ಜಾತ್ಯತೀತ ನಾಗರಿಕ ಸಂಹಿತೆ ಬಗ್ಗೆ ಮತ್ತೆ ಪ್ರಧಾನಿ ಪ್ರಸ್ತಾಪ : ಏಕರೂಪ ನಾಗರಿಕ ಸಂಹಿತೆ ಜಾರಿಗೆ ಪರೋಕ್ಷ ಆಗ್ರಹ

KannadaprabhaNewsNetwork |  
Published : Aug 26, 2024, 01:39 AM ISTUpdated : Aug 26, 2024, 04:29 AM IST
Narendra Modi addressed Indian diaspora in Poland

ಸಾರಾಂಶ

‘ದಶಕದಿಂದಲೇ ನ್ಯಾಯಾಲಯಗಳು ಜಾತ್ಯತೀತ ನಾಗರಿಕ ಸಂಹಿತೆಯನ್ನು ಪ್ರತಿಪಾದನೆ ಮಾಡಿಕೊಂಡು ಬಂದಿವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

  ಜೈಪುರ : ‘ದಶಕದಿಂದಲೇ ನ್ಯಾಯಾಲಯಗಳು ಜಾತ್ಯತೀತ ನಾಗರಿಕ ಸಂಹಿತೆಯನ್ನು ಪ್ರತಿಪಾದನೆ ಮಾಡಿಕೊಂಡು ಬಂದಿವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಮೂಲಕ ಹಾಲಿ ಇರುವ ವಿವಿಧ ಧರ್ಮಗಳ ನಾಗರಿಕ ಸಂಹಿತೆ ಬದಲು ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬರಬೇಕೆಂದು ಪರೋಕ್ಷ ಆಗ್ರಹ ಮಾಡಿದ್ದಾರೆ.

ಜೋಧಪುರದಲ್ಲಿ ಭಾನುವಾರ ಸಂಜೆ ರಾಜಸ್ಥಾನ ಹೈಕೋರ್ಟ್‌ನ ಪ್ಲಾಟಿನಂ ಜುಬಿಲಿ ಆಚರಣೆಯಲ್ಲಿ ಮಾತನಾಡಿದ ಮೋದಿ, ‘ಜಾತ್ಯತೀತ ನಾಗರಿಕ ಸಂಹಿತೆ’ ಕುರಿತು ತಮ್ಮ ಸ್ವಾತಂತ್ರ್ಯ ದಿನಾಚರಣೆಯ ಹೇಳಿಕೆಯನ್ನು ಉಲ್ಲೇಖಿಸಿದರು ಮತ್ತು ನ್ಯಾಯಾಂಗವು ದಶಕಗಳಿಂದ ಇದನ್ನು ಪ್ರತಿಪಾದಿಸುತ್ತಿದೆ ಎಂದು ಹೇಳಿದರು.

ಇನ್ನು ನ್ಯಾಯಾಂಗದ ಬಗ್ಗೆ ಮಾತನಾಡಿದ ಮೋದಿ, ‘ದೇಶವು ಅಭಿವೃದ್ಧಿ ಹೊಂದಿದ ಭಾರತದ ಕನಸಿನತ್ತ ಸಾಗುತ್ತಿರುವಾಗ ಎಲ್ಲರಿಗೂ ಸರಳ, ಸುಲಭ ಮತ್ತು ಕೈಗೆಟಕಬಹುದಾದ ನ್ಯಾಯದ ಖಾತರಿ ಸಿಗಬೇಕು. ಇಂದು ಜನರ ಕನಸುಗಳು, ಅವರ ಆಕಾಂಕ್ಷೆಗಳು ದೊಡ್ಡದಾಗಿವೆ. ಆದ್ದರಿಂದ ನಮ್ಮ ವ್ಯವಸ್ಥೆಗಳನ್ನು ಆಧುನೀಕರಿಸುವುದು ಮುಖ್ಯ. ಎಲ್ಲರಿಗೂ ನ್ಯಾಯ ದೊರಕುವಂತಾಗಲು ವ್ಯವಸ್ಥೆಯ ನಾವೀನ್ಯತೆ ಮತ್ತು ಆಧುನೀಕರಣವು ಸಮಾನವಾಗಿ ಮುಖ್ಯವಾಗಿದೆ’ ಎಂದು ಪ್ರತಿಪಾದಿಸಿದರು.

ಇತ್ತೀಚೆಗೆ ಸ್ವಾತಂತ್ರ್ಯ ದಿನದ ವೇಳೆ ಮೋದಿ, ಹಾಲಿ ಇರುವ ‘ಕೋಮುವಾದಿ ನಾಗರಿಕ ಸಂಹಿತೆ’ ಬದಲು ‘ಜಾತ್ಯತೀತ ನಾಗರಿಕ ಸಂಹಿತೆ’ ಜಾರಿಗೆ ಬರಬೇಕು. ಇದರಿಂದ ಸಮಾನತೆ ಸಾಧ್ಯವಾಗಲಿದೆ ಎಂದು ಕರೆ ನೀಡಿದ್ದರು. ಅವರ ಹೇಳಿಕೆಯು ಪರ-ವಿರೋಧ ಚರ್ಚೆಗೆ ಗ್ರಾಸವಾಗಿತ್ತು.

==

ಕುಟುಂಬ ರಾಜಕೀಯಕ್ಕೆ ಮತ್ತೆ ಮೋದಿ ಚಾಟಿ

ನವದೆಹಲಿ :‘ವಿಕಸಿತ ಭಾರತದ ಕನಸು ನನಸಾಗಲು, ರಾಜಕೀಯ ಹಿನ್ನೆಲೆ ಇಲ್ಲದ ಯುವಸಮೂಹ ರಾಜಕೀಯ ಪ್ರವೇಶ ಮಾಡುವುದು ಅಗತ್ಯ’ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದು, ಕುಟುಂಬ ರಾಜಕಾರಣಕ್ಕೆ ಮತ್ತೆ ಪರೋಕ್ಷ ಚಾಟಿ ಬೀಸಿದ್ದಾರೆ. ಜೊತೆಗೆ, ’ದೇಶದ ಸ್ವಾಂತಂತ್ರ್ಯ ಸಂಗ್ರಾಮದ ವೇಳೆ ಯುವಸಮೂಹ ತೋರಿಸಿದ್ದ ಸ್ಫೂರ್ತಿಯ ಅಗತ್ಯ ಇದೀಗ ಮತ್ತೊಮ್ಮೆ ಎದುರಾಗಿದೆ’ ಎಂದು ಪ್ರತಿಪಾದಿಸಿದ್ದಾರೆ.

ತಮ್ಮ ಮಾಸಿಕ ‘ಮನ್‌ ಕೀ ಬಾತ್‌’ ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ‘ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದ ಕನಿಷ್ಠ 1 ಲಕ್ಷ ಯುವಸಮೂಹ ರಾಜಕೀಯ ಪ್ರವೇಶ ಮಾಡಬೇಕು ಎಂದು ನಾನು ಸ್ವಾತಂತ್ರ್ಯ ದಿನಾಚರಣೆ ದಿನದಂದು ನೀಡಿದ್ದ ಕರೆಗೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ವೇಳೆ ಕುಟುಂಬ ರಾಜಕೀಯ, ಹೊಸ ಪ್ರತಿಭೆಗಳನ್ನು ಹೊಸಕಿ ಹಾಕುತ್ತಿದೆ ಎಂಬ ಅಭಿಮತವನ್ನು ಬಹುತೇಕರು ವ್ಯಕ್ತಪಡಿಸಿದ್ದಾರೆ’ ಎಂದು ಹೇಳಿದರು.ಈ ವಿಷಯದ ಕುರಿತು ನಾನು ದೇಶದೆಲ್ಲೆಡೆಯಿಂದ ಪತ್ರಗಳನ್ನು ಸ್ವೀಕರಿಸಿದ್ದೇನೆ. ಜಾಲತಾಣಗಳಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಹುತೇಕರು, ತಮ್ಮ ಕುಟುಂಬದ ಯಾರೂ ರಾಜಕೀಯದಲ್ಲಿ ಇಲ್ಲದ ಹೊರತೂ ನಾವು ರಾಜಕೀಯ ಪ್ರವೇಶ ಮಾಡುವುದು ಸಾಧ್ಯವೇ ಇಲ್ಲ ಎಂದು ಬೇಸರದಿಂದ ಹೇಳಿದ್ದಾರೆ. ಇನ್ನು ಕೆಲವರು ನಾವು ತಳಮಟ್ಟದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಜನರ ಸಮಸ್ಯೆ ಬಗೆಹರಿಸುವ ಸಾಮರ್ಥ್ಯ ಹೊಂದಿರುವುದಾಗಿ ಹೇಳಿದ್ದಾರೆ. ಇದು ಅವರೆಲ್ಲಾ ಸೂಕ್ತ ಅವಕಾಶ ಮತ್ತು ಮಾರ್ಗದರ್ಶನಕ್ಕೆ ಕಾಯುತ್ತಿದ್ದಾರೆ’ ಎಂಬುದನ್ನು ತೋರಿಸುತ್ತದೆ’ ಎಂದರು.

ಇದನ್ನೆಲ್ಲಾ ನೋಡಿದರೆ ಈ ವಿಷಯದಲ್ಲಿ ಸಾಮೂಹಿಕ ಪ್ರಯತ್ನವು, ರಾಜಕೀಯ ಹಿನ್ನೆಲೆ ಹೊಂದಿಲ್ಲದ ವ್ಯಕ್ತಿಗಳು ಕೂಡಾ ರಾಜಕೀಯದಲ್ಲಿ ಮುಂದೆ ಬರಲು ಸಾಧ್ಯವಿದೆ ಎಂಬುದನ್ನು ತೋರಿಸುತ್ತಿದೆ. ಅವರ ಅನುಭವ ಮತ್ತು ಉತ್ಸಾಹ ದೇಶಕ್ಕೆ ಲಾಭದಾಯಕವಾಗಿದೆ ಎಂಬುದನ್ನು ಸೂಚಿಸುತ್ತದೆ ಎಂದು ಮೋದಿ ಹೇಳಿದರು.‘ಈ ಕಾರಣಕ್ಕಾಗಿಯೇ ದೇಶದ ಯುವಸಮೂಹವನ್ನು ಧನಾತ್ಮಕ ಚಿಂತನೆಯೊಂದಿಗೆ ರಾಜಕೀಯ ಪ್ರವೇಶಿಸಿ ಎಂದು ಕೇಳಿಕೊಳ್ಳುತ್ತೇನೆ. ನಿಮ್ಮ ಈ ಹೆಜ್ಜೆ ನಿಮ್ಮ ಮತ್ತು ದೇಶದ ಭವಿಷ್ಯದಲ್ಲಿ ಹೊಸ ಬದಲಾವಣೆಗೆ ಕಾರಣವಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ನ್ಯಾಷನಲ್‌ ಹೆರಾಲ್ಡ್‌ ಕೇಸ್‌: ರಾಗಾ, ಸೋನಿಯಾಗೆ ಭಾಗಶಃ ರಿಲೀಫ್‌
ಗೋವಾ ನೈಟ್‌ಕ್ಲಬ್‌ ಮಾಲೀಕರು ಭಾರತಕ್ಕೆ ಗಡೀಪಾರು