 2027ರ ಆ.15ರಂದು ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯ ದಿನದಂದು ರೈಲಿಗೆ ಚಾಲನೆ ನೀಡಲಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ‘508 ಕಿ.ಮೀ ದೂರದ ಒಟ್ಟು ಯೋಜನೆಯಲ್ಲಿ ಮೊದಲಿಗೆ ಗುಜರಾತ್‌ನ ಸೂರತ್‌ ಮತ್ತು ಬಿಳಿಮೋರಾ (50 ಕಿ.ಮೀ) ನಡುವೆ ಹಂತವು ಉದ್ಘಾಟನೆಗೊಳ್ಳಲಿದೆ. ಆ ಬಳಿಕ ವಾಪಿ - ಸೂರತ್‌ (100 ಕಿ.ಮೀ), ವಾಪಿ - ಅಹಮದಾಬಾದ್‌ (300–320 ಕಿ.ಮೀ) ಮತ್ತು ಥಾಣೆ-ಅಹಮದಾಬಾದ್‌ (450–490 ಕಿ.ಮೀ) ಮಾರ್ಗವು ಪೂರ್ಣಗೊಳ್ಳಲಿವೆ. ಅಹಮದಾಬಾದ್‌- ಮುಂಬೈ ನಡುವಿನ ಪೂರ್ಣ ಮಾರ್ಗವು 2029ಕ್ಕೆ ಲೋಕಾರ್ಪಣೆಗೊಳ್ಳಲಿದೆ’ ಎಂದು ತಿಳಿಸಿದ್ದಾರೆ.

2022ರ ಗುರಿ:

1.08 ಲಕ್ಷ ಕೋಟಿ ರು. ಯೋಜನೆಗೆ 2017ರಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್‌ನ ಅಂದಿನ ಪ್ರಧಾನಿ ಶಿಂಜೋ ಅಬೆ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು. 2022ರಲ್ಲಿ ಸ್ವಾತಂತ್ರ್ಯ ಪಡೆದ 75ನೇ ವರ್ಷಕ್ಕೆ ಉದ್ಘಾಟನೆಯಾಗಬೇಕಿತ್ತು. ಆದರೆ ಹಲವು ಬಗೆಯ ವಿಳಂಬಗಳು, ಕೋವಿಡ್‌ ಸೇರಿ ಹಲವು ಕಾರಣಗಳು 2027ಕ್ಕೆ ಮುಂದೂಡಿಕೆಯಾಗಿದೆ.

ಭೂಸ್ವಾಧೀನ ವಿಳಂಬ, ರಾಜಕೀಯ ಪಿಕಲಾಟ:

2017ರಲ್ಲಿ ಆರಂಭವಾದ ಯೋಜನೆಗೆ ಗುಜರಾತ್‌ನಲ್ಲಿ ಭೂಸ್ವಾಧೀನಕ್ಕೆ ವೇಗ ದೊರೆಯಿತಾದರೂ, ಮಹಾರಾಷ್ಟ್ರದಲ್ಲಿ ಎನ್‌ಡಿಎ ಸರ್ಕಾರದ ಪತನ, ಬಳಿಕ ಉದ್ಧವ್‌ ಠಾಕ್ರೆಯ ಮಹಾವಿಕಾಸ್‌ ಆಘಾಡಿ ಸರ್ಕಾರದ ಅಧಿಕಾರವು ಯೋಜನೆಗೆ ಭಾರಿ ವಿಳಂಬವನ್ನು ತಂದೊಡ್ಡಿತು. 2021-22ರಲ್ಲಿ ಉದ್ಧವ್‌ ಆಡಳಿತ ಯೋಜನೆ ಕೈಬಿಡುವ ಹಂತಕ್ಕೆ ತಲುಪಿತ್ತು. ಜೊತೆಗೆ ಮಹಾರಾಷ್ಟ್ರದಲ್ಲಿ ರೈತರ ಹೋರಾಟ, ಮಹಾರಾಷ್ಟ್ರ ನವನಿರ್ಮಾಣ ಸೇನಾ ಪಕ್ಷದ ಪ್ರತಿಭಟನೆಯು ಯೋಜನೆಯ ಬೆಳವಣಿಗೆಯನ್ನು ಆಮೆಗತಿಗೆ ತಂದೊಡ್ಡಿತು.

ಜ.18/19ಕ್ಕೆ ದೇಶದ ಮೊದಲ ವಂದೇ ಸ್ಲೀಪರ್‌ ಉದ್ಘಾಟನೆ 

ನವದೆಹಲಿ: ದೇಶದ ಬಹುನಿರೀಕ್ಷಿತ ವಂದೇ ಭಾರತ್‌ ಸ್ಲೀಪರ್‌ ರೈಲು ಕೊನೆಗೂ ಹಳಿ ಮೇಲೆ ಬರುವ ಕಾಲ ಸನ್ನಿಹಿತವಾಗಿದೆ. ಜ.18 ಅಥವಾ 19ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕೋಲ್ಕತಾ - ಗುವಾಹಟಿ ನಡುವೆ ಮೊದಲ ವಂದೇ ಭಾರತ್‌ ಸ್ಲೀಪರ್‌ ರೈಲಿಗೆ ಚಾಲನೆ ನೀಡಲಿದ್ದಾರೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಘೋಷಿಸಿದ್ದಾರೆ. ಈ ವರ್ಷ ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ವಿಧಾನಸಭೆ ಚುನಾವಣೆ ನಿಗದಿಯಾಗಿದ್ದು, ಅದರ ಬೆನ್ನಲ್ಲೇ ಉಭಯ ರಾಜ್ಯಗಳಿಗೂ ಈ ಕೊಡುಗೆ ಸಿಕ್ಕಿದೆ. 

ಹೇಗಿರಲಿದೆ ರೈಲು?:

ವಂದೇ ಸ್ಲೀಪರ್‌ 16 ಸಂಪೂರ್ಣ ಹವಾನಿಯಂತ್ರಿತ ಬೋಗಿಗಳಿರಲಿದೆ. ಅದರಲ್ಲಿ 11 3ಟೈರ್‌ ಏಸಿ (611 ಸೀಟು), 4 ಏಸಿ 2ಟೈರ್‌ (188 ಸೀಟು) ಮತ್ತು 1 ಫಸ್ಟ್‌ ಕ್ಲಾಸ್‌ ಏಸಿ (24 ಸೀಟು) ಬೋಗಿಗಳಿರಲಿದೆ. ಎಲ್ಲ ಸೇರಿ ಒಟ್ಟು 823 ಆಸನಗಳಿರಲಿವೆ. ರೈಲು 180 ಕಿ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯವಿದ್ದರೂ, ಉಭಯ ನಗರಗಳ ನಡುವೆ ಕೇವಲ 120/130 ಕಿ.ಮೀ. ವೇಗದಲ್ಲಿ ಸಂಚರಿಸಲಿದೆ.

ಟಿಕೆಟ್‌ ದರ:

ಗುವಾಹಟಿಯಿಂದ ಕೋಲ್ಕತಾವರೆಗೆ ಎಸಿ 3 ಟೈರ್‌ಗೆ 2300 ರು., 2 ಟೈರ್‌ಗೆ 3000 ರು. ಮತ್ತು ಫಸ್ಟ್‌ ಕ್ಲಾಸ್‌ಗೆ 3600 ರು. ಇರಲಿದೆ.

12 ರೈಲು:

6 ತಿಂಗಳ ಒಳಗಾಗಿ ಇನ್ನೂ 8, ವರ್ಷಾಂತ್ಯಕ್ಕೆ 12 ವಂದೇ ಭಾರತ್‌ ಸ್ಲೀಪರ್‌ ರೈಲು ಆರಂಭಿಸುವ ಗುರಿಯಿದೆ.

ರೈಲಿನ ವಿಶೇಷತೆ:

ವಂದೇ ಭಾರತ್‌ ಸ್ಲೀಪರ್‌ಗಳು 180 ಕಿ.ಮೀ ವೇಗದಲ್ಲಿ ಸಂಚರಿಸಬಲ್ಲದಾಗಿದೆ. ಆರಾಮದಾಯಕ ಪ್ರಯಾಣಕ್ಕಾಗಿ ದೇಹಕ್ಕೆ ಹೊಂದಿಕೊಳ್ಳುವಂಥ ಕುಷನ್‌ ಹಾಸಿಗೆಗಳು, ರೈಲಿನ ಶಬ್ಧವನ್ನು ಕಡಿಮೆಗೊಳಿಸಲು ಬೋಗಿ ಹೊರಗೆ ಮತ್ತು ಒಳಗೆ ಸ್ವಯಂಚಾಲಿತ ಬಾಗಿಲು, ಅಪಘಾತ ತಡೆಗೆ ಅತ್ಯಾಧುನಿಕ ಕವಚ್‌ ರಕ್ಷಣಾ ವ್ಯವಸ್ಥೆ, ಕೀಟನಾಶಕ ತಂತ್ರಜ್ಞಾನ ಮತ್ತು ನೈರ್ಮಲ್ಯ ವ್ಯವಸ್ಥೆ, ವಿಶೇಷ ಚೇತನರಿಗಾಗಿಯೇ ವಿಶೇಷ ಕ್ಯಾಬಿನ್‌ಗಳು, ಎಲ್ಲ ಬೋಗಿಗಳಲ್ಲಿಯೂ ಸಿಸಿಟೀವಿ ಕ್ಯಾಮೆರಾ, ಸ್ವಯಂ ಅಗ್ನಿ ಪತ್ತೆ ನಿವಾರಣಾ ವ್ಯವಸ್ಥೆ ಸೇರಿ ಹತ್ತು ಹಲವು ಅತ್ಯಾಧುನಿಕ ತಂತ್ರಜ್ಞಾನಗಳನ್ನು ರೈಲು ಒಳಗೊಂಡಿವೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಬೀದೀಲಿ ಹೆಣವಾದ ಪುಣೆ ಬಾಂಬ್‌ ಸ್ಫೋಟದ ಉಗ್ರ!
ಸ್ವಿಜರ್ಲೆಂಡಲ್ಲಿ ಗೋವಾ ಪಬ್‌ ಮಾದರಿ ದುರಂತ : 40 ಬಲಿ