ಪ್ರಯಾಗರಾಜ್: ಇದೇ ಮೊದಲ ಬಾರಿಗೆ ಪರಿಶಿಷ್ಟ ಜಾತಿಗೆ ಸೇರಿದ ಧರ್ಮಗುರುವೊಬ್ಬರಿಗೆ ‘ಜಗದ್ಗುರು’ ಎಂಬ ಬಿರುದು ನೀಡಲಾಗಿದೆ. ದೇಶದ 13 ಅಖಾಡಗಳಲ್ಲಿ ಒಂದಾದ ಜುನಾ ಅಖಾಡಾ, ಗುಜರಾತ್ ಮೂಲದ ಮಹಾಮಂಡಲೇಶ್ವರ ಮಹೇಂದ್ರಾನಂದ ಗಿರಿ ಅವರಿಗೆ ಈ ಬಿರುದನ್ನು ನೀಡಿದೆ.
ಕಾಶಿ ಸುಮೇರು ಪೀಠಾಧೀಶ್ವರ ಜಗದ್ಗುರುಗಳು, ಜುನಾ ಅಖಾಡದ ಅಂತಾರಾಷ್ಟ್ರೀಯ ಅಧ್ಯಕ್ಷರೂ ಆದ ಸ್ವಾಮಿ ನರೇಂದ್ರಾನಂದ ಸರಸ್ವತಿ, ಶ್ರೀ ಮಹಾಂತ ಪ್ರೇಮಗಿರಿ, ಶ್ರೀ ದೂಧೇಶ್ವರ ಪೀಠಾಧೀಶ್ವರ, ಜುನಾ ಅಖಾಡದ ಅಂತರಾಷ್ಟ್ರೀಯ ವಕ್ತಾರ ಮಹಾಂತ ನಾರಾಯಣಗಿರಿ, ಮಹಾಮಂಡಲೇಶ್ವರ ವೈಭವ ಗಿರಿ ಅವರು ಪಟ್ಟದ ಶ್ರೀಗಳಿಗೆ ಮಾಲಾರ್ಪಣೆ ಮಾಡಿದರು.
ಸಮಾರಂಭದಲ್ಲಿ ಮಹೇಂದ್ರಾನಂದ ಮತ್ತು ಕೈಲಾಶಾನಂದರನ್ನು ಸಿಂಹಾಸನದ ಮೇಲೆ ಕೂರಿಸಿ ಛತ್ರಿಗಳನ್ನು ನೀಡಲಾಯಿತು.ತಾರತಮ್ಯ ನಿವಾರಣೆಗೆ ಇಂಥ ಯತ್ನ:ಸಮಾರಂಭದಲ್ಲಿ ಶ್ರೀ ಮಹಾಂತ ಪ್ರೇಮಗಿರಿ ಮಾತನಾಡಿ, ‘ಸನ್ಯಾಸಿ ಸಂಪ್ರದಾಯದಲ್ಲಿ ಜಾತಿ ಮತ್ತು ವರ್ಗ ತಾರತಮ್ಯವನ್ನು ತೊಡೆದುಹಾಕಲು ಜುನಾ ಅಖಾಡ ಕೆಲಸ ಮಾಡುತ್ತಿದೆ. ಹಿಂದೂಗಳ ನಡುವೆ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸಿ ಮತಾಂತರ ಮಾಡಲು ಯತ್ನಗಳು ನಡೆದಿದ್ದು, ಇಂಥವುಗಳನ್ನು ನಿಲ್ಲಿಸಲು ಇಂಥ ವಿಶಿಷ್ಟ ಸಂಪ್ರದಾಯಕ್ಕೆ ಚಾಲನೆ ನೀಡಲಾಗಿದೆ. ಮಹಾಕುಂಭ-2025ಕ್ಕೆ ಮೊದಲು ಪರಿಶಿಷ್ಟ ಜಾತಿಯ ಧರ್ಮಗುರುಗಳಿಗೆ ಜಗದ್ಗುರು, ಮಹಾಮಂಡಲೇಶ್ವರ ಮತ್ತು ಶ್ರೀ ಮಹಾಂತರಂತಹ ಪ್ರಮುಖ ಬಿರುದುಗಳನ್ನು ನೀಡಲಾಗುತ್ತದೆ’ ಎಂದು ಹೇಳಿದರು.