ಶ್ವಾಸಕೋಶದ ಸೋಂಕಿನಿಂದ ಬಳಲಿದ್ದ ಎಸ್ಎಂಕೆ

KannadaprabhaNewsNetwork |  
Published : Dec 11, 2024, 12:47 AM IST
ಮಣಿಪಾಲ | Kannada Prabha

ಸಾರಾಂಶ

ಅರವತ್ತರ ನಂತರವೂ ಯುವಕರಂತೆ ಉತ್ಸಾಹದಿಂದ ಟೆನಿಸ್‌ ಆಡಿಕೊಂಡು ಫಿಟ್ನೆಸ್ ಕಾಪಾಡಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರು ಶ್ವಾಸಕೋಶದ ಸೋಂಕಿನ ಕಾರಣ ತಮ್ಮ ಕೊನೆಯ ಮೂರ್ನಾಲ್ಕು ತಿಂಗಳುಗಳನ್ನು ಆಸ್ಪತ್ರೆಯ ಬೆಡ್‌ನಲ್ಲಿ ಕಳೆದಿದ್ದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಅರವತ್ತರ ನಂತರವೂ ಯುವಕರಂತೆ ಉತ್ಸಾಹದಿಂದ ಟೆನಿಸ್‌ ಆಡಿಕೊಂಡು ಫಿಟ್ನೆಸ್ ಕಾಪಾಡಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರು ಶ್ವಾಸಕೋಶದ ಸೋಂಕಿನ ಕಾರಣ ತಮ್ಮ ಕೊನೆಯ ಮೂರ್ನಾಲ್ಕು ತಿಂಗಳುಗಳನ್ನು ಆಸ್ಪತ್ರೆಯ ಬೆಡ್‌ನಲ್ಲಿ ಕಳೆದಿದ್ದರು.

ಕೆಲ ಕಾಲದ ಹಿಂದೆ ಅವರ ಹೃದಯದಲ್ಲಿ ಸಣ್ಣ ಸಮಸ್ಯೆ ಕಾಣಿಸಿಕೊಂಡಿತ್ತು. ಅದರಿಂದ ಶ್ವಾಸಕೋಶ ಸೋಂಕು ಉಂಟಾಗಿದ್ದ ಕಾರಣ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದಿದ್ದ ಅವರು, ನಂತರ ಮಣಿಪಾಲ್ ಆಸ್ಪತ್ರೆಗೆ ತೆರಳಿದ್ದರು. ಚಿಕಿತ್ಸೆ ಆರಂಭಿಸಿದಾಗ ಮೂರ್ನಾಲ್ಕು ತಿಂಗಳು ಆಸ್ಪತ್ರೆಯಲ್ಲಿರಬೇಕಾಯಿತು. ಈ ಅವಧಿಯಲ್ಲಿ ಅವರು ಸಹಜವಾಗಿಯೇ ಇರುತ್ತಿದ್ದರು. ಟೆನಿಸ್ ನೋಡುತ್ತಿದ್ದರು. ವಿಂಬಲ್ಡನ್ ಪಂದ್ಯಗಳು ಇದ್ದಾಗ ಆ ಸಮಯಕ್ಕೆ ಸರಿಯಾಗಿ ಎದ್ದು ಮ್ಯಾಚ್ ನೋಡುತ್ತಿದ್ದರು. ಅದರ ಸಂತೋಷವನ್ನು ವೈದ್ಯಕೀಯ ತಂಡದೊಂದಿಗೆ ಹಂಚಿಕೊಳ್ಳುತ್ತಿದ್ದರು.

ಕೃಷ್ಣ ಅವರ ಆರೋಗ್ಯ ಮತ್ತು ಚಿಕಿತ್ಸೆ ಕುರಿತು ಮಾತನಾಡಿರುವ ಮಣಿಪಾಲ್ ಆಸ್ಪತ್ರೆಯ ತಜ್ಞ ವೈದ್ಯ ಡಾ. ಸತ್ಯನಾರಾಯಣ, ಕೃಷ್ಣ ಅವರಿಗೆ ಹೋರಾಟದ ಮನೋಭಾವ ಇತ್ತು. 70ನೇ ವಯಸ್ಸಿನವರೆಗೂ ಅವರು ಟೆನ್ನಿಸ್ ಆಡಿಕೊಂಡು ಸಕ್ರಿಯವಾಗಿದ್ದ ಕಾರಣ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದರು. ಅವರ ಪ್ರತಿ ಮಾತಿನಲ್ಲಿ ತೂಕ ಇರುತ್ತಿತ್ತು. ಶಿಸ್ತಿನೊಂದಿಗೆ ಜೀವನಶೈಲಿ ಚೆನ್ನಾಗಿತ್ತು. ವಿಶೇಷ ಆಹಾರ ಕೇಳುತ್ತಿರಲಿಲ್ಲ. ಬದಲಿಗೆ ಮನೆ ಊಟ ಅಥವಾ ಆಸ್ಪತ್ರೆಯಲ್ಲಿ ಒದಗಿಸುವ ಊಟವನ್ನೇ ಸೇವಿಸುತ್ತಿದ್ದರು. ಆಸ್ಪತ್ರೆಯ ಎಲ್ಲಾ ಸಿಬ್ಬಂದಿಯೊಂದಿಗೆ ಉತ್ತಮ ಸ್ನೇಹ ಹೊಂದಿದ್ದರು. ನಾವು ಕೂಡ ಅವರನ್ನು ಬರೀ ರೋಗಿ ಎಂದು ನೋಡಲಿಲ್ಲ. ಅವರು ಕೂಡ ವೈದ್ಯರನ್ನು ಬರೀ ವೈದ್ಯರೆಂದು ಕಾಣಲಿಲ್ಲ. ನಮ್ಮ ನಡುವೆ ಒಲವಿನ ಗೆಳೆತನ ಇತ್ತು ಎಂದು ಡಾ.ಸತ್ಯನಾರಾಯಣ ತಿಳಿಸಿದರು.

ವಯಸ್ಸಾದಂತೆ ಮನುಷ್ಯನಿಗೆ ಸಹಜವಾಗಿ ಬಲಹೀನತೆ ಕಾಣಿಸಿಕೊಳ್ಳುತ್ತದೆ. ವೇಗ ಮತ್ತು ರೋಗ ನಿರೋಧಕ ಶಕ್ತಿ ಕಡಿಮೆ ಆಗುತ್ತದೆ. ಅದರಂತೆ ಅವರು ಕೂಡ ವಯೋಸಹಜ ಆರೋಗ್ಯ ಸಮಸ್ಯೆಗೆ ತುತ್ತಾಗಿದ್ದರು. ಚಿಕಿತ್ಸೆ ಪಡೆದು ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಂಡ ಬಳಿಕ ಮನೆಗೆ ಮರಳಿದ್ದರು. ಆಗಾಗ ತಪಾಸಣೆಗೆ ಆಸ್ಪತ್ರೆಗೆ ಬರುತ್ತಿದ್ದರು. ಕುಟುಂಬದೊಂದಿಗೆ ಕಾಲ ಕಳೆಯಬೇಕು ಎಂದು ಬಯಸುತ್ತಿದ್ದರು. ಕೊನೆಯ ಕ್ಷಣದಲ್ಲಿ ಯಾವುದೇ ಗಂಭೀರ ಆರೋಗ್ಯ ಸಮಸ್ಯೆಗೆ ತುತ್ತಾಗದೆ ಸಹಜವಾಗಿಯೇ ಕೊನೆಯುಸಿರೆಳೆದಿದ್ದಾರೆ ಎಂದು ಹೇಳಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಬಂಗಾಳದಲ್ಲಿ ಶೀಘ್ರ ಜಂಗಲ್‌ ರಾಜ್ಯ ಅಂತ್ಯ : ಮೋದಿ ಪಣ
ಈಗ ತೆಲಂಗಾಣದಲ್ಲೂ ದ್ವೇಷ ಭಾಷಣ ನಿಷೇಧ ಕಾಯ್ದೆ: ರೆಡ್ಡಿ